
ಲಾಸ್ ಏಂಜಲಿಸ್: ಬ್ರಿಟನ್ ಮೂಲದ ಯುವಕನೊಬ್ಬ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ವಿಫಲ ಯತ್ನ ನಡೆಸಿದ ಘಟನೆ ಲಾಸ್ ವೆಗಾಸ್ನಲ್ಲಿ ನಡೆದಿದೆ. ಚುನಾವಣಾ ಪ್ರಚಾರದ ರ್ಯಾ ಲಿಯೊಂದರಲ್ಲಿ ಭಾಗವಹಿಸಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಬ್ರಿಟನ್ ಮೂಲದ 19ರ ಹರೆಯದ ಯತುವಕನೊಬ್ಬ ಪೊಲೀಸ್ ಅಧಿಕಾರಿಯೊಬ್ಬರ ಪಿಸ್ತೂಲ್ ಕಿತ್ತುಕೊಂಡು ದಾಳಿಗೆ ಮುಂದಾದಾಗ ಭದ್ರತಾ ಸಿಬ್ಬಂದಿ ಅವನನ್ನು ಬಂಧಿಸಿದ್ದಾರೆ.
ಟ್ರೆಷರ್ ಐಲೆಂಡ್ ಕ್ಯಾಸಿನೊದ ಮೈಸ್ಟೆರ್ ಥಿಯೇಟರ್ ಬಳಿ ರ್ಯಾ ಲಿ ನಡೆಯುತ್ತಿದ್ದ ವೇಳೆ ಬ್ರಿಟನ್ ಪ್ರಜೆ ಎಂದು ಹೇಳಲಾದ ಮೈಕೇಲ್ ಸ್ಯಾಂಡ್ಫೋರ್ಡ್ ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಬಳಿಯಿದ್ದ ಗನ್ ಕಿತ್ತುಕೊಂಡು ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಡೊನಾಲ್ಡ್ ಟ್ರಂಪ್ರತ್ತ ನುಗ್ಗಲಾರಂಭಿಸಿದ. ಆಗ ಪೊಲೀಸರು ಅವನನ್ನು ಬಂಧಿಸಿದರು. ಬಂಧನದ ಬಳಿಕ ಯುವಕನನ್ನು ಮಾತನಾಡಿಸಿದಾಗ ತಾನು ಟ್ರಂಪ್ ಹತ್ಯೆ ಮಾಡಲು ಬಯಸಿದ್ದಾಗಿ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ ಅವನು ಎಂದೂ ಗನ್ ಹಿಡಿದಿಲ್ಲವಾದ ಕಾರಣ ನಿನ್ನೆ ತಾನು ಶೂಟಿಂಗ್ ತರಬೇತಿ ಪಡೆದಿದ್ದಾಗಿ ತಿಳಿಸಿದ್ದಾನೆ.
ನನಗೆ ಒಂದು ಅಥವಾ ಎರಡು ಸುತ್ತು ಗುಂಡು ಹಾರಿಸಲು ಮಾತ್ರ ಬರುತ್ತಿತ್ತು. ಒಂದು ವೇಳೆ ನಾನು ಟ್ರಂಪ್ ಬಳಿ ಹೋಗಿ ಗುಂಡು ಹಾರಿಸಿದ್ದರೆ ಭದ್ರತಾ ಸಿಬ್ಬಂದಿ ನನ್ನನ್ನು ಕೊಲ್ಲುತ್ತಾರೆ ಎಂಬುದೂ ನನಗೆ ಗೊತ್ತಿತ್ತು. ಅಲ್ಲದೆ, ಫೋನಿಕ್ಸ್ನಲ್ಲಿ ನಡೆಯುವ ರ್ಯಾ ಲಿಯ ಟಿಕೆಟ್ಅನ್ನು ಕೂಡ ಖರೀದಿಸಿದ್ದು, ಇಲ್ಲಿ ಸಾಧ್ಯವಾಗದಿದ್ದರೆ ಪುನಃ ಅಲ್ಲಿಯೂ ಪ್ರಯತ್ನಿಸುವ ಉದ್ದೇಶವಿತ್ತು ಎಂದೂ ಸ್ಯಾಂಡ್ಫೋರ್ಡ್ ಪೊಲೀಸರೆದುರು ಬಾಯಿಬಿಟ್ಟಿದ್ದಾನೆ.
ಬಂಧಿಸಿದ ನಂತರ ಅವನನ್ನು ಪೊಲೀಸರು ಕರೆದೊಯ್ದು ವಿಡಿಯೋ ಇಲ್ಲಿನ ಮಾಧ್ಯಮಗಳಿಗೆ ದೊರೆತಿದ್ದು, ಬಿಳೀ ಚರ್ಮ, ಕಂದು ಬಣ್ಣದ ಕೂದಲಿನ ಯುವಕ ಟಿ-ಶರ್ಟ್ ಧರಿಸಿದ್ದು, ಅವನ ಎರಡೂ ಕೈಗಳನ್ನೂ ಬೆನ್ನಹಿಂದಕ್ಕೆ ಕಟ್ಟಲಾಗಿರುವ ಚಿತ್ರ ಪ್ರಕಟವಾಗಿದೆ. ಒಟ್ಟಾರೆ ಸ್ಯಾಂಡ್ಫೋರ್ಡ್ನನ್ನು ಅಪಾಯಕಾರಿ ಎಂದು ತಿಳಿದಿರುವ ಪೊಲೀಸರು ಅವನನ್ನು ಭಾರೀ ಭದ್ರತೆಯಲ್ಲಿಟ್ಟಿದ್ದಾರೆ.
Comments are closed.