ಬೆಂಗಳೂರು, ಜು. ೪- ರಾಜ್ಯದ ಕಾವೇರಿ, ತುಂಗಭದ್ರಾ ಹಾಗೂ ಇತರ ನದಿಗಳ ದಂಡೆಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ತಡೆಗಟ್ಟಲು ಹೋದ ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳ ಮೇಲೆ ಮರಳು ದಂಧೆಕೋರರು ಹಲ್ಲೆ ನಡೆಸುತ್ತಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತುಕೊಂಡಿದೆ ಎಂದು ವಿಧಾನ ಪರಿಷತ್ತಿನಲ್ಲಿಂದು ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ನಿಯಮ 59ರ ಅಡಿ ನಿಲುವಳಿ ಸೂಚನೆಯ ಮೇರೆಗೆ ಪ್ರಾಥಮಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟಾಗ ಚರ್ಚೆ ಆರಂಭಿಸಿದ ಅವರು, ಸರ್ಕಾರ ಸ್ಪಷ್ಟ ಮರಳು ನೀತಿ ರೂಪಿಸದೆ ಇರುವುದರಿಂದ ಅಕ್ರಮವಾಗಿ ಪ್ರತಿನಿತ್ಯ ಸಾವಿರಾರು ಲೋಡುಗಳು ಸಾಗಾಣಿಕೆಯಾಗುತ್ತಿವೆ ಎಂದು ಆರೋಪಿಸಿದರು.
ಒಂದೆಡೆ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ಅಕ್ರಮ ಮರಳು ತಡೆಯಲು ಹೋದರೆ ಅವರ ಮೇಲೆ ಮರಳು ದಂಧೆಕೋರರು ಹಲ್ಲೆ ನಡೆಸಿರುವುದಲ್ಲದೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಿದರು.
ಸಚಿವರೊಬ್ಬರ ಪುತ್ರರೊಬ್ಬರು ಭೂ ವಿಜ್ಞಾನಿ ಅಧಿಕಾರಿಯೊಬ್ಬರಿಗೆ 1 ಲಕ್ಷ ರೂ.ಗಳ ಲಂಚ ನೀಡುವ ಆಮಿಷ ಒಡ್ಡಿದ್ದಾರೆ. ಇದನ್ನು ಆ ಅಧಿಕಾರಿಯೇ ನ್ಯಾಯಾಲಯದಲ್ಲಿ ಬಹಿರಂಗಪಡಿಸಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ಇಷ್ಟಕ್ಕೂ ಬಿಡದ ಈಶ್ವರಪ್ಪ, ಮರಳು ದಂಧೆಕೋರರನ್ನು ತಡೆಗಟ್ಟಲು ಹೋದರೆ ಮಂತ್ರಿಗಳು, ಮಂತ್ರಿಗಳ ಮಕ್ಕಳು ನಮ್ಮ ಬೆಂಬಲಕ್ಕಿದ್ದಾರೆ ಎಂದು ಉಡಾಫೆ ಮಾತುಗಳನ್ನಾಡುತ್ತಾರೆ ಎಂದು ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರತ್ತಲೇ ನೋಡುತ್ತಾ ಹೇಳಿದರು.
ನಿಯಮ 68ರ ಅಡಿ ಈ ವಿಷಯವನ್ನು ಸುದೀರ್ಘವಾಗಿ ಪ್ರಸ್ತಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾನಾಯಕ ಡಾ. ಜಿ. ಪರಮೇಶ್ವರ್ ರವರು ಮನವಿ ಮಾಡಿದಾಗ ಸಭಾಪತಿಗಳು ಇದಕ್ಕೆ ಸಮ್ಮತಿಸಿ ಇಂದು ಅಥವಾ ನಾಳೆ ನಡೆಯುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ತೀಮಾನ ಕೈಗೊಳ್ಳುವುದಾಗಿ ಈಶ್ವರಪ್ಪ ಅವರಿಗೆ ಭರವಸೆ ನೀಡಿದರು.
Comments are closed.