ಬೆಂಗಳೂರು, ಜು. ೬- ಮನೆಗಳ ಮೇಲ್ಛಾವಣಿ ಬಳಸಿ ವಿದ್ಯುತ್ ಉತ್ಪಾದಿಸುವ ಯೋಜನೆಯಲ್ಲಿ ಅಕ್ರಮ ಎಸಗಿರುವ 9 ಮಂದಿ ಕಾರ್ಯನಿರ್ವಾಹಕ ಇಂಜಿನಿಯರ್‌ಗಳನ್ನು ಅಮಾನತ್ತು ಮಾಡಲಾಗಿದೆ. ಈ ಮೇಲ್ಛಾವಣಿ ವಿದ್ಯುತ್ ಉತ್ಪಾದನೆ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಕಟ್ಟಡ, ಜಾಗ ಇಲ್ಲದಿದ್ದರೂ ವಿದ್ಯುತ್ ಖರೀದಿಗೆ ಈ ಇಂಜಿನಿಯರ್‌ಗಳು ಒಪ್ಪಂದ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಯೋಜನೆಯನ್ನು ಉತ್ತೇಜನಗೊಳಿಸಲು ತಾವು ಸಚಿವರಾದ ಮೇಲೆ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ಯೂನಿಟ್ ವಿದ್ಯುತ್‌ನ್ನು 9 ರೂ. 58 ಪೈಸೆಯಂತೆ ಖರೀದಿ ಮಾಡಲು ಮೇ 2016ರ ವರೆಗೂ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಒಪ್ಪಂದದ ಅವಧಿ ಮುಗಿದಿದ್ದರೂ ಅವಧಿಗೆ ಮೊದಲೇ ತರಾತುರಿಯಲ್ಲಿ ಸ್ವಂತ ಕಟ್ಟಡ, ಜಾಗ ಇಲ್ಲದಿದ್ದರೂ ವಿದ್ಯುತ್ ಖರೀದಿ ಒಪ್ಪಂದಗಳು ಮಾಡಿಕೊಂಡು ಅಕ್ರಮ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಎಲ್ಲಾ ಖರೀದಿ ಒಪ್ಪಂದಗಳನ್ನು ರದ್ದುಗೊಳಿಸಿರುವುದಾಗಿ ಅವರು ಹೇಳಿದರು.
ಇದುವರೆಗೂ ಈ ಯೋಜನೆಯಲ್ಲಿ 5,631 ಅರ್ಜಿಗಳು ಬಂದಿದ್ದು, ಈ ಪೈಕಿ 3,694 ಖರೀದಿ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಈ ಒಪ್ಪಂದಗಳಲ್ಲಿ ಶೇಕಡ 90 ರಷ್ಟು ಒಪ್ಪಂದಗಳು ಅಕ್ರಮ ಹಾಗೂ ನಿಯಮ ಉಲ್ಲಂಘಿಸಿರುವ ಅನುಮಾನಗಳಿವೆ. ಹಾಗಾಗಿ ಇಂತಹ ಒಪ್ಪಂದಗಳನ್ನು ರದ್ದುಮಾಡುವ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.
ಈ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ದಯೆ, ದಾಕ್ಷಿಣ್ಯವಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಸಚಿವ ಡಿ.ಕೆ. ಶಿವಕುಮಾರ್ ಮೊದಲ ಹಂತದಲ್ಲಿ 9 ಮಂದಿ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗಳನ್ನು ಅಮಾನತ್ತು ಮಾಡಲಾಗಿದ್ದು, ಇನ್ನು 10ಕ್ಕೂ ಹೆಚ್ಚು ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಇತರ ಅಧಿಕಾರಿಗಳು ಸಸ್ಪೆಂಡ್ ಆಗಲಿದ್ದಾರೆ ಎಂದು ಅವರು ಹೇಳಿದರು.
ಈ ಅಕ್ರಮಗಳನ್ನು ಪತ್ತೆ ಹಚ್ಚಲು ಮುಖ್ಯ ಇಂಜಿನಿಯರ್‌ಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮೈಸೂರು ವಿಭಾಗ ಹೀಗೆ ಮೂರು ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿ ವರದಿ ಬಂದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸಸ್ಪೆಂಡ್ ಆದ ಕಾರ್ಯನಿರ್ವಾಹಕ ಅಭಿಯಂತರುಗಳು
ಎಂ.ಆರ್ ರಮೇಶ್ -ಚಿಕ್ಕಬಳ್ಳಾಪುರ
ಕೆ.ಎನ್ ಲೋಕೇಶ್ -ಕೆಜಿಎಫ್
ಡಿ.ವಿ ಜಗದೀಶ್ -ಹಿರಿಯೂರು
ಕೆ.ಎಸ್ ಗುರುಸ್ವಾಮಿ -ಮಧುಗಿರಿ
ಎಚ್. ಕೃಷ್ಣಪ್ಪ -ಹಾವೇರಿ
ಶಿವಣ್ಣ ಗೌಡ ಆರ್. ಪಾಟೀಲ್ -ಬಾಗಲಕೋಟೆ
ಪಿ.ಎಚ್ ಉಮೇಶ್ -ಗದಗ
ಡಿ. ಮಹೇಶ್ -ಕೊಪ್ಪಳ
ಬಸಪ್ಪ ಕೆ. ಪಟ್ಟಣಶೆಟ್ಟಿ -ಸಿಂಧನೂರು
ಮೇಲ್ಛಾವಣಿ ವಿದ್ಯುತ್ ಯೋಜನೆಯಡಿ 500 ಕಿಲೋವ್ಯಾಟ್ಸ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವವರಿಗೆ ವಿದ್ಯುತ್ ದರವನ್ನು 7 ರೂ. 8 ಪೈಸೆಯಿಂದ 5 ರೂ. 20 ಪೈಸೆಗೆ ನಿಗದಿ ಮಾಡಲಾಗಿದೆ. ಈ ವಿದ್ಯುತ್ ಖರೀದಿ ಒಪ್ಪಂದಗಳಲ್ಲಿ 499 ಕಿಲೋವ್ಯಾಟ್ಸ್ ಎಂದು ವಿಭಜಿಸಿ ಒಬ್ಬೊಬ್ಬರು 20 ರಿಂದ 30 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಿಕೊಂಡು ಅಕ್ರಮಗಳನ್ನು ಎಸಗಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು
ಈ ಎಲ್ಲ ಅಕ್ರಮಗಳ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆಯೇ ಎಚ್ಚೆತ್ತು ಈ ವಿದ್ಯುತ್ ಒಪ್ಪಂದಗಳನ್ನು ರದ್ದು ಮಾಡುವ ತೀರ್ಮಾನಕ್ಕೆ ಬರಲಾಯಿತು. ಸಂಪೂರ್ಣ ತನಿಖೆಯ ನಂತರ ಈ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
Comments are closed.