ಬೆಂಗಳೂರು, ಜು. ೩ – ಆಂತರಿಕ ಕಚ್ಚಾಟ, ಭಿನ್ನಮತೀಯ ಚಟುವಟಿಕೆಗಳಿಂದಾಗಿ ಒಡೆದ ಮನೆಗಳಂತಾಗಿರುವ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಾಳೆಯಿಂದ ಆರಂಭವಾಗಲಿರುವ ವಿಧಾನ ಮಂಡಲದ ಮುಂದುವರೆದ ಬಜೆಟ್ ಅಧಿವೇಶನದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಲಿದ್ದು, ಕೋಲಾಹಲ ವಾತಾವರಣಕ್ಕೆ ನಾಂದಿಯಾಗುವುದು ನಿಚ್ಚಳವಾಗಿದೆ.
ಸ್ವಪಕ್ಷೀಯರ ಬಂಡಾಯದಿಂದ ಬೇಸತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿವೇಶನದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದು ರಾಜ್ಯ ರಾಜಕಾರಣದಲ್ಲೂ ತೀವ್ರ ಕುತೂಹಲಕ್ಕೆಡೆ ಮಾಡಿದೆ.
ಆಂತರಿಕ ಭಿನ್ನಾಭಿಪ್ರಾಯಗಳಿಂದ ನಲುಗಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗ ಮಾಡಲು ಒಗ್ಗಟ್ಟಿನ ಕೊರತೆ ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕಳೆದುಕೊಂಡು, ಸಿದ್ದರಾಮಯ್ಯ ನಾಯಕತ್ವ ಬದಲಾಗಬೇಕೆಂದು ಬಹಿರಂಗ ಸಮರ ಸಾರಿರುವ ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್, ನಾಳಿನ ಅಧಿವೇಶನದಲ್ಲಿ ಯಾವ ಅವತಾರ ಎತ್ತಲಿದ್ದಾರೆ ಎನ್ನುವುದು ಕಾಂಗ್ರೆಸ್ ವಲಯದಲ್ಲೇ ಚರ್ಚೆಯ ವಸ್ತುವಾಗಿದೆ.
ಸಚಿವ ಸ್ಥಾನ ಕಳೆದುಕೊಂಡು `ರೆಬೆಲ್’ ಆಗಿರುವ ಹಿರಿಯ ಶಾಸಕ ಅಂಬರೀಷ್ ಅವರಿಂದಲೂ ವಾಗ್ಬಾಣಗಳ ಸುರಿಮಳೆಯಾಗುವ ಸಾಧ್ಯತೆಗಳಿವೆ. ಇವರಿಬ್ಬರೂ ನಾಳಿನ ಅಧಿವೇಶನದಲ್ಲಿ ಪಾಲ್ಗೊಂಡರೆ, ಸಿದ್ದರಾಮಯ್ಯ ಮುಜುಗರಕ್ಕೆ ಒಳಗಾಗುವುದು ಖಂಡಿತ.
ಅಧಿಕೃತ ವಿರೋಧ ಪಕ್ಷ ಬಿಜೆಪಿಯಲ್ಲೂ ಬಂಡಾಯದ ಕೂಗು ಎದ್ದಿದ್ದು, ಅದನ್ನು ನಿಭಾಯಿಸಿಕೊಳ್ಳುವತ್ತ ನಾಯಕರು ಗಮನ ಹರಿಸಿದ್ದಾರೆ. ಆದರೆ, ವಿರೋಧ ಪಕ್ಷದ ಜವಾಬ್ದಾರಿಯನ್ನು ಆ ಪಕ್ಷದ ನಾಯಕರು ನಿಭಾಯಿಸಬೇಕಾಗಿದ್ದದು, ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಜೆಡಿಎಸ್ ಶಾಸಕರು, ಅಡ್ಡಮತದಾನ ಮಾಡಿದ್ದು, ಸಸ್ಪೆಂಡ್ ಶಿಕ್ಷೆಗೆ ಗುರಿಯಾಗಿದ್ದಾರೆ. ಸಸ್ಪೆಂಡ್ ಆಗಿರುವ ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಕೆ. ಗೋಪಾಲಯ್ಯ, ರಮೇಶ್ ಬಂಡಿ ಸಿದ್ದೇಗೌಡರ ಧೋರಣೆ ಹೇಗಿರುತ್ತದೆಂಬ ಕುತೂಹಲ ಉಂಟಾಗಿದೆ.
ಮತ್ತೊಂದೆಡೆ ಬರ ಪರಿಸ್ಥಿತಿ ನಿಭಾಯಿಸುವಲ್ಲಿನ ವೈಫಲ್ಯ ಸಚಿವರಾದ ಡಾ. ಮಹದೇವಪ್ಪ ಹಾಗೂ ಎಚ್.ಎಸ್. ಮಹದೇವಪ್ರಸಾದ್ ಅವರ ಪುತ್ರರು ಮರಳು ದಂಧೆಯಲ್ಲಿ ತೊಡಗಿರುವುದು, ಬಿಡಿಎ ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣಗಳ ಕಡತಗಳ ಕಣ್ಮರೆ, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಡತಗಳು ಕಾಣೆಯಾಗಿರುವ ವಿಚಾರಗಳನ್ನು ಪ್ರಸ್ತಾಪಿಸಲಿರುವ ವಿರೋಧ ಪಕ್ಷಗಳು ಸರ್ಕಾರವನ್ನು ಅಡಕತ್ತರಿಯಲ್ಲಿ ನಿಲ್ಲಿಸುವ ಸಾಧ್ಯತೆಗಳಿವೆ.
ಡಿವೈಎಸ್‌ಪಿ ಅನುಪಮಾ ಶೆಣೈ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಪ್ರಕರಣಗಳು, ಅಡಿಕೆ, ತೆಂಗು ಬೆಲೆ ಕುಸಿತ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳ ನಾಯಕರು ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರದ ವಿರುದ್ಧದ ಟೀಕಾಸ್ತ್ರಗಳಿಗೆ `ಸಾಣೆ’ ಹಿಡಿದಿದ್ದಾರೆ.
19 ದಿನ ಅಧಿವೇಶನ
ನಾಳೆಯಿಂದ ಆರಂಭವಾಗಲಿರುವ ಅಧಿವೇಶನ ಈ ತಿಂಗಳ 29ರವರೆಗೆ ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ನಡೆದ ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ನಾಲ್ಕು ತಿಂಗಳ ಅವಧಿಗೆ ಲೇಖಾನುದಾನಕ್ಕೆ ಅನುಮೋದನೆ ಪಡೆಯಲಾಗಿತ್ತು.
ಈ ತಿಂಗಳ ಅಂತ್ಯದೊಳಗೆ ಪೂರ್ಣ ಪ್ರಮಾಣದ ಬಜೆಟ್‌ಗೆ ಅನುಮೋದನೆ ಪಡೆಯುವ ಅನಿವಾರ್ಯತೆ ಇದೆ. ನಾಡಿದ್ದು ನೂತನ ವಿಧಾನಸಭಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಹಿರಿಯ ಶಾಸಕ ಕೆ.ಬಿ. ಕೋಳಿವಾಡ ಅವರು ಈ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ.
Comments are closed.