ಕರ್ನಾಟಕ

ದೆಹಲಿ ತಲುಪಿದ ಬಿಜೆಪಿ ಭಿನ್ನಮತ

Pinterest LinkedIn Tumblr

lotusಬೆಂಗಳೂರು, ಜು. ೩- ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಸದ್ಯಕ್ಕೆ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಕ್ಷದಲ್ಲಿ ಬಂಡಾಯದ ಬಾವುಟ ಹಾರಿಸಿರುವ ನಾಯಕರುಗಳು ವರಿಷ್ಠರಿಗೆ ದೂರು ನೀ‌ಡುವ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ವಿರುದ್ಧ ನೇರ ಹಣಾಹಣಿಗೆ ಇಳಿದಿದ್ದಾರೆ.

ಭಿನ್ನಮತೀಯ ನಾಯಕರ ನೇತೃತ್ವವಹಿಸಿರುವ ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಭಿನ್ನಮತೀಯ ಮುಖಂಡರು ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್ ಅವರನ್ನು ಭೇಟಿ ಮಾಡಿ ರಾಜ್ಯದ ನೂತನ ಪದಾಧಿಕಾರಿಗಳ ನೇಮಕದಲ್ಲಿ ಆಗಿರುವ ಲೋಪಗಳನ್ನು ಅವರ ಗಮನಕ್ಕೆ ತಂದು ಈ ಪದಾಧಿಕಾರಿಗಳ ಪಟ್ಟಿಯನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದರು.

ಭಿನ್ನಮತ ಶಮನಕ್ಕಾಗಿ ನಿನ್ನೆ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಈ ಸಭೆಗೆ ಗೈರುಹಾಜರಾಗುವ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಡ್ಡು ಹೊಡೆದಿದ್ದ ಈಶ್ವರಪ್ಪನವರು ನಿನ್ನೆ ಸಂಜೆಯೇ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದರು.

ಭಿನ್ನಮತೀಯ ನಾಯಕರ ಈ ದೆಹಲಿ ಯಾತ್ರೆಯಿಂದ ಬಿಜೆಪಿಯಲ್ಲಿ ಮೂಡಿರುವ ಭಿನ್ನಮತ ಇನ್ನು ಶಮನವಾಗದಿರುವುದು ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆಯುತ್ತದೋ ಹೇಳಲು ಬಾರದು. ಭಿನ್ನಮತ ಶಮನಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಿನ್ನೆ ಪಕ್ಷದ ಪದಾಧಿಕಾರಿಗಳು, ಶಾಸಕರು, ಸಂಸದರು ಹಾಗೂ ಪ್ರಮುಖ ಮುಖಂಡರ ಸಭೆ ನಡೆಸಿದ್ದರಾದರೂ ಪಕ್ಷದಲ್ಲಿ ಭಿನ್ನಮತ ತಣ್ಣಗಾಗಿಲ್ಲ.

ಸಭೆಯಲ್ಲಿ ಏನನ್ನೂ ಮಾತನಾಡದೆ ಮೌನಕ್ಕೆ ಶರಣಾಗಿದ್ದ ಭಿನ್ನಮತೀಯ ನಾಯಕರು ಈಗ ಮತ್ತೆ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ್ದು, ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಮಾರ್ಪಾಡು ಆಗುವವರೆಗೂ ತಮ್ಮ ಈ ಹೋರಾಟ ನಿಲ್ಲದು ಎಂಬ ಸಂದೇಶ ರವಾನಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಆಪ್ತರಾಗಿರುವ ಹಾಗೂ ಸಂಘ ಪರಿವಾರದ ಪ್ರಭಾವಿ ಮುಖಂಡರು ಆಗಿರುವ ರಾಮ್‌ಲಾಲ್ ಅವರಿಗೆ ರಾಜ್ಯದ ಬಿಜೆಪಿಯ ಭಿನ್ನಮತೀಯ ನಾಯಕರುಗಳು ಪಕ್ಷದ ಇತ್ತೀಚಿನ ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಸಂಸದೆ ಶೋಭಾಕರಂದ್ಲಾಜೆ ಅವರ ಅಣತಿಯಂತೆ ಪಕ್ಷದಲ್ಲಿ ಎಲ್ಲವೂ ನಡೆಯುತ್ತಿದೆ. ಬೇರೆ ಮುಖಂಡರ ಮಾತುಗಳಿಗೆ ಯಾವುದೇ ಕಿಮ್ಮತ್ತು ಸಿಗುತ್ತಿಲ್ಲ.

ಸಾಮೂಹಿಕ ನಾಯಕತ್ವಕ್ಕೆ ಒತ್ತು ನೀಡುವ ಕೆಲಸ ಆಗಬೇಕಿದೆ ಎಂದು ಅವಲತ್ತುಕೊಂಡರು ಎನ್ನಲಾಗಿದೆ. ಈಶ್ವರಪ್ಪರನ್ನು ಕೂಡಿಕೊಂಡ ಭಿನ್ನಮತೀಯರ ನಾಯಕರು
ನಿನ್ನೆಯ ಭಿನ್ನಮತ ಶಮನಕ್ಕಾಗಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಹಾಜರಾಗುವ ಮೂಲಕ ಈಶ್ವರಪ್ಪನವರಿಗೆ ಕೈಕೊಟ್ಟರು ಎನ್ನಲಾಗಿದ್ದ ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಮುಖಂಡರಾದ ಶಿವಯೋಗಿ ಸ್ವಾಮಿ, ನಿರ್ಮಲ್ ಕುಮಾರ್ ಸುರಾನ ಇವರುಗಳು ಇಂದು ಈಶ್ವರಪ್ಪನವರ ಜೊತೆ ವರಿಷ್ಠರನ್ನು ಭೇಟಿ ಮಾಡಿದ್ದರು. ನಿನ್ನೆ ಈಶ್ವರಪ್ಪನವರಿಗೆ ಕೈಕೊಟ್ಟಿದ್ದ ಈ ನಾಯಕರುಗಳು ಇಂದು ಅವರ ಜೊತೆ ಮತ್ತೆ ಸೇರಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಪ್ರಹ್ಲಾದ್ ಜೋಶಿ ಸಾಥ್
ದೆಹಲಿಯಲ್ಲಿ ಈಶ್ವರಪ್ಪ ನೇತೃತ್ವದ ಭಿನ್ನಮತೀಯ ಮುಖಂಡರು ರಾಮ್‌ಲಾಲ್ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರ ಜೊತೆ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಂಸದ ರಾಮ್‌ಲಾಲ್ ಜೋಶಿ ಸಹ ಇದ್ದರು ಎನ್ನಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಷಾರವರನ್ನು ಭೇಟಿ ಮಾಡಲು ದೆಹಲಿಗೆ ಬಂದಿಲ್ಲ. ರಾಮ್‌ಲಾಲ್ ಜೀ ಅವರನ್ನು ಭೇಟಿ ಮಾಡಿ ಅಹವಾಲು ಹೇಳಿಕೊಳ್ಳಲು ದೆಹಲಿಗೆ ಬಂದಿದ್ದೆವು. ಅದರಂತೆ ರಾಮ್‌ಲಾಲ್ ಜೀ ಅವರನ್ನು ಭೇಟಿ ಮಾಡಿ ಎಲ್ಲವನ್ನೂ ಹೇಳಿದ್ದೇವೆ. ಅವರು ಎಲ್ಲ ವಿಚಾರಗಳನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತರುತ್ತಾರೆ ಎಂದು ಈ ಭಿನ್ನಮತೀಯ ಮುಖಂಡರೊಬ್ಬರು ಹೇಳಿದರು.

Comments are closed.