ಕರ್ನಾಟಕ

ಸಂತ್ರಸ್ತರ ನೆರಳು ಅಧಿವೇಶನದಲ್ಲಿ ಬಂಡಾಯದ ಕಾವು-ಪಕ್ಷಗಳಿಗೆ ಕಹಿ ಬೇವು

Pinterest LinkedIn Tumblr
A VIEW OF ASSEMBBLE
A VIEW OF ASSEMBBLE

ಬೆಂಗಳೂರು, ಜು.4: ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಭುಗಿಲೆದ್ದಿರುವ ಬಂಡಾಯದ ಛಾಯೆ ವಿಧಾನಮಂಡಲದ ಕಲಾಪದ ಮೇಲೆ ದಟ್ಟವಾಗಿ ಮೇಳೆಸಿದ್ದು ಸ್ಟಷ್ಟವಾಗಿ ಗೋಚರಿಸಿತು.

ಅಧಿಕಾರರೂಢ ಕಾಂಗ್ರೆಸ್, ಪ್ರಮುಖ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಈ ಮೂರೂ ಪಕ್ಷಗಳು ಒಡೆದ ಮನೆಯಂತಾಗಿವೆ. ನಾಯಕರ ವಿರುದ್ಧ ಬಹಿರಂಗವಾಗಿಯೇ ಸವಾಲು-ಪ್ರತಿಸವಾಲುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಆರಂಭವಾದ ವಿಧಾನಮಂಡಲದ ಅಧಿವೇಶನದಲ್ಲಿ ಬಂಡಾಯದ ಬಿಸಿ ಗಾಳಿ ಕಲಾಪದ ಮೇಲೆ ಪರಿಣಾಮ ಬೀರಿದ್ದಂತು ದಿಟ.

ಸಚಿವ ಸಂಪುಟ ಪನಾರಚನೆ ವೇಳೆ ಸಚಿವ ಸ್ಥಾನ ತಪ್ಪಿದ್ದರಿಂದ ರಾಜ್ಯ ನಾಯಕ್ವದ ವಿರುದ್ಧ ಅಸಮಾಧಾನಗೊಂಡ ಸಚಿವರು ಮತ್ತು ಶಾಸಕರ ಪೈಕಿ ಕೆಲವರು ಗೈರು ಹಾಜರಾಗಿದ್ದರೆ, ಇನ್ನು ಕೆಲವರು ಕಾಟಾಚಾರಕ್ಕೆ ಹಾಜರಾದಂತೆ ಮುಖ ತೋರಿಸಿ ಹೊರಟುಹೋದರು.

ಸಚಿವ ಸಂಪುಟ ಪುನಾರಚನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಂಡಾಯದ ಬಾವುಟ ಹಾರಿಸಿ ನಾಯಕತ್ವ ಬದಲಾಗಬೇಕು ಎಂದು ಪಟ್ಟು ಹಿಡಿದು ಅವಕಾಶ ಸಿಕ್ಕಾಗಲೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಚಮಾಗೋಚರ ಟೀಕೆ ಮಾಡುತ್ತಿರುವ ಮಾಜಿ ಸಚಿವರಾದ ಶ್ರೀನಿವಾಸಪ್ರಸಾದ್, ಅಂಬರೀಶ್, ಖಮರುಲ್ಲಾ ಇಸ್ಲಾಂ, ಹಿರಿಯ ಶಾಸಕರಾದ ಎಂ. ಕೃಷ್ಣಪ್ಪ, ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಅತೃಪ್ತ ಶಾಸಕರು ಇಂದಿನ ವಿಧಾನಸಭೆಯ ಕಲಾಪದಲ್ಲಿ ಪಾಲ್ಗೊಳ್ಳದೆ ದೂರ ಉಳಿದರು. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಹಿರಿಯ ಶಾಸಕ ಎ.ಬಿ. ಮಾಲಕರೆಡ್ಡಿ ಮಾತ್ರ ಸದನದಲ್ಲಿ ಹಾಜರಿದ್ದರು.

ಬಿಜೆಪಿಯ ಪರಿಸ್ಥಿತಿಯು ಕಾಂಗ್ರೆಸ್‍ಗಿಂತ ಭಿನ್ನವಾಗೇನೂ ಇಲ್ಲ. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಧ್ಯಾಹ್ನದ ವರೆಗೂ ವಿಧಾನಸಭೆಯತ್ತ ಮುಖ ಮಾಡಿರಲಿಲ್ಲ.

ಜೆಡಿಎಸ್ ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿ ಅಮಾನತ್ತಾಗಿರುವ 8 ಶಾಸಕರ ಪೈಕಿ ಚೆಲುವರಾಯಸ್ವಾಮಿ, ಗೋಪಾಲಯ್ಯ, ಅಖಂಡ ಶ್ರೀನಿವಾಸಮೂರ್ತಿ , ಸದನಕ್ಕೆ ಹಾಜರಾಗಿದ್ದು, ಉಳಿದಂತೆ ಜಮೀರ್‍ಅಹಮದ್, ಇಕ್ಬಾಲ್ ಅನ್ಸಾರಿ, ಭೀಮಾನಾಯಕ್, ಬಾಲಕೃಷ್ಣ, ರಮೇಶ್ ಬಂಡೀಸಿದ್ದೇಗೌಡ ಸದನಕ್ಕೆ ಗೈರು ಹಾಜರಾಗಿದ್ದರು.

ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಅವರು ಸಹ ಸದನಕ್ಕೆ ಬಂದಿಲ್ಲ.

ಇಂದಿನಿಂದ ಆರಂಭವಾಗಿರುವ ವಿಧಾನ ಮಂಡಲದ ಅಧಿವೇಶನ ಮಹತ್ವದ ಅಧಿವೇಶನವಾಗಿದ್ದು, ವಿವಿಧ ಇಲಾಖೆಗಳ ಬೇಡಿಕೆ ಮೇಲೆ ಚರ್ಚೆ ನಡೆಸಿ ಪೂರ್ಣ ಪ್ರಮಾಣದ ಬಜೆಟ್‍ಗೆ ಅನುಮೋದನೆ ನೀಡಬೇಕಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಂತರಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಹೆಚ್ಚಿನ ಗಮನ ನೀಡಿವೆ. ಹಾಗಾಗಿ ಈ ವಿಧಾನಸಭೆಯ ಅಧಿವೇಶನ ಕಳೆಗಟ್ಟುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಎಲ್ಲ ರಾಜಕೀಯ ಪಕ್ಷಗಳ ನಾಯಕರು ಹಾಗೂ ಶಾಸಕರ ಸಮನ್ವಯದ ಕೊರತೆಯಿಂದ ಜನಪರ ಸಮಸ್ಯೆಗಳ ಮೇಲೆ ಪರಿಪೂರ್ಣವಾಗಿ ಬೆಳಕು ಚೆಲ್ಲುವ ಕೆಲಸ ಆಗುತ್ತದೆಯೇ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ.

Comments are closed.