ಕರ್ನಾಟಕ

ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಕಾಗೋಡು ರಾಜೀನಾಮೆ

Pinterest LinkedIn Tumblr

speaker-ಬೆಂಗಳೂರು, ಜೂ. ೧೯- ರಾಜ್ಯದ ನೂತನ ಸಚಿವರಾಗಿ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಲಿರುವ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಭಾಧ್ಯಕ್ಷ ಸ್ಥಾನಕ್ಕೆ ತಮ್ಮ ರಾಜೀನಾಮೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕಾಗೋಡು ತಿಮ್ಮಪ್ಪ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಪುಟಕ್ಕೆ ಸೇರ್ಪಡೆಯಾಗಲಿರುವುದರಿಂದ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಪತ್ರವನ್ನು ಉಪಸಭಾಧ್ಯಕ್ಷ ಶಿವಶಂಕರರೆಡ್ಡಿ ಅವರಿಗೆ ಕಾಗೋಡು ತಿಮ್ಮಪ್ಪ ಅವರು ನೀಡಿದರು.
ಕಾಗೋಡು ಹೇಳಿಕೆ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೋಡು ತಿಮ್ಮಪ್ಪ ಅವರು, ಮುಂದಿನ ಎರಡು ವರ್ಷಗಳಲ್ಲಿ ಉತ್ತಮ ಆಡಳಿತ ನೀಡಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತೇನೆ. ಬದಲಾವಣೆ ಯಾವೊತ್ತು ಒಳ್ಳೆಯದಕ್ಕೆ ಕೆಟ್ಟದಕ್ಕಲ್ಲ ಸಚಿವ ಸ್ಥಾನಕ್ಕಿಂತ ಸ್ಪೀಕರ್ ಸ್ಥಾನ ದೊಡ್ಡದು ಎಂದರು.
ಜನರಿಗೆ ಒಂದು ತರಹ ಹುಚ್ಚು. ಮಂತ್ರಿಯಾದ ತಕ್ಷಣ ಅವನು ದೊಡ್ಡವನು ಎಂಬ ಮನಸ್ಥಿತಿ ಇದೆ. ಸರ್ಕಾರವನ್ನು ಒಳ್ಳೆಯ ರೀತಿ ನಡೆಸಬೇಕು, ಒಳ್ಳೆಯ ಸಾಧನೆ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು.
ಪಕ್ಷದ ಅಣತಿಯಂತೆ ಸಚಿವನಾಗುತ್ತಿದ್ದೇನೆ ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿದರು.
ಕಂದಾಯ ಇಲಾಖೆ ಎಂದರೆ ತಾಯಿ ಇಲಾಖೆ ಇದ್ದ ಹಾಗೆ. ಅಲ್ಲಿಯ ಆಡಳಿತ ಸ್ವಚ್ಛವಾಗಿರಬೇಕು ಜನರಿಗೆ ನೇರವಾದ ಸಹಾಯ ಮಾಡಲು ಸಾಧ್ಯ. ಬಗರ್ ಹುಕುಂ ಸಾಗುವಳಿದಾರರಿಗೆ ಸಹಾಯ ಮಾಡಬೇಕು ಅನ್ನೋದು ನನ್ನ ಆಶಯ. ಹಿಂದೆ ಮಂತ್ರಿಯಾದದ್ದಕ್ಕಿಂತ ಹೆಚ್ಚಿನ ಅನುಭವ ಈಗ ಆಗಿದೆ. ಹಾಗಾಗಿ ಒಳ್ಳೆಯ ಕೆಲಸ ಮಾ‌ಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹಾರ ತುರಾಯಿ ಇಲ್ಲ
ಇದೇ ಸಂದರ್ಭದಲ್ಲಿ ತಮ್ಮ ನಿವಾಸದ ಬಳಿ ಹಾರ ತುರಾಯಿ ಹಾಕಲು ಬಂದ ಬೆಂಬಲಿಗರ ವಿರುದ್ಧ ನಯವಾಗಿಯೇ ರೇಗಿದ ಕಾಗೋ‌ಡು ತಿಮ್ಮಪ್ಪ ಅವರು, ಸ್ಪೀಕರ್ ಸ್ಥಾನ ಎಲ್ಲದ್ದಕ್ಕಿಂತ ದೊಡ್ಡದು. ನಿಮಗೆ ಬುದ್ಧಿ ಇಲ್ಲ ಎಂದು ಅಭಿಮಾನಿ ಕಾರ್ಯಕರ್ತರಿಗೆ ಹೇಳಿದರು.
ನೂತನ ಸಚಿವರುಗಳ ಮನೆ ಸುತ್ತಮುತ್ತ ಅಭಿನಂದನೆಯ ಫ್ಲೆಕ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ. ಆದರೆ ಕಾಗೋಡು ತಿಮ್ಮಪ್ಪ ಅವರ ಮನೆಯ ಬಳಿ ಯಾವುದೇ ಫ್ಲೆಕ್ಸ್, ಬ್ಯಾನರ್‌ಗಳು ಇಲ್ಲ. ಬ್ಯಾನರ್ ಹಾಕದಂತೆ ಬೆಂಬಲಿಗರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಕಾಗೋಡು ತಿಮ್ಮಪ್ಪ ಅವರು ನೀಡಿದ್ದರು.

Comments are closed.