ಬೆರಳೆಣಿಕೆಯ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಯುವ ನಟ ರಾಹುಲ್, ಸಿನಿಮಾಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು, ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಪಂದ್ಯಾವಳಿಯಲ್ಲಿ. ಸುದೀಪ್ ನಾಯಕತ್ವದ ಬುಲ್ಡೋಜರ್ ತಂಡದಲ್ಲಿ ಆಡುತ್ತಿರುವ ರಾಹುಲ್, ಸದ್ಯಕ್ಕೆ ಸುದ್ದಿಯಲ್ಲಿರುವ ನಟ. ಕಾರಣ, “ಜಿಗರ್‌ಥಂಡ’. ಹೌದು, ಯವ ನಟ ರಾಹುಲ್‌ಗೆ “ಜಿಗರ್‌ಥಂಡ’ ಒಂದು ಅಪರೂಪದ ಚಿತ್ರ. ಇದು ಆವರಿಗೆ ಹೊಸ ಐಡೆಂಟಿಟಿ ಕೊಡುವ ಚಿತ್ರವೆಂದರೆ ತಪ್ಪಿಲ್ಲ. ಇದು ತಮಿಳಿನ “ಜಿಗರ್‌ಥಂಡ’ ಚಿತ್ರದ ರಿಮೇಕ್. ಇಲ್ಲೂ ಕೂಡ ಅದೇ ಹೆಸರನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವಗಣೇಶ್. ಈ ವಾರ ತೆರೆಗೆ ಬರುತ್ತಿರುವ “ಜಿಗರ್‌ಥಂಡ’ ಬಗ್ಗೆ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳೂ ಇವೆ. ಅದಕ್ಕೆ ಕಾರಣ, ಕಥೆ ಹಾಗು ಕಲಾವಿದರು ಮತ್ತು ತಂತ್ರಜ್ಞರು ಎಂಬುದು ಚಿತ್ರ ತಂಡದ ಮಾತು. ಸದ್ಯಕ್ಕೆ ಬಿಡುಗಡೆಯ ಬಿಜಿಯಲ್ಲಿರುವ ನಿರ್ಮಾಪಕ ರಘುನಾಥ್, ಹೀರೋ ರಾಹುಲ್ ಹಾಗು ನಿರ್ದೇಶಕ ಶಿವಗಣೇಶ್ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಹೇಳಿಕೊಂಡಿದ್ದಾರೆ.
ನನ್ನ ಸಿನಿ ಬದುಕಿನ ದೊಡ್ಡ ಸಿನ್ಮಾ ಇದು…
“ಒಂದು ಗ್ಯಾಪ್ ಬಳಿಕ ಹೊಸದೊಂದು ಚಿತ್ರದಲ್ಲಿ ನಟಿಸಿದ್ದೇನೆ. “ಜಿಗರ್‌ಥಂಡ’ ಎಂಬಂತಹ ಚಿತ್ರ ನನ್ನ ಸಿನಿ ಬದುಕಿನಲ್ಲಿ ಹೊಸದೊಂದು ಐಡೆಂಟಿಟಿ ಕೊಡುತ್ತದೆ ಎಂದು ಬಲವಾಗಿ ನಂಬಿದ್ದೇನೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು’ ಅಂತ ಹೇಳಿ ಕ್ಷಣಕಾಲ ಸುಮ್ಮನಾದರು ರಾಹುಲ್. ಮತ್ತೆ ಮಾತು ಮುಂದುವರೆಸಿದ ರಾಹುಲ್, ಸುದೀಪ್ ಹಾಗು ಪ್ರಿಯಾ ಸುದೀಪ್ ಅವರಿಂದಲೇ ನಾನು “ಜಿಗರ್‌ಥಂಡ’ ಚಿತ್ರದ ಹೀರೋ ಆಗಲು ಕಾರಣ. ನನ್ನ ಮೇಲೆ ನಂಬಿಕೆ ಇಟ್ಟು, ರಘುನಾಥ್ ಅವರು ನಿರ್ಮಾಣ ಮಾಡಿದ್ದಾರೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಚಿತ್ರದಲ್ಲಿ ರವಿಶಂಕರ್ ಇದ್ದಾರೆ. ಅವರೇ ಚಿತ್ರದ ಹೈಲೈಟ್ ಅಂದರೆ ತಪ್ಪಿಲ್ಲ. ನಾವೆಲ್ಲ ಅವರೊಂದಿಗೆ ನಟಿಸಿದ್ದೇವಷ್ಟೇ. ಈ ಚಿತ್ರವನ್ನು ಶಿವಗಣೇಶ್ ನಿರ್ದೇಶಿಸಿದ್ದಾರೆ. ಈ ಹಿಂದೆ ನಾನು ಅಭಿನಯಿಸಿದ “ಹೃದಯದಲಿ ಇದೇನಿದು’ ಚಿತ್ರವನ್ನು ಸಹ ಇದೇ ಶಿವಗಣೇಶ್ ನಿರ್ದೇಶನ ಮಾಡಿದ್ದರು. ನಾವು ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಖುಷಿಯಿಂದ ಹೇಳುತ್ತಾರೆ ರಾಹುಲ್.
ತುಂಬಾ ಗ್ಯಾಪ್ ಬಳಿಕ ಒಂದೊಳ್ಳೆಯ ಚಿತ್ರದಲ್ಲಿ ನಟಿಸುತ್ತಿರುವುದು ಖುಷಿ ಕೊಟ್ಟಿದೆ. ಅದಕ್ಕಿಂತ ಹೆಚ್ಚಾಗಿ ಉತ್ಸಾಹ ಮೂಡಿದೆ. ನಾನು ಇದುವರೆಗೆ ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರ ನನಗೆ ಕೊಟ್ಟಷ್ಟು ವಿಶ್ವಾಸ, ನಂಬಿಕೆ ಹಿಂದಿನ ಚಿತ್ರಗಳು ಕೊಟ್ಟಿರಲಿಲ್ಲ. ಇಲ್ಲಿ ಗಟ್ಟಿ ಕಥೆ ಇದೆ. ಒಳ್ಳೆಯ ತಂತ್ರಜ್ಞರು ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅನುಭವಿ ಕಲಾವಿದರಿದ್ದಾರೆ. ಒಳ್ಳೇ ಬ್ಯಾನರ್‌ನಲ್ಲಿ ಸಿನಿಮಾ ತಯಾರಾಗಿದೆ. ನಮ್ಮ ಬೆನ್ನ ಹಿಂದೆ ಸುದೀಪ್ ಅವರಿದ್ದಾರೆ. ಹಾಗಾಗಿ “ಜಿಗರ್‌ಥಂಡ’ ಹೆಚ್ಚು ನಿರೀಕ್ಷೆ ಹೆಚ್ಚಿಸಿದೆ ಅನ್ನುವ ರಾಹುಲ್, “ಜಿಗರ್‌ಥಂಡ’ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಸುದೀಪ್ ಸರ್ ಮತ್ತು ನಿರ್ಮಾಪಕರಿಗೆ ನಾನು ಕೃತಜ್ಞನಾಗಿರುತ್ತೇನೆ ಚಿತ್ರದಲ್ಲಿ ಸಂಯುಕ್ತಾ ಹೊರನಾಡು, ರವಿಶಂಕರ್, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ ಎನ್ನುತ್ತಾರೆ ರಾಹುಲ್.
ಸೋನಿ ಎಫ್65 ಕ್ಯಾಮೆರಾದಲ್ಲಿ ಚಿತ್ರೀಕರಣ
ಈ ಚಿತ್ರದ ಮತ್ತೂಂದು ಹೈಲೈಟ್ ಅಂದರೆ, ಅದು ಕ್ಯಾಮೆರಾ. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಸೋನಿ ಎಫ್-65 ಕ್ಯಾಮೆರಾವನ್ನು ಬಳಸಲಾಗಿದೆ. ಇದುವರೆಗೆ ಕನ್ನಡದ ಕೆಲ ಚಿತ್ರಗಳಲ್ಲಿ ಕೇವಲ ಸಾಂಗ್ಸ್‌ಗಳಿಗಾಗಿ ಈ ಕ್ಯಾಮೆರಾವನ್ನು ಬಳಸಲಾಗಿದೆ. ಆದರೆ, ಈ ಕ್ಯಾಮೆರಾದಲ್ಲಿ “ಜಿಗರ್‌ಥಂಡ’ ಚಿತ್ರ ಪೂರ್ಣವಾಗಿ ಚಿತ್ರೀಕರಣಗೊಂಡಿರುವುದು ವಿಶೇಷ. ಇದು ತುಂಬಾ ದುಬಾರಿ ಕ್ಯಾಮೆರಾ. “ಬಾಹುಬಲಿ’ ಸಿನಿಮಾದಲ್ಲಿ ಈ ಕ್ಯಾಮೆರಾ ಬಳಸಲಾಗಿದೆ. ಆ ಸಿನಿಮಾದ ಸೆಟ್‌ನಿಂದ ನೇರವಾಗಿ, ನಮ್ಮ ಸೆಟ್‌ಗೆ ಬಂದು ಆ ಕ್ಯಾಮೆರಾದಲ್ಲೇ ಇಡೀ ಚಿತ್ರ ಮಾಡಿದ್ದೇವೆ. ಇದು ಸಿನಿಮಾದ ವಿಶೇಷತೆಗಳಲ್ಲೊಂದು. ಎಲ್ಲಾ ಕ್ಯಾಮೆರಾಗಳಿಗಿಂತಲೂ ಇದು ಒಂದು ಹೆಜ್ಜೆ ಮುಂದೆ ಇದೆ. ಸೋ, ಈ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿರುವ ಮೊದಲ ಕನ್ನಡ ಸಿನಿಮಾ ಅಂತ ಹೇಳುವುದಕ್ಕೂ ಖುಷಿಯಾಗುತ್ತದೆ ಎಂದು ವಿವರ ಕೊಡುತ್ತಾರೆ ರಾಹುಲ್.
ಸ್ಪೇನ್‌ನಲ್ಲಿ ಹಿನ್ನೆಲೆ ಸಂಗೀತಗೊಂಡ ಮೊದಲ ಚಿತ್ರ
ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ “ಜಿಗರ್‌ಥಂಡ’ ಹೊಸದೊಂದು ದಾಖಲೆ ಮಾಡಿದೆ. ಅದೇನೆಂದರೆ, ಮೊದಲ ಬಾರಿಗೆ ಸ್ಪೇನ್‌ನಲ್ಲಿ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ನಡೆದಿದೆ. ಹೌದು, ಆಸ್ಟ್ರೇಲಿಯಾದ ಸಿಂಗರ್ ಇಲ್ಲಿ ಹಾಡಿದ್ದಾರೆ. ಲಾಸ್ ಏಂಜಲೀಸ್‌ನ ಗಿಟಾರಿಸ್ಟ್ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಇಟಲಿ, ಆಸ್ಟ್ರೇಲಿಯಾ ಮತ್ತು ಸ್ಪೇನ್ ದೇಶದ ಸಂಗೀತಗಾರರು ಇಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟಕ್ಕೂ ಅಬ್ರಾಡ್‌ನಲ್ಲೇ “ಜಿಗರ್‌ಥಂಡ’ ಚಿತ್ರಕ್ಕೆ ಹಿನ್ನೆಲೆ ಸಂಗೀತದ ಕೆಲಸ ಮಾಡಿಸಿದ್ದು ಯಾಕೆ ಗೊತ್ತಾ? ಅದಕ್ಕೆ ಕಾರಣ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಅವರು ಇಡೀ ಸಿನಿಮಾ ಮುಗಿದ ಮೇಲೆ ನೋಡಿದಾಗ, ತಕ್ಷಣ, ಸುದೀಪ್ ಹಾಗು ನಿರ್ಮಾಪಕ ರಘುನಾಥ್ ಅವರಿಗೆ ಫೋನ್ ಮಾಡಿ, ಸಾರ್, ನನಗೊಂದು ಅವಕಾಶ ಕೊಡಿ.
ನಾನು ಬೇರೆ ಯಾವ ಸಿನಿಮಾಗೂ ಈ ರೀತಿಯ ಅವಕಾಶ ಕೇಳಿಲ್ಲ. ಒಂದು ಒಳ್ಳೆಯ ಚಿತ್ರ ಇದಾಗುತ್ತದೆ. ನನಗೆ ಲೈಫ್ ಟೈಮ್‌ನಲ್ಲಿ ಸಿಕ್ಕಿರುವ ಅಪರೂಪದ ಚಿತ್ರವಿದು. ಈ ಸಿನಿಮಾವನ್ನು ಬೇರೆ ಲೆವೆಲ್‌ನಲ್ಲಿ ತೆಗೆದುಕೊಂಡು ಹೋಗಬೇಕು ಅಂದುಕೊಂಡಿದ್ದೇನೆ. ಸಿನಿಮಾ ಬೇರೆ ರೀತಿ ಇರುವುದರಿಂದ ಹಿನ್ನೆಲೆ ಸಂಗೀತವನ್ನು ನಾನು ಸ್ಪೇನ್‌ನಲ್ಲಿ ಮಾಡಿಸಿಕೊಂಡು ಬರಿ¤àನಿ. ನೀವು ಅವಕಾಶ ಮಾಡಿಕೊಡಿ ಅಂದಾಗ, ಸುದೀಪ್ ಮತ್ತು ರಘುನಾಥ್ ಅವರು ಯೋಚಿಸಿ, ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಆ ಅವಕಾಶವನ್ನು ಅರ್ಜುನ್ ಜನ್ಯ ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಸ್ಪೇನ್‌ನಲ್ಲೇ ಎರಡೂರು ದೇಶಗಳ ಮ್ಯೂಸಿಷಿಯನ್ಸ್ ಬಂದು ಕೆಲಸ ಮಾಡಿದ್ದಾರೆ. ಸಿನಿಮಾ ನೋಡಿದವರಿಗೆ ಇದೊಂದು ಹೊಸ ಅನುಭವ ಕಟ್ಟಿಕೊಡುವುದು ಗ್ಯಾರಂಟಿ ಎಂದು ಹೇಳುತ್ತಾರೆ ರಾಹುಲ್.
ಕ್ಲೈಮ್ಯಾಕ್ಸ್‌ನಲ್ಲೊಂದು ಸರ್‌ಪ್ರೈಸ್ ಇದೆ!
ಇದು ಸುದೀಪ್ ಅವರ ಸಹಕಾರ, ಪ್ರೋತ್ಸಾಹದಿಂದ ಪೂರ್ಣಗೊಂಡಿರುವ ಸಿನಿಮಾ. ಎಲ್ಲವೂ ಅವರ ಸೂಚನೆ, ಸಲಹೆಯಿಂದ ತಯಾರಾಗಿರುವುದರಿಂದ ಸಿನಿಮಾದಲ್ಲಿ ಅವರು ಇದ್ದಾರಾ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಅವರು ಈ ಸಿನಿಮಾದ ಹಿಂದೆ ಇದ್ದಾರೆ ಅಂದಮೇಲೆ ಅವರು ಇರದಿದ್ದರೆ ಹೇಗೆ. ಆದರೆ, ಅವರು ಇಲ್ಲಿರುತ್ತಾರಾ, ಯಾವ ಪಾತ್ರ, ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಸಿನಿಮಾನೇ ನೋಡಬೇಕು. ಎಲ್ಲೋ ಒಂದು ಕಡೆ ಅವರು ಇರುತ್ತಾರೆ. ಇನ್ನು, ಕ್ಲೈಮ್ಯಾಕ್ಸ್‌ನಲ್ಲೊಂದು ಸರ್‌ಪ್ರೈಸ್ ಇದೆ. ನನ್ನ ಕಾಂಬಿನೇಷನ್‌ನಲ್ಲಿ ದೊಡ್ಡ ಸ್ಟಾರ್ ಒಬ್ಬರು ಬರುತ್ತಾರೆ. ಅವರು ಯಾರು ಎಂಬುದಕ್ಕೆ ಸಿನಿಮಾ ನೋಡಬೇಕು. ಇದಷ್ಟೇ ಅಲ್ಲ, ಇನ್ನೂ ಅನೇಕ ಸರ್‌ಪ್ರೈಸ್‌ಗಳೂ ಇವೆ. ಅದೆಲ್ಲವೂ ಸಿನಿಮಾ ನೋಡಿದಾಗಲಷ್ಟೇ ಗೊತ್ತಾಗುತ್ತದೆ. ಇನ್ನು, “ಜಿಗರ್‌ಥಂಡ’ ರವಿಶಂಕರ್ ಅವರಿಗೆ 50 ನೇ ಚಿತ್ರ. ಅವರಿಗೀಗ ವಯಸ್ಸು ಕೂಡ 50 ಸೋ, ಇದು ಅವರಿಗೊಂದು ಹೊಸತರಹದ ಚಿತ್ರವಾಗುತ್ತದೆ ಎಂಬುದು ರಾಹುಲ್ ಮಾತು.
ಶುಭಾಶಯ ಹೇಳಿದ ಸ್ಟಾರ್
ಕನ್ನಡದಲ್ಲಿ ಯಾವುದೇ ಒಂದು ಒಳ್ಳೆಯ ಚಿತ್ರ ಬಂದಾಗ, ಅಲ್ಲಿ ಕನ್ನಡದ ಸ್ಟಾರ್‌ನಟರ ಸಾಥ್ ಇದ್ದೇ ಇರುತ್ತದೆ. ಈ ಚಿತ್ರಕ್ಕೂ ಕನ್ನಡದ ಅನೇಕ ನಟರು ಶುಭಾಶಯ ತಿಳಿಸಿದ್ದಾರೆ. ಈಗಾಗಲೇ ಸಾಂಗ್ಸ್ ಮತ್ತು ಪ್ರೋಮೋ ನೋಡಿರುವ ಶಿವರಾಜ್‌ಕುಮಾರ್, ಯಶ್, ಶ್ರೀಮುರಳಿ ಸೇರಿದಂತೆ ಅನೇಕ ನಟರು ಶುಭಾಶಯ ಹೇಳಿದ್ದಾರೆ. ಚಿತ್ರದಲ್ಲಿ ಸಾಂಗ್ಸ್ ಮತ್ತು ಫೈಟ್ಸ್ ಹೈಲೈಟ್ ಆಗಿವೆ. ನನಗೆ ಇದೊಂದು ದೊಡ್ಡ ಲಾಂಚ್. ಲೈಫ್ನಲ್ಲಿ ಇಂತಹ ಅದೃಷ್ಟ ಯಾರಿಗೂ ಸಿಗೋದಿಲ್ಲ.
ವಿಶೇಷವೆಂದರೆ, ನನ್ನ ಅಭಿನಯದ ಈ ಚಿತ್ರ ರಾಜ್ಯಾದ್ಯಂತ ಸುಮಾರು 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ 175 ಚಿತ್ರಮಂದಿರಗಳು ಅಂತಿಮಗೊಂಡಿದ್ದು, ರಿಲೀಸ ಹೊತ್ತಿಗೆ 25 ಚಿತ್ರಮಂದಿರಗಳು ಅಂತಿಮಗೊಳ್ಳಲಿವೆ ಎಂದು ಹೇಳುತ್ತಾರೆ ರಾಹುಲ್.
ಕಟ್‌ಗಳಿಲ್ಲದೇ ಜಿಗರ್‌ಥಂಡ ಔಟ್ ರಘುನಾಥ್ ಸಿನಿಮಾಕ್ಕೆ ಯುಎ ಸರ್ಟಿಫಿಕೇಟು
ಸೆನ್ಸಾರ್ ಮಂಡಳಿ ಸುದ್ದಿಯಲ್ಲಿದೆ. ಅವರು ಯಾವ ಸಿನಿಮಾಕ್ಕೆ ಎಲ್ಲಿ ಕತ್ತರಿ ಹಾಕುತ್ತಾರೋ ಎಂದು ನಿರ್ದೇಶಕರು ನಿರ್ಮಾಪಕರು ಗಾಬರಿಯಿಂದ ಕಾಯುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ,ಸೆನ್ಸಾರ್ ಮಂಡಳಿಯೇ ಸಿನಿಮಾವನ್ನು ಲೀಕ್ ಮಾಡಿಬಿಟ್ಟರೇನು ಎಂಬ ಭಯವೂ ಉಡ್ತಾ ಪಂಜಾಬ್ ಘಟನೆಯ ನಂತರ ನಿರ್ಮಾಪಕರನ್ನು ಕಾಡುತ್ತಿದೆ.
“ಆದರೆ, ಎಲ್ಲವೂ ಸಸೂತ್ರವಾಗಿ ನಡೆಯಿತು’ ಅನ್ನುತ್ತಾರೆ ನಿರ್ಮಾಪಕ ರಘುನಾಥ್. ಕಿಚ್ಚ ಸುದೀಪ್ ಮತ್ತು ರಘುನಾಥ್ ಸ್ನೇಹದ ಕಾಣಿಕೆಯಾಗಿ ಹೊರಬರುತ್ತಿರುವ ಜಿಗರ್‌ಥಂಡ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ, ಯುಎ ಸರ್ಟಿಫಿಕೇಟು ಕೊಡುವ ಮೂಲಕ ಚಿತ್ರದ ಬಿಡುಗಡೆಯನ್ನು ಸುಗಮಗೊಳಿಸಿದೆ.
“ಅಲ್ಲಿಗೆ ಜೂನ್ 24ರಂದು ಚಿತ್ರ ತೆರೆಗೆ ಬರುವುದಕ್ಕೆ ಯಾವುದೇ ಅಡ್ಡಿಯೂ ಇಲ್ಲ ಅಂತಾಯಿತು. ನಮ್ಮ ಚಿತ್ರವನ್ನು ನೋಡಿದ ಸೆನ್ಸಾರ್ ಮಂಡಳಿ ಯಾವ ಕಟ್‌ಗಳನ್ನೂ ಹೇಳದೇ ಯುಎ ಸರ್ಟಿಫಿಕೇಟ್ ನೀಡಿದೆ. ಅಂದುಕೊಂಡಂತೆ ದೊಡ್ಡ ಮಟ್ಟದಲ್ಲಿ ಜಿಗರ್‌ಥಂಡ ಚಿತ್ರವನ್ನು ಕರ್ನಾಟಕಾದ್ಯಂತ ರಿಲೀಸ್ ಮಾಡುತ್ತಿದ್ದೇವೆ. ಎಸ್ ಆರ್ ವಿ ಪ್ರೊಡಕ್ಷನ್‌ನ ಮೊದಲ ಚಿತ್ರಕ್ಕೆ ಸಿಕ್ಕಿರುವ ಬೆಂಬಲದಿಂದ ಸಂತೋಷವಾಗಿದೆ’ ಎನ್ನುತ್ತಾರೆ ನಿರ್ಮಾಪಕ ರಘುನಾಥ್.
-ಉದಯವಾಣಿ
Comments are closed.