ಬೆಂಗಳೂರು, ಜು.6 ಸಂಪುಟ ಪುನಾರಚನೆ ಬಳಿಕ ನಡೆದ ಅತೃಪ್ತರ ಭಿನ್ನಮತೀಯ ಚಟುವಟಿಕೆ, ನಾಯಕತ್ವ ಬದಲಾವಣೆ ಕೂಗು, ಹೀಗೆ ಗದ್ದಲದಿಂದ ಬಸವಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನಗರದ ಜನಾರ್ದನ ಹೋಟೆಲ್‍ಗೆ ತೆರಳಿ ಉಪಾಹಾರ ಸೇವಿಸಿದರು.
ಸಿಎಂ ಸಿದ್ದರಾಮಯ್ಯಗೆ ದಿನೇಶ್ ಗುಂಡೂರಾವ್, ಹೆಚ್.ಸಿ. ಮಹದೇವಪ್ಪ, ಸಂಸದ ಚಂದ್ರಪ್ಪ ಸಾಥ್ ನೀಡಿದರು.
ವಿಧಾನಸೌಧದಲ್ಲಿ ಬಾಬು ಜಗಜೀವನ್ ರಾಮ್ ಜನ್ಮದಿನಾಚರಣೆ ಕಾರ್ಯಕ್ರಮದ ಬಳಿಕ ಸಿಎಂ ಸಿದ್ದರಾಮಯ್ಯ ನೇರವಾಗಿ ಶಿವಾನಂದ ವೃತ್ತದ ಸಮೀಪದ ಜನಾರ್ದನ ಹೋಟೆಲ್‍ಗೆ ಭೇಟಿ ನೀಡಿದರು. ರುಚಿ ರುಚಿಯಾದ ಮಸಾಲೆ ದೋಸೆಯ ಹಾಟ್‍ಸ್ಪಾಟ್ ಎಂದೇ ಕರೆಸಿಕೊಳ್ಳುವ ಜನಾರ್ದನ್ ಹೋಟೆಲ್‍ನಲ್ಲಿ ಬೆಣ್ಣೆ ಮಸಾಲೆ ದೋಸೆಯನ್ನು ತಿಂದರು. ಇಡ್ಲಿ, ವಡೆ ರುಚಿ ನೋಡಿದರು. ನಂತರ ಬಿಸಿ ಬಿಸಿ ಚಹಾ ಹೀರುತ್ತಾ ಆಪ್ತರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.
ಈ ಹಿಂದೆ ಲಾಲ್‍ಬಾಗ್ ಸಮೀಪದಲ್ಲಿನ ಎಂಟಿಆರ್ ಹೋಟೆಲ್‍ಗೆ ಭೇಟಿ ನೀಡಿ ದೋಸೆ ತಿಂದಿದ್ದ ಸಿಎಂ ಇಂದು ಜನಾರ್ದನ ಹೋಟೆಲ್‍ನಲ್ಲಿ ಉಪಹಾರ ಸೇವಿಸಿದರು.
ದೋಸೆ ಸವಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಲ್ಲಿ ದೋಸೆ ರುಚಿ ಚೆನ್ನಾಗಿದೆ. ಆಗಾಗ ಬರುತ್ತಿರುತ್ತೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಖಾತೆ ಬದಲಾವಣೆ
ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸದಾನಂದ ಗೌಡ ಅವರು ಸೇರಿದಂತೆ ಬಿಜೆಪಿಯಲ್ಲಿರುವವರೆಲ್ಲರೂ ಅದಕ್ಷರೇ ಆಗಿದ್ದಾರೆ. ಗೌಡರು ಅದಕ್ಷರಾಗಿರುವುದರಿಂದ ಅವರಿಗೆ ಕಳಪೆ ಖಾತೆ ಕೊಟ್ಟಿದ್ದಾರೆ. ಈ ಹಿಂದೆ ಅವರು ರೈಲ್ವೆ ಸಚಿವರಾಗಿದ್ದರು. ಅಲ್ಲಿಂದ ತೆಗೆದು ಅವರನ್ನು ಕಾನೂನು ಇಲಾಖೆಗೆ ವರ್ಗಾಯಿಸಲಾಯಿತು. ಇದೀಗ ಅವರಿಗೆ ಮಹತ್ವವಲ್ಲದ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Comments are closed.