ಹುಬ್ಬಳ್ಳಿ ಜು.01 : ಹವಾಲಾ ಹಣ ಸಾಗಾಟ, ಕ್ರಿಕೆಟ್ ಬೆಟ್ಟಿಂಗ್ ದಂಧೆಗಳಿಂದ ಕುಖ್ಯಾತಿ ಹುಬ್ಬಳ್ಳಿ. ಈಗ ಅಕ್ರಮ ಶಸಾಸ್ತ್ರ ಮಾರಾಟ ದಂಧೆಯೂ ಎಗ್ಗಿಲ್ಲದೆ ಸಾಗಿದೆ. ಮೊನ್ನೆ ಹುಬ್ಬಳ್ಳಿಯ APMC ಸ್ಟೇಷನ್ ಪೊಲೀಸರು ಅಕ್ರಮವಾಗಿ ಪಿಸ್ತೂಲ್ ಮಾರಾಟ ಬೃಹತ್ ಜಾಲವನ್ನ ಭೇದಿಸಿದ್ದಾರೆ. ಹೊಲದಲ್ಲಿ ಅಡಗಿಸಿಟ್ಟಿದ್ದ ಪಿಸ್ತೂಲ್’ಗಳನ್ನ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ವಾಣಿಜ್ಯ ನಗರಿ ಹುಬ್ಬಳ್ಳೀಲಿ ಅಕ್ರಮ ಶಸಾಸ್ತ್ರಗಳ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎನ್ನುವುದು ಮತ್ತೆ ಸಾಬೀತಾಗಿದೆ. ಮೊನ್ನೆಯೂ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮತ್ತಿಬ್ಬರು ಖದೀಮರ ಕೈಗೆ ಕೋಳ ತೊಡಿಸಿದ್ದಾರೆ.
ಬಂಧಿತರನ್ನು ವಿಜಯಪುರ ಮೂಲದ ಹಸನ ಕರಜಗಿ ಹಾಗು ಬೆಳಗಾವಿ ಮೂಲದ ಅಮೀತಕುಮಾರ್ ಅಂತ ಗುರುತಿಸಲಾಗಿದೆ. ಬಂಧಿತರಿಂದ ಒಟ್ಟು 4 ಪಿಸ್ತೂಲ್, ಎರಡು ಮ್ಯಾಗಜಿನ್ ಹಾಗೂ 17 ಜೀವಂತ ಗುಂಡುಗಳನ್ನು ವಶಪಿಡಿಸಿಕೊಳ್ಳಲಾಗಿದೆ.
ಅಂದ ಹಾಗೆ ಈ ಆರೋಪಿಗಳು ಪಿಸ್ತೂಲ್’ಗಳನ್ನು ಯಾವುದೋ ಮನೆಯಲ್ಲಿ ಬಚ್ಚಿಟ್ಟಿರಲಿಲ್ಲ. ಹೊಲವೊಂದರ ಅಡಗಿಸಿಟ್ಟಿದ್ದರು. ಹೀಗಾಗಿ ಹೊಲದಲ್ಲೇ ಖದೀಮರು ಮಿಲಿಟರಿ ಮತ್ತು ಪೊಲೀಸ್ ಇಲಾಖೆಯಲ್ಲಿ ಮಾತ್ರ ಸಿಗುವ 9 ಎಂಎಂ ಪಿಸ್ತೂಲ್’ಗಳನ್ನು ಬಿತ್ತಿ ಬೆಳೆಯುತ್ತಿದ್ದಾರಾ ಎನ್ನುವ ಕುತೂಹಲ ಹುಟ್ಟಿರುವುದು, 80 ಸಾವಿರಕ್ಕೆ ಒಂದರಂತೆ ಈ ಶಸ್ತ್ರಾಸ್ತ್ರಗಳನ್ನು ದಂಧೆಕೋರರು ಮಾರಾಟ ಮಾಡುತ್ತಿದ್ದರಂತೆ.
ಬಂಧಿತ ಆರೋಪಿಗಳು ಬೇರೆಯವರಿಂದ ಪಿಸ್ತೂಲ್ ಖರೀದಿಸಿದ್ದಾಗಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಆ ಕ್ರಿಮಿನಲ್’ಗಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ರಾಜಕರಾಣಿಗಳು ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಪಿಸ್ತೂಲ್ ಮಾರಾಟ ಮಾಡಿರುವುದು ಗೊತ್ತಾಗಿದೆ. ಆದರೆ ಈ ಬಾರೀ 9 MM ಪಿಸ್ತೂಲ್ ಸಿಕ್ಕಿರೋದು ಪೊಲೀಸ್ರ ನಿದ್ದೆಗಡೆಸಿದೆ. ಕೇವಲ ಮೀಲಿಟರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಮಾತ್ರ 9 ಎಂ.ಎಂ. ಪಿಸ್ತೂಲ್ ಬಳಸಲಾಗುತ್ತಿದೆ.
ಒಟ್ಟಿನಲ್ಲಿ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಶಸ್ತ್ರಾಸ್ತ್ರ ಮಾರಾಟ ಜಾಲವು ವಿಸ್ತಾರಗೊಂಡಿದೆ. ಇದು ಜನರ ನೆಮ್ಮದಿ ಕೆಡಸಿದ್ದು ಪೊಲೀಸರು ಎಚ್ಚೆತ್ತು ಅಕ್ರಮ ಶಸ್ತ್ರಾಸ್ತ್ರ ಜಾಲವನ್ನ ಮಟ್ಟಹಾಕಬೇಕಿದೆ.

Comments are closed.