ಬೆಂಗಳೂರು, ಜೂ. ೧೯- ರಂಗಭೂಮಿ ಕಲಾವಿದರ ಬದುಕಿನ ಭದ್ರತೆಗಾಗಿ ಸರ್ಕಾರ ಕ್ರಿಯಾ ಯೋಜನೆಯೊಂದನ್ನು ರೂಪಿಸಬೇಕು. ಈ ಮೂಲಕ ಸಮಾಜವನ್ನು ಆನಂದವಾಗಿಡುವ ಕಲಾವಿದರ ಬದುಕನ್ನು ಸರ್ಕಾರ ಆನಂದವಾಗಿಸಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಇಂದು ಕನ್ನಡ ಜನಶಕ್ತಿ ಕೇಂದ್ರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದೆ ಡಾ. ಸುಭದ್ರಮ್ಮ ಮನ್ಸೂರ್ ಅವರಿಗೆ ಶಾಂತವೇರಿ ಗೋಪಾಲ್ ಗೌಡ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಂಗಭೂಮಿ ಕಲಾವಿದರಿಗೆ ಬದುಕಿನಲ್ಲಿ ಭದ್ರತೆ ಇಲ್ಲ. ಸರ್ಕಾರದಲ್ಲಿ ಅನೇಕ ಯೋಜನೆಗಳಿವೆ. ಕಲಾವಿದರನ್ನು ಸಮೀಕ್ಷೆ ನಡೆಸಿ ಕಷ್ಟದಲ್ಲಿರುವ ಕಲಾವಿದರಿಗೆ ಸೌಲಭ್ಯಗಳನ್ನು ಒದಗಿಸಿಕೊಡುವುದು ಸಮಾಜದ ಕರ್ತವ್ಯ. ಕಲಾವಿದರು ಹೊಟ್ಟೆಪಾಡಿಗಾಗಿ ರಂಗಭೂಮಿಗೆ ಬಂದಿದ್ದರೂ, ಅವರ ಖಾಸಗಿ ಬದುಕು ದುಸ್ತರವಾಗಿರುತ್ತದೆ. ಸುಭಿಕ್ಷ ಸಮಾಜ ಎಂದು ಕರೆಸಿಕೊಳ್ಳಬೇಕಾದರೆ, ಕಲಾವಿದರೂ ಕೂಡ ಸುಭಿಕ್ಷರಾಗಿರಬೇಕು. ಆದ್ದರಿಂದ ಸರ್ಕಾರ ಕಲಾವಿದರನ್ನು ಗುರುತಿಸಿ, ಯೋಜನೆಗಳನ್ನು ಅವರ ಮನೆ ಬಾಗಿಲಿಗೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ರಂಗಭೂಮಿಯೇ ವೃತ್ತಿ ರಂಗಭೂಮಿಯ ವಿಕಾಸದ ಹಂತ. ವೃತ್ತಿ ರಂಗಭೂಮಿಯ ಬೆಳವಣಿಗೆ ಬುಡಕಟ್ಟು ಜನಾಂಗದ ಸಂಸ್ಕೃತಿಯಿಂದ ಆಗಿದೆ. ಕಲಾಸೇವೆ ಮಾಡುವ ಕಲಾವಿದರಿಗೆ ಭಿಕ್ಷೆಯ ರೂಪದಲ್ಲಿ ಧನಸಹಾಯ ಮಾಡದೆ, ಅವರ ಕಲೆಯನ್ನು ಗೌರವಿಸಿ ಅವರಿಗೆ ಜೀವನ ಭದ್ರತೆ ಒದಗಿಸಬೇಕು. ಅವರು ತಾನಿಲ್ಲಿ ಹುಟ್ಟಿರುವುದು ಸಾರ್ಥಕವಾಯಿತು ಎಂಬಂತಹ ಭಾವನೆ ಅವರಲ್ಲಿ ಮೂಡಿಸಬೇಕು. ಹೆಚ್ಚಿನ ಕಲಾವಿದರು ರಂಗದ ಮೇಲೆ ರಂಜನೆ ಮಾಡುತ್ತಿದ್ದರೂ, ಅವರ ನಿಜ ಬದುಕು ವೈರುಧ್ಯಗಳಿಂದ ಕೂಡಿರುತ್ತದೆ. ಇಂತಹ ಕಲಾವಿದರಿಗೆ ಮಾಸಾಶನ, ಸಹಾಯಧನ, ನಿವೇಶನ ದೊರೆತರೆ, ಅವರ ಬದುಕು ಕೂಡ ಸುಂದರವಾಗಬಹುದು ಎಂದು ಹೇಳಿದರು.
ಸುಭದ್ರಮ್ಮ ಮನ್ಸೂರ್ ಅವರು ಅತಿ ಬಡತನದಿಂದ ಹುಟ್ಟಿ ರಂಗಭೂಮಿಯಲ್ಲಿ ಸಾಧನೆ ಮಾಡಿದವರು. ಅವರು ಅಭಿನೇತ್ರಿಯೂ ಹೌದು, ಗಾಯಕಿಯೂ ಹೌದು. ಅಸಂಖ್ಯಾತ ಅಭಿನೇತ್ರಿಗಳ ಪ್ರತೀಕವಾಗಿ, ಅನಾಮಧೇಯ ಪ್ರತಿಭೆಗಳ ಪ್ರತೀಕವಾಗಿ ಇಂದು ಅವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜನಶಕ್ತಿ ಸಂಸ್ಥೆಯ ಅಧ್ಯಕ್ಷ ಸಿ.ಕೆ. ರಾಮೇಗೌಡ ಮಾತನಾಡಿ, ಶಾಂತವೇರಿ ಗೋಪಾಲಗೌಡ ಅವರು ಹಾದಿಯಲ್ಲಿ ಮುನ್ನಡೆಯುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಈ ಮೂಲಕ ಯುವ ಜನಾಂಗದಲ್ಲಿ ಆಶಾಭಾವನೆ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಪ್ರಶಸ್ತಿಗೆ ಈ ಬಾರಿ ನಾಲ್ಕಾರು ಹೆಸರುಗಳು ಬಂದಿದ್ದರೂ, ಅಂತಿಮವಾಗಿ ಸರ್ವಾನುಮತದಿಂದ ಮನ್ಸೂರ್ ಅವರು ಆಯ್ಕೆಯಾದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ರಂಗತಜ್ಞ ಹಾಗೂ ಪತ್ರಕರ್ತ ಗುಡಿಹಳ್ಳಿ ನಾಗರಾಜು, ಶಿವಸ್ವಾಮಿ, ಮತ್ತಿತರರು ಹಾಜರಿದ್ದರು.
ಪ್ರಶಸ್ತಿ 25 ಸಾವಿರ ರೂ. ನಗದು, ಕಂಚಿನ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿದೆ.
ಕರ್ನಾಟಕ
Comments are closed.