ವೃತ್ತಿಪರ ಹೆಜ್ಜೆ ಇಡುವ ಮೂಲಕ ಭಾರತೀಯ ಬಾಕ್ಸಿಂಗ್’ಗೆ ಹೊಸ ಮೆರುಗು ಕೊಟ್ಟ ವಿಜೇಂದರ್ ಸಿಂಗ್ ಇದೀಗ ಡಬ್ಲ್ಯೂಬಿಓ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್’ವೇಟ್ ಚಾಂಪಿಯನ್’ಶಿಪ್ ಪಟ್ಟಕ್ಕಾಗಿ ಕೆರ್ರಿ ಹೋಪ್ ಜೊತೆ ಸೆಣಸಲಿದ್ದಾರೆ. ವೃತ್ತಿಪರ ಬಾಕ್ಸಿಂಗ್’ನಲ್ಲಿ ಆಡಿದ ಎಲ್ಲಾ ಐದೂ ಪಂದ್ಯಗಳನ್ನೂ ನಾಕೌಟ್’ನಲ್ಲೇ ಗೆದ್ದಿರುವ ವಿಜೇಂದರ್ ಇದೀಗ ಮೊದಲ ಬಾರಿಗೆ ಪ್ರಬಲ ಸ್ಪರ್ಧಿಯೊಬ್ಬರನ್ನು ಎದುರುಗೊಳ್ಳುತ್ತಿದ್ದಾರೆ.
ವಿಜೇಂದರ್ ಎದುರಾಳಿ ಕೆರ್ರಿ ಹೋಪ್ 34 ವರ್ಷದ ಅನುಭವಿ ವೃತ್ತಿಪರ ಬಾಕ್ಸರ್ ಆಗಿದ್ದಾರೆ. ಆಸ್ಟ್ರೇಲಿಯಾದ ಹೋಪ್ ಅವರು ಹಾಲಿ ಡಬ್ಲ್ಯೂಬಿಸಿ ಏಷ್ಯನ್ ಬಾಕ್ಸಿಂಗ್ ಕೌನ್ಸಿಲ್ ಚಾಂಪಿಯನ್ ಆಗಿದ್ದಾರೆ. ಅಲ್ಲದೇ ಅವರು ಮಾಜಿ ಯೂರೋಪಿಯನ್ ಚಾಂಪಿಯನ್ ಕೂಡ ಆಗಿದ್ದಾರೆ. ಈವರೆಗಿನ ವೃತ್ತಿಪರ ಜೀವನದಲ್ಲಿ ಅವರು 30 ಪಂದ್ಯಗಳನ್ನಾಡಿದ್ದು 23 ಗೆಲುವು ಕಂಡಿದ್ದಾರೆ. 180ಕ್ಕೂ ಹೆಚ್ಚು ಸುತ್ತುಗಳನ್ನು ಸೆಣಸಿದ್ದಾರೆ. ಇದಕ್ಕೆ ಹೋಲಿಸಿದರೆ ವಿಜೇಂದರ್ ಆಡಿರುವುದು ಕೇವಲ 5 ಪಂದ್ಯ ಹಾಗೂ 17 ಸುತ್ತುಗಳಷ್ಟೇ.
ವಿಜೇಂದರ್ ಕಣ್ಣಲ್ಲಿ ಭಯ ಕಂಡೆ:
“ನಾನೆಂಥ ಅನುಭವಿ ಎಂಬುದು ವಿಜೇಂದರ್’ಗೆ ಸ್ಪಷ್ಟವಾಗಿ ಗೊತ್ತು. ನನ್ನ ಸರಿಸಮಾನಕ್ಕೆ ಆತ ನಿಲ್ಲಲು ಸಾಧ್ಯವಿಲ್ಲವೆಂಬುದೂ ಆತನಿಗೆ ಗೊತ್ತು. ಹೀಗಾಗಿ ಪತ್ರಿಕಾಗೋಷ್ಠಿ ವೇಳೆ ವಿಜೇಂದರ್ ಕಣ್ಣಲ್ಲಿ ಭಯವನ್ನು ನಾನು ಕಂಡೆ” ಎಂದು ಕೆರ್ರಿ ಹೋಪ್ ಹೇಳಿಕೆ ನೀಡಿದ್ದಾರೆ.
“ವಿಜೇಂದರ್ ಇನ್ನೂ ಹವ್ಯಾಸಿ ಬಾಕ್ಸರ್’ನಂತೆ ಆಡುತ್ತಿದ್ದಾರೆ. ದೀರ್ಘ ಸೆಣಸಾಟಗಳನ್ನು ಆಡಿ ರೂಢಿ ಇಲ್ಲ. ನಾನು ಹಾಕುವ ಒತ್ತಡಕ್ಕೆ ಸಿಲುಕಿ ವಿಲವಿಲ ಒದ್ದಾಡಲಿದ್ದಾರೆ. ಜುಲೈ 16ರಂದು ತವರಿನ ಪ್ರೇಕ್ಷಕರ ಎದುರಲ್ಲೇ ವಿಜೇಂದರ್ ಮಣ್ಣುಮುಕ್ಕುತ್ತಾರೆ. ಕೋಟ್ಯಂತರ ಅಭಿಮಾನಿಗಳು ಕಣ್ಣೀರಿಡುತ್ತಾರೆ” ಎಂದು ಹೋಪ್ ಕೆಣಕಿದ್ದಾರೆ.
ಜುಲೈ 16ರಂದು ದೇಶದ ರಾಜಧಾನಿಯಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಸೂಪರ್ ಮಿಡಲ್’ವೇಟ್’ನಲ್ಲಿ ಏಷ್ಯಾ ಪೆಸಿಫಿಕ್’ನ ಚಾಂಪಿಯನ್ ಯಾರಾಗುತ್ತಾರೆ ಎಂಬುದು ಅಂದು ನಿರ್ಧಾರವಾಗಲಿದೆ. ಈವರೆಗೆ ಐದೂ ಪಂದ್ಯಗಳಲ್ಲಿ ಸುಲಭ ಗೆಲುವು ಕಂಡಿರುವ ವಿಜೇಂದರ್ ಈ ಅಂತಿಮ ಹಣಾಹಣಿಯಲ್ಲಿ ಹೇಗೆ ಆಡುತ್ತಾರೆಂಬುದು ಕುತೂಹಲ.

Comments are closed.