
ಬೆಂಗಳೂರು: ಬಸವನಗುಡಿಯಲ್ಲಿ ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಆರೋಪಿ ಅಳಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೀಲಸಂದ್ರದ ಸೌತ್‌ಕ್ರಾಸ್‌ಸ್ಟ್ರೀಟ್‌ನ ಆರ್‌ಕೆ ಗಾರ್ಡನ್ ನಿವಾಸಿ ಮೊಹಮ್ಮದ್ ಆಖಿಲ್ ಉರ್ ರೆಹಮಾನ್ (38) ಬಂಧಿತ ಆರೋಪಿ ಅಳಿಯ.
ಘಟನೆ ವಿವರ: ಬಸವನಗುಡಿಯ ಖಾಜಿಸ್ಟ್ರೀಟ್‌ನ ಎರಡನೆ ಮಹಡಿಯಲ್ಲಿ ಅಫ್ಜಲ್ ಅಹಮದ್ ಎಂಬುವರು ವಾಸವಾಗಿದ್ದು, ಜೂ.18ರಂದು ಬೆಳಗ್ಗೆ 7.30ಕ್ಕೆ ಕಚೇರಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಇವರ ಪತ್ನಿ ಸಯ್ಯದ್ ಉನ್ನಿಸಾ (54) ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ 7.45ರಲ್ಲಿ ಕೆಲಸ ಮುಗಿಸಿಕೊಂಡು ಅಫ್ಜಲ್ ಅಹಮದ್ ಮನೆಗೆ ವಾಪಸಾದಾಗ ಕಾಲಿಂಗ್‌ಬೆಲ್ ಒತ್ತಿದರೂ ಬಾಗಿಲು ತೆರೆಯಲಿಲ್ಲ. ತದನಂತರ ತಮ್ಮ ಬಳಿಯಿದ್ದ ಬೀಗದ ಕೀ ಮೂಲಕ ಬಾಗಿಲು ತೆರೆದು ಒಳಗೆ ಹೋದಾಗ ಬೆಡ್‌ರೂಮ್ ನೆಲದ ಮೇಲೆ ರಕ್ತದ ಮಡುವಿನಲ್ಲಿ ವಿವಸ್ತ್ರವಾಗಿ ಸತ್ತು ಬಿದ್ದಿದ್ದು ಕಂಡು ತಕ್ಷಣ ಬಸವನಗುಡಿ ಪೊಲೀಸರಿಗೆ ತಿಳಿಸಿದ್ದಾರೆ.
ಯಾರೋ ಆಯುಧದಿಂದ ಮುಖ ಹಾಗೂ ತಲೆ ಬಳಿ ಚುಚ್ಚಿ ರಕ್ತಗಾಯಪಡಿಸಿ ಕೊಲೆ ಮಾಡಿರುತ್ತಾರೆಂದು ದೂರು ನೀಡಿದ್ದರು. ಈ ಪ್ರಕರಣದ ತನಿಖೆ ಆರಂಭದಲ್ಲಿ ಯಾವುದೇ ಸುಳಿವು ಇರಲಿಲ್ಲ. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಮಾಡಲು ಎಸಿಪಿ, ಪಿಐ ಹಾಗೂ ಪಿಎಸ್‌ಐ ಅವರನ್ನೊಳಗೊಂಡ ಮೂರು ತಂಡಗಳನ್ನಾಗಿ ರಚಿಸಲಾಗಿತ್ತು. ಈ ತಂಡದವರು ಎಲ್ಲ ರೀತಿಯ ಮಾಹಿತಿ ಕಲೆ ಹಾಕಿ ವೈಜನಿಕವಾಗಿ ತನಿಖೆ ಮಾಡಿ ನಿನ್ನೆ ಮೃತಳ ಅಳಿಯ ಮೊಹಮ್ಮದ್ ಆಖಿಲ್ ಉರ್ ರೆಹಮಾನ್ ಬಿನ್ ಮೊಹಮ್ಮದ್ ರಫೀಕ್ ಎಂಬುವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾನೆ.
ಅತ್ತೆ ಸಯ್ಯದ್ ಉನ್ನೀಸಾ ಈ ಹಿಂದೆ ಮಾಟ-ಮಂತ್ರ ಬೇರೆಯವರ ಕಡೆಯಿಂದ ಮಾಡಿಸುತ್ತಿದ್ದು, ತನ್ನ ಮಕ್ಕಳಿಗೆ ಮತ್ತು ನನಗೂ ಮಾಟ-ಮಂತ್ರ ಮಾಡಿಸಿ ತೊಂದರೆ ಕೊಡುತ್ತಿದ್ದರು. ಅಲ್ಲದೆ, ಆಗಾಗ್ಗೆ ಹಣ ಕೊಡುತ್ತಿದ್ದುದನ್ನು ನಿಲ್ಲಿಸಿದ್ದರಿಂದ ತಾನು ಸಾಲ ಹೆಚ್ಚಿಗೆ ಮಾಡಿಕೊಂಡಿದ್ದು, ತೀರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅತ್ತೆ ಮೇಲೆ ಕೋಪ ಬಂದು ಆಕೆಯ ಕೊಲೆ ಮಾಡಲು ನಿರ್ಧರಿಸಿದ್ದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಅತ್ತೆ ಮನೆಯ ನಕಲಿ ಕೀ ಮಾಡಿಸಿಕೊಂಡು ತನ್ನ ಮಾವ ಮನೆ ಬೀಗ ಹಾಕಿಕೊಂಡು ಹೋದ ಮೇಲೆ ಅತ್ತೆ ಒಬ್ಬರೇ ಇರುವುದನ್ನು ಖಾತ್ರಿ ಪಡಿಸಿಕೊಂಡು ಜೂ.18ರಂದು ನಕಲಿ ಕೀಯಿಂದ ಮನೆಯ ಬಾಗಿಲನ್ನು ತೆಗೆದು ಒಳಗೆ ಹೋಗಿ ಮಲಗಿದ್ದ ಅತ್ತೆಯನ್ನು ಚಾಕು, ಐರನ್ ಬಾಕ್ಸ್‌ನಿಂದ ಹೊಡೆದು ತಲೆದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಪರಾರಿಯಾಗಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಎಂ.ಕಾಂತರಾಜ್ ಉಸ್ತುವಾರಿಯಲ್ಲಿ ಬಸವನಗುಡಿ ಠಾಣೆ ಇನ್ಸ್‌ಪೆಕ್ಟರ್ ಎಸ್.ಡಿ.ಶಶಿಧರ್, ಪಿಎಸ್‌ಐಗಳಾದ ರಾಜಶೇಖರಯ್ಯ, ಕಿರಣ್. ವಿ ಹಾಗೂ ಕವಿತಾ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕೆಲಸವನ್ನು ಪೊಲೀಸ್ ಕಮೀಷನರ್ ಪ್ರಶಂಶಿಸಿದ್ದಾರೆ.
Comments are closed.