ಬೆಂಗಳೂರು, ಜು. ೪- ದೇಶದಲ್ಲೇ ಪ್ರಪ್ರಥಮ ನೂರಕ್ಕೆ ನೂರರಷ್ಟು ಬಯೋ ಡೀಸೆಲ್ ಆಧಾರಿತ ಬಸ್ಸನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಂದು ಸಾರ್ವಜನಿಕ ಬಳಕೆಗೆ ಸಮರ್ಪಿಸಿದೆ.
ಸಂಪೂರ್ಣವಾಗಿ ಬಯೋ ಡೀಸೆಲನ್ನೇ ಬಳಸಿಕೊಂಡು ಈ ಸಾರಿಗೆ ಬಸ್ ಬೆಂಗಳೂರು- ಚೆನ್ನೈ ಮಾರ್ಗವಾಗಿ ಪ್ರತಿದಿನ ಸಂಚರಿಸಲಿದೆ. ಶೇ. 20 ರಷ್ಟು ಬಯೋ ಡೀಸೆಲ್ ಮತ್ತು ಶೇ. 80 ರಷ್ಟು ಪೆಟ್ರೋಲ್ ನ್ನು ಬಳಸಿಕೊಂಡು ಡಿ- 20 ಬಸ್‌ಗಳು ಸಂಚರಿಸುತ್ತಿದ್ದು, ಇದೀಗ ಮೊದಲ ಬಾರಿಗೆ 100 ರಷ್ಟು ಬಯೋ ಡೀಸೆಲ್ ಬಸ್ಸನ್ನು ನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಆವರಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಉದ್ಘಾಟಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು- ಚೆನ್ನೈ ಮಾರ್ಗವಾಗಿ ಸಂಚರಿಸಲಿದೆ. ಇದು ಯಶಸ್ವಿಯಾದಲ್ಲಿ ಸಂಪೂರ್ಣ ಬಯೋ ಡೀಸೆಲ್ ಇರುವ ಬಸ್‌ಗಳನ್ನು ಓಡಿಸಲಾಗುವುದು ಎಂದು ಅವರು ಹೇಳಿದರು.
ಡೀಸೆಲ್‌ಗೆ ಹೋಲಿಸಿದರೆ ಬಯೋ ಡೀಸೆಲ್ ಲೀಟರ್‌ಗೆ 5 ರೂ. ಕಡಿಮೆಯಾಗಲಿದೆ. ತೆಲಂಗಾಣದ ಕಂಪನಿಯೊಂದರಿಂದ ಬಯೋ ಡೀಸೆಲ್‌ನ್ನು ಖರೀದಿಸಲಾಗುವುದು. ಸದ್ಯದಲ್ಲೇ ಈ ಟೆಂಡರ್ ನ್ನು ಕರೆಯಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಯೋ ಡೀಸೆಲ್ ಘಟಕ ಸ್ಥಾಪನೆ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದ ಅವರು, ಡಿಸೆಂಬರ್ ವೇಳೆಗೆ 6 ಸಾವಿರ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ ಅವರು, ಬಯೋ ಡೀಸೆಲ್ ಬಸ್ಸುಗಳನ್ನು ಹೆಚ್ಚೆಚ್ಚು ಓಡಿಸುವುದರಿಂದ ಪರಿಸರ ಹಾಳಾಗುವುದಿಲ್ಲ. ರೈತರಿಗೂ ಆದಾಯ ತರಲಿದೆ. ವಾರ್ಷಿಕವಾಗಿ 70 ಕೋಟಿ ರೂ. ಉಳಿತಾಯವಾಗಲಿದೆ ಎಂದರು.
ಚಿತ್ರನಟಿ ಹರ್ಷಿತಾ ಪೂಣಚ್ಚ ಹಾಗೂ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.