ಕರ್ನಾಟಕ

ಈಗ ಬಿಜೆಪಿಯಲ್ಲಿ ಭುಗಿಲೆದ್ದ ಅತೃಪ್ತಿ;ಬಿಎಸ್ ವೈ ವಿರುದ್ಧ ಅಸಮಾಧಾನ

Pinterest LinkedIn Tumblr

BJP-Bhinnamatha-26-6ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಬಂಡಾಯ ಬಿಸಿ ಪೂರ್ತಿ ತಣ್ಣಗಾಗುವ ಮೊದಲೇ ವಿಪಕ್ಷ ಬಿಜೆಪಿಯಲ್ಲೂ ಈಗ ಅಪಸ್ವರದ ಧ್ವನಿ ಕೇಳಿಬಂದಿದೆ. ಯಡಿಯೂರಪ್ಪ ಕೆಜೆಪಿ ತೊರೆದು ಮಾತೃಪಕ್ಷ ಬಿಜೆಪಿಗೆ ವಾಪಸಾಗಿ ರಾಜ್ಯಾಧ್ಯಕ್ಷರಾಗಿದ್ದರೂ ಬಿಜೆಪಿ-ಕೆಜೆಪಿ ಗೊಂದಲ ಮಾತ್ರ ನಿಂತಿಲ್ಲದಿರುವುದೇ ಇದಕ್ಕೆ ಕಾರಣ.

ಇತ್ತೀಚೆಗೆ ನಡೆದ ರಾಜ್ಯ, ಜಿಲ್ಲಾ ಘಟಕಗಳ ಪದಾಧಿಕಾರಿಗಳ ನೇಮಕ ವಿಷಯದಲ್ಲಿ ಬಿಜೆಪಿಯವರನ್ನು ನಿರ್ಲಕ್ಷಿಸಿ ಕೆಜೆಪಿ ಮೂಲದವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಮತ್ತು ಪದಾಧಿಕಾರಿಗಳ ನೇಮಕ ವೇಳೆ ಪಕ್ಷದ ಇತರ ಹಿರಿಯ ಮುಖಂಡರ ಅಭಿಪ್ರಾಯವನ್ನೂ ಪಡೆದಿಲ್ಲ ಎಂಬ ಅಸಮಾಧಾನ ಪಕ್ಷದ ಆಂತರಿಕ ವಲಯದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಅದಕ್ಕೊಂದು ಸ್ವರೂಪ ನೀಡುವ ಪ್ರಯತ್ನ ಆರಂಭವಾಗಿದೆ. ಅದರ ಪರಿಣಾಮ ಶೀಘ್ರ ಬೆಂಗಳೂರಿನಲ್ಲಿ ಅತೃಪ್ತ ಗೊಂಡ ಮುಖಂಡರ ಸಭೆ ನಡೆಯುವ ಸಾಧ್ಯತೆಯಿದೆ ಎಂಬ ಸುದ್ದಿ ಬಿಜೆಪಿ ಪಾಳಯದಿಂದಲೇ ಕೇಳಿಬಂದಿದೆ.

ಈ ಸಭೆ ಯಾವಾಗ ನಡೆಯಲಿದೆ? ಸಭೆಯಲ್ಲಿ ಯಾರ್ಯಾರು ಪಾಲ್ಗೊಳ್ಳಲಿದ್ದಾರೆ? ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ತಿಳಿದು ಬಂದಿಲ್ಲ. ನಗರದ ಹೊಟೇಲ್‌ವೊಂದರಲ್ಲಿ ಸಭೆ ನಡೆಸುವ ಮಾತು ಕೇಳಿ ಬಂದಿದೆಯಾದರೂ ಅದು ಖಚಿತಗೊಂಡಿಲ್ಲ. ಪಕ್ಷದ ಮುಖಂಡರೊಬ್ಬರ ನಿವಾಸದಲ್ಲಿ ಅನೌಪಚಾರಿಕವಾಗಿ ಸೇರಿ ಸಮಾಲೋಚಿಸುವ ಸಂಭವ ಇದೆ ಎನ್ನಲಾಗುತ್ತಿದೆ. ಅಸಮಾಧಾನಗೊಂಡ ಮುಖಂಡರು ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರ ಬಳಿ ತಮ್ಮ ಅಹವಾಲು ಸಲ್ಲಿಸುವ ಸಾಧ್ಯತೆಯಿದೆ. ಒಬ್ಬೊಬ್ಬರಾಗಿ ದಿಲ್ಲಿಗೆ ತೆರಳಿ ವರಿಷ್ಠರ ಗಮನಕ್ಕೆ ತರಬೇಕೆ ಅಥವಾ ಒಟ್ಟಾಗಿ ಹೋಗಿ ಪಕ್ಷದ ರಾಜ್ಯ ಘಟಕದಲ್ಲಿನ ಬೆಳವಣಿಗೆಗಳನ್ನು ವರಿಷ್ಠರ ಮುಂದಿಡಬೇಕೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ದಿಲ್ಲಿಗೆ ತೆರಳುವ ಬದಲು ಯಡಿಯೂರಪ್ಪ ಜತೆ ಕುಳಿತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದೆ ಎಂಬ ಬಗ್ಗೆಯೂ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಕೋರ್‌ ಕಮಿಟಿಯಲ್ಲಿರುವ ಹಿರಿಯ ನಾಯಕರೂ ಸಹಿತ ಹಲವಾರು ಮುಖಂಡರು ಪದಾಧಿಕಾರಿಗಳ ಪಟ್ಟಿ ಬಗ್ಗೆ ಬೇಸರಗೊಂಡಿದ್ದಾರೆ. ಯಾರೊಬ್ಬರಿಗೂ ಯಡಿಯೂರಪ್ಪ ನಾಯಕತ್ವದ ಬಗ್ಗೆ ವಿರೋಧವಿಲ್ಲ. ಆದರೆ, ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವಾಗ ಸೌಜನ್ಯಕ್ಕಾದರೂ ತಮ್ಮನ್ನು ಸಂಪರ್ಕಿಸಲಿಲ್ಲ. ತಮ್ಮ ಅಭಿಪ್ರಾಯ ಆಲಿಸಲಿಲ್ಲ ಎಂಬ ಆಕ್ರೋಶವಿದೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತವರು ಜಿಲ್ಲೆಯಿಂದಲೇ ಮೊದಲು ಅಸಮಾಧಾನದ ಧ್ವನಿ ಹೊರಬಿದ್ದಿದ್ದು, ಈಶ್ವರಪ್ಪ ಅವರು ಬಹಿರಂಗವಾಗಿಯೇ ತನ್ನ ಅತೃಪ್ತಿ ಹೊರಹಾಕಿದ್ದಾರೆ.
-ಉದಯವಾಣಿ

Comments are closed.