ಬೆಂಗಳೂರು, ಜು. ೪- ಇತ್ತೀಚೆಗೆ ನಮ್ಮನ್ನಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಇತ್ತೀಚೆಗೆ ನಿಧನರಾದ ಮಾಜಿ ಸಚಿವರಾದ ಸಿ. ಗುರುನಾಥ್, ಚಂದ್ರಪ್ರಭಾಅರಸ್, ಮಾಜಿ ಶಾಸಕರಾದ ಎಸ್.ಎಸ್. ಮಹಜನಶೆಟ್ಟಿ, ಅಕ್ಕರಕಿ ಯಲ್ಲಪ್ಪ ರಂಗಪ್ಪ, ಎಂ. ಮುನಿಸ್ವಾಮಿ, ಪಿ.ಸಿ. ಮುನಿಸ್ವಾಮಯ್ಯ, ಅನ್ನಪೂರ್ಣಬಾಯಿವೈಜನಾಥಪ್ಪರಗಟೆ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ. ಪುಂಡಲೀಕ ಹಾಲಂಬಿ, ಕನ್ನಡದ ಹಿರಿಯ ಸಾಹಿತಿ ಡಾ. ದೇ. ಜವರೇಗೌಡ ಹಾಗೂ ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು .
ವಿಧಾನಸಭೆ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಉಪಾಧ್ಯಕ್ಷ ಎನ್.ಎಸ್. ಶಿವಶಂಕರರೆಡ್ಡಿ ಸಂತಾಪ ಸೂಚನಾ ನಿರ್ಣಯ ಮಂಡಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರು.
ಸಂತಾಪ ಸೂಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವರು ಹಾಗೂ ಶಾಸಕರು, ಸಾಹಿತಿಗಳು ಮತ್ತು ಪತ್ರಕರ್ತರ ಸಾಧನೆಗಳನ್ನು ಕೊಂಡಾಡಿ, ಗುಣಗಾನ ಮಾಡಿದರು.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಗಣ್ಯರ ಅಗಲಿಕೆ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.
ವಿರೋಧ ಪಕ್ಷದ ನಾಯಕ ಜಗದೀಶ್ಶೆಟ್ಟರ್, ಜೆಡಿಎಸ್ನ ಉಪನಾಯಕ ವೈ.ಎಸ್.ವಿ. ದತ್ತ ಮತ್ತಿತರರು ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಅಗಲಿದ ಗಣ್ಯರ ಗುಣಗಾನ ಮಾಡಿದರಲ್ಲದೆ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಮೇಲ್ಮನೆ ಕಂಬನಿ
ಇತ್ತೀಚೆಗೆ ಅಗಲಿದ ಮಾಜಿ ಸಚಿವರು, ಸಂಸದರು, ಸಾಹಿತಿಗಳು ಸೇರಿದಂತೆ 7 ಮಂದಿಗೆ ವಿಧಾನಪರಿಷತ್ನಲ್ಲಿಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.
ಸಭಾಪತಿ ಡಿ. ಎಚ್. ಶಂಕರಮೂರ್ತಿ ಸಂತಾಪ ಸೂಚಕ ನಿರ್ಣಯ ಮಂಡಿಸಿ, ಇತ್ತೀಚೆಗೆ ನಿಧನರಾದ ಮಾಜಿ ಸಚಿವರಾದ ಚಂದ್ರಪ್ರಭಾ ಅರಸ್, ಸಿ. ಗುರುನಾಥ್, ಮಾಜಿ ವಿಧಾನಪರಿಷತ್ ಸದಸ್ಯರಾದ ಡಿ. ಮರಿಯಪ್ಪ, ಡಿ. ಜಾಜಿಮದ್ದಣ್ಣ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ. ಪುಂಡಲೀಕ ಹಾಲಂಬಿ, ಹಿರಿಯ ಪತ್ರಕರ್ತ ಎಸ್.ವಿ. ಜಯಶೀಲರಾವ್ ಹಾಗೂ ಹಿರಿಯ ಸಾಹಿತಿ ದೇ. ಜವರೇಗೌಡ ಅವರ ನಿಧನಕ್ಕೆ ಕಂಬನಿ ಮಿಡಿದರು.
ಚಂದ್ರಪ್ರಭಾ ಅರಸ್ ಸಚಿವರಾಗಿ, ಸಂಸದರಾಗಿ ಕೆಲಸ ಮಾಡಿದ್ದರು. ಅವರ ನಿಧನದಿಂದ ಹಿರಿಯ ಮಹಿಳಾ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಸಿ. ಗುರುನಾಥ್ ಅವರು ಕಾರ್ಮಿಕ ಸಚಿವರಾಗಿ ಕಾರ್ಮಿಕರ ಹಿತಕ್ಕಾಗಿ ಹೋರಾಡಿದ್ದರು. ಅವರ ನಿಧನ ಕಾರ್ಮಿಕರಿಗೆ ತುಂಬಲಾರದ ನಷ್ಟವಾಗಿದೆ ಎಂದು ಗುಣಗಾನ ಮಾಡಿದರು.
ವಿಧಾನಪರಿಷತ್ನ ಮಾಜಿ ಸದಸ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಿ. ಮರಿಯಪ್ಪ, ವಿಧಾನಪರಿಷತ್ನ ಮಾಜಿ ಸಚಿವೆ ಜಾಜಿ ಮುದ್ದಣ್ಣ ರವರ ನಿಧನ ಸಜ್ಜನ ರಾಜಕಾರಣಿಗಳನ್ನು ಕಳೆದುಕೊಂಡಂತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಡಾ. ಪುಂಡಲಿಂಕ ಹಾಲಂಬಿ ಸಾಹಿತ್ಯ ಪರಿಷತ್ನಲ್ಲಿ ವಿವಿದ ಹುದ್ದೆಗಳನ್ನು ಅಲಂಕರಿಸಿ ಮೂರು ಭಾರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಸಂಘಟಿಸುವಲ್ಲಿ ಶ್ರಮಿಸಿದ್ದರು. ಅದೇ ರೀತಿ ಹಿರಿಯ ಪತ್ರಕರ್ತ ಜಯಶೀಲರಾವ್ ರವರ ನಿಧನದಿಂದ ಕನ್ನಡ ಪತ್ರಿಕೋಧ್ಯಮ ಹಿರಿಯ ದಿಗ್ಗಜನೊಬ್ಬನನ್ನು ಕಳೆದುಕೊಂಡಂತಾಗಿದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರಿಗೆ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು ಎಂದರು
ಹಿರಿಯ ಸಾಹಿತಿ ದೇ.ಜವರೇಗೌಡ ಅವರ ನಿಧನದಿಂದಾಗಿ ಕನ್ನಡ ಸಾರಸ್ವತ ಲೋಕ ದಿಗ್ಗಜ ಸಾಹಿತಿಯೊಬ್ಬರನ್ನು ಕಳೆದುಕೊಂಡಿದೆ ಎಂದ ಗುಣಗಾನ ಮಾಡಿದರು.
ಸಭಾಪತಿಗಳ ಸಂತಾಪಕ್ಕೆ ಸಭಾನಾಯಕ ಡಾ. ಜಿ. ಪರಮೇಶ್ವರ್, ಪ್ರತಿಪಕ್ಷದ ನಾಯಕ ಕೆ. ಎಸ್. ಈಶ್ವರಪ್ಪ, ದ್ವನಿಗೂಡಿಸಿ, ಮೃತರ ಗುಣಗಾನ ಮಾಡಿದರು.
ಬಳಿಕ ಮೃತರ ಗೌರವಾರ್ಥ 1 ನಿಮಿಷ ಮೌನ ಆಚರಿಸಲಾಯಿತು.
Comments are closed.