ರಾಷ್ಟ್ರೀಯ

ಲಂಚದ ಹಣಕ್ಕಾಗಿ ರಸ್ತೆಯಲ್ಲೇ ಖಾಕಿಗಳ ಮಧ್ಯೆಯೇ ಮಾರಾಮಾರಿ!

Pinterest LinkedIn Tumblr

lucknow-policemen-brawlಲಕ್ನೋ:ಲಾರಿ ಮತ್ತು ಇತರ ವಾಹನಗಳಿಂದ ವಸೂಲಿ ಮಾಡಿದ್ದ ಲಂಚದ ಹಣ ಹಂಚಿಕೊಳ್ಳುವ ಸಂಬಂಧ ನಾಲ್ವರು ಪೊಲೀಸರು ನಡು ರಸ್ತೆಯಲ್ಲೇ ಮಾರಾಮಾರಿ ಕಿತ್ತಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಭಾನುವಾರ ನಡೆದಿದ್ದು, ಇದೀಗ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ!

ಲಂಚದ ಹಣದ ಹಂಚಿಕೆ ವಿಚಾರದಲ್ಲಿ ಇಬ್ಬರು ಪೊಲೀಸರು ಒಬ್ಬರನ್ನೊಬ್ಬರು ತಳ್ಳಾಡಿ, ನೆಲದ ಮೇಲೆ ದೂಡಿ ಬಡಿದಾಡುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಉಳಿದಿಬ್ಬರು ಪೊಲೀಸರು ಜಗಳ ತಡೆಯಲು ಯತ್ನಿಸುತ್ತಿದ್ದರು. ಆದರೆ ಜಗಳ ನಿಲ್ಲಿಸಲು ಆಗಿಲ್ಲ. ಕೊನೆಗೆ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯೂ ಜಗಳ ಬಿಡಿಸಲು ಮುಂದಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ ಪ್ರಕಾರ, ಲಕ್ನೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಅತೀ ಹೆಚ್ಚಿನ ಲಾರಿಗಳು ಸಂಚರಿಸುತ್ತಿದ್ದುದರಿಂದ, ಪೊಲೀಸರು ಅವರಿಂದ ಲಂಚದ ಹಣವನ್ನು ವಸೂಲಿ ಮಾಡಿದ್ದರು. ಅದರಲ್ಲೊಬ್ಬ ಪೊಲೀಸ್ ತಾನೊಬ್ಬನೇ ಎಲ್ಲಾ ಹಣ ಇಟ್ಟುಕೊಳ್ಳಲು ಯತ್ನಿಸಿದಾಗ, ಉಳಿದ ಪೊಲೀಸರು ತಮಗೂ ಪಾಲು ಕೊಡಬೇಕೆಂದು ತಗಾದೆ ತೆಗೆದಾಗ ಗಲಾಟೆ ಆರಂಭವಾಗಿರುವುದಾಗಿ ವಿವರಿಸಿದ್ದಾರೆ…

ಏತನ್ಮಧ್ಯೆ ಲಂಚದ ಹಣಕ್ಕಾಗಿ ಈ ಗಲಾಟೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
-ಉದಯವಾಣಿ

Comments are closed.