ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಪ್ರತ್ಯೇಕ ಸ್ಮಶಾನ ನಿರ್ಮಿಸುವ ಸರಕಾರದ ಯೋಜನೆಗೆ ಕಾಂಗ್ರೆಸ್ ಸದಸ್ಯ ವಿ.ಎಸ್ ಉಗ್ರಪ್ಪ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮೋಟಮ್ಮ ಅವರ ಪ್ರಶ್ನೆಗೆ ಸಚಿವ ಆಂಜನೇಯ ಅವರು ಉತ್ತರಿಸುವ ವೇಳೆ, ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಪ್ರತ್ಯೇಕ ಸ್ಮಶಾನ ನಿರ್ಮಿಸುವ ಯೋಜನೆಯನ್ನು ಪ್ರಸ್ತಾಪಿಸಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಉಗ್ರಪ್ಪ, ಸರಕಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಲ್ಲ. ಇದು ಸಂವಿಧಾನಬಾಹಿರ, ಸ್ಮಶಾನದಲ್ಲೂ ಜಾತಿ ತರುವ ಕೆಲಸ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಆಂಜನೇಯ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಜಾತಿಯವರ ಸ್ಮಶಾನದಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇದಕ್ಕಾಗಿ ಸರಕಾರ ದಲಿತರಿಗಾಗಿಯೇ ಪ್ರತ್ಯೇಕ ಸ್ಮಶಾನ ನಿರ್ಮಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಸಮರ್ಥಿಸಿಕೊಂಡರು.
ಆಂಜನೇಯ ಅವರ ಉತ್ತರದಿಂದ ಇನ್ನಷ್ಟು ಕೆರಳಿದ ಉಗ್ರಪ್ಪ ಸತ್ತ ನಂತರವೂ ಜಾತಿಯ ಆಚರಣೆ ಮಾಡುವ ಕೆಲಸಕ್ಕೆ ಸರಕಾರವೇ ಬೆಂಬಲ ನೀಡಬಾರದು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎದ್ದುನಿಂತ ಬಿಜೆಪಿ ಸದಸ್ಯ ಡಿ.ಎಸ್ ವೀರಯ್ಯ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡು, ಆಂಜನೇಯ ಅವರ ಪರ ವಹಿಸಿಕೊಂಡು ಮಾತನಾಡಿದರು. ಉಗ್ರಪ್ಪ ಅವರು ವಾಸ್ತವ ವಿಚಾರ ತಿಳಿಯದೇ ಎಲ್ಲದಕ್ಕೂ ಕಾನೂನು, ಸಂವಿಧಾನ ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿದರು. ಬಿಜೆಪಿ ಸದಸ್ಯ ಕೆ.ಬಿ ಶಾಣಪ್ಪ, ಅರುಣ್ ಶಹಾಪುರ ಕೂಡ ಆಂಜನೇಯ ಅವರನ್ನು ಬೆಂಬಲಿಸಿ, ಸರಕಾರದ ಬಜೆಟ್ ಕಾರ್ಯಕ್ರಮವನ್ನೇ ವಿರೋಧಿಸುತ್ತಿರುವ ಉಗ್ರಪ್ಪ ಅವರನ್ನು ಪ್ರಶ್ನಿಸಿದ್ದಾರೆ.
Comments are closed.