ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜನಪ್ರಿಯತೆ ಪಡೆದ ಕಲಾವಿದರ ಹಿಂದೆ ಬೀಳುವುದು ಗಾಂಧಿನಗರದ ಖಯಾಲಿ. ಅದು ನಟ- ನಟಿಯರಿಗೆ ಮಾತ್ರ ಸಿಮೀತವಲ್ಲ, ಗಾಯಕರ ವಿಚಾರದಲ್ಲೂ ಅಷ್ಟೇ. ಅಲ್ಲಿ ಹಾಡಿ ಪ್ರೇಕ್ಷಕರನ್ನು ರಂಜಿಸಿದವರು ಸಿನಿಮಾಕ್ಕೂ ಹಾಡುವುದು ಮಾಮೂಲು.
ಈಗ ಆ ಸರದಿ ಸಿಂಗರ್ ಚನ್ನಪ್ಪ ಹುದ್ದಾರ್ ಅವರದ್ದು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಝೀ ಟಿವಿಯ ‘ಸರಿಗಮಪ- ೧೧’ ರಲ್ಲಿ ಗೆದ್ದು ಕನ್ನಡಿಗರ ಮನೆ ಮಾತಾದ ಖ್ಯಾತಿ ಚನ್ನಪ್ಪ ಅವರಿಗಿದೆ. ಅದನ್ನೇ ಈಗ ‘ಪಾಸಿಬಲ್’ ಚಿತ್ರ ತಂಡ ಎನ್ಕ್ಯಾಶ್ ಮಾಡಿಕೊಂಡಿದೆ. ಈ ಚಿತ್ರಕ್ಕೆ ಯುವ ಬರಹಗಾರ ಎನ್ ಸ್ವರಾಜ್ ಬರೆದ ‘ವಿಧಿಯೆಂಬ ಜಾದೂಗಾರ’ ಎಂಬ ಪ್ಯಾಥೋ ಸಾಂಗ್ಗೆ ಚೆನ್ನಪ್ಪ ಹುದ್ದಾರ್ ಧ್ವನಿ ನೀಡಿದ್ದಾರೆ. ಮೂರು ದಿನಗಳ ಹಿಂದಷ್ಟೇ ಬೆಂಗಳೂರಿನ ರೇಣು ಸ್ಟುಡಿಯೋದಲ್ಲಿ ಈ ಹಾಡಿನ ರೀ ರೆಕಾರ್ಡಿಂಗ್ ನಡೆದಿದೆ.
‘ಜನ ಸೇವೆಯೇ ತನ್ನ ಕಾಯಕವೆಂದು ದುಡಿಯುವ ಚಿತ್ರದ ನಾಯಕ ತಾನೇ ಬಿಡಿಸಲಾಗದ ಸಮಸ್ಯೆಯ ಸುಳಿಗೆ ಸಿಲುಕಿದಾಗ ಬರುವ ಗೀತೆಯಿದು. ಸಹಜವಾಗಿಯೇ ಇದು ನೋವಿನ ಗೀತೆಯಾಗಿದ್ದರಿಂದ ಗಟ್ಟಿಧ್ವನಿಯಲ್ಲಿ ಹಾಡುವರು ಬೇಕಿತ್ತು. ಇದಕ್ಕಾಗಿ ಗಾಯಕರನ್ನು ಹುಡುಕುತ್ತಿದ್ದಾಗ ನನಗೆ ತಕ್ಷಣ ನೆನಪಾಗಿದ್ದು ಗಾಯಕ ಚೆನ್ನಪ್ಪ ಹುದ್ದಾರ್. ಮಂಡ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಲೇ ಭೇಟಿ ಮಾಡಿ, ಒಪ್ಪಿಸಿ , ಈ ಹಾಡನ್ನು ಹಾಡಿಸಿದ್ದೇವೆ. ಸಾಹಿತ್ಯ ಮತ್ತು ಸಂಗೀತಕ್ಕೆ ಅವರ ಧ್ವನಿ ತುಂಬಾನೆ ಹೊಂದಿಕೆ ಆಗಿದೆ. ಚಿತ್ರದಲ್ಲಿನ ಹಾಡುಗಳಲ್ಲಿಯೇ ಇದು ಹೈಲೈಟ್ ಆಗುವ ಭರವಸೆ ಮೂಡಿದೆ. ಇನ್ನೇನು ವಾರದಲ್ಲಿ ಈ ಹಾಡನ್ನು ಯುಟ್ಯೂಬ್ಗೆ ಹಾಕಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ‘ಪಾಸಿಬಲ್’ ನಿರ್ದೇಶಕ ಬಿಎನ್ ರಾಜು.
‘ಸರಿಗಮಪ’ ಸೀಸನ್ ೧೧ರಲ್ಲಿ ಗೆದ್ದ ನಂತರ ಯುವ ಗಾಯಕರ ಸಾಲಿನಲ್ಲಿ ಭರವಸೆ ಮೂಡಿಸಿರುವ ಚನ್ನಪ್ಪ ಹುದ್ದಾರ್, ಸಿನಿಮಾಕ್ಕಾಗಿ ಹಾಡಿದ್ದು ಇದೇ ಮೊದಲು. ಆ ಮಟ್ಟಿಗೆ ಈಗ ‘ಸರಿಗಮಪ’ ಎನ್ನುವ ರಿಯಾಲಿಟಿ ಶೋ ಚೆನ್ನಪ್ಪ ಪಾಲಿಗೆ ವರವಾಗಿದೆ. ‘ಸಿನಿಮಾದಲ್ಲಿ ಹಾಡಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಆಗಿದೆ. ಚಿತ್ರದ ನಿರ್ದೇಶಕರು ಬಂದು ಕೇಳಿದಾಗ ಹೇಗೆ ಒಪ್ಪಿಕೊಳ್ಳಬೇಕೋ ಎನ್ನುವ ಗೊಂದಲದಲ್ಲಿದ್ದೆ. ಅವರೇ ಒಂದಷ್ಟು ಕಾನ್ಪಿಡೆನ್ಸ್ ತುಂಬಿದರು. ಅದೇ ಜೋಶ್ನಲ್ಲಿ ಹಾಡಿದ್ದೇನೆ. ಚೆನ್ನಾಗಿ ಬಂದಿದೆಯೆಂದು ಚಿತ್ರ ತಂಡವರು ಹೇಳುತ್ತಿದ್ದಾರೆ. ಅದು ಸಂಗೀತಪ್ರಿಯರಿಗೆ ಇಷ್ಟವಾದರೆ, ನಾನೂ ಗಾಯಕನಾದೆ ಎನ್ನುವ ನೆಮ್ಮದಿ ಸಿಗಲಿದೆ’ ಎನ್ನುತ್ತಾರೆ ಚೆನ್ನಪ್ಪ.
‘ಪಾಸಿಬಲ್’ ಹೊಸಬರೇ ನಿರ್ದೇಶಿಸಿ, ನಿರ್ಮಿಸಿ ತೆರೆಗೆ ತರುತ್ತಿರುವ ಚಿತ್ರ. ಕಾಂತ್ರಾಜ್ ನಿರ್ಮಾಪಕರು. ದಿನೇಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಟ್ಟು ಐದು ಹಾಡುಗಳಿದ್ದು, ಇಲ್ಲಿ ಹಾಡಿದವರೆಲ್ಲ ಬಹುತೇಕ ಹೊಸಬರೇ ಎನ್ನುವುದು ವಿಶೇಷ. ಸಂತೋಷ ವೆಂಕಿ, ನವೀನ್ ಸಜ್ಜು ಜತೆಗೆ ಎಂಡಿ ಪಲ್ಲವಿ ಕೂಡ ಒಂದು ಹಾಡು ಹಾಡಿದ್ದಾರೆ. ಈ ತಿಂಗಳಲ್ಲಿಯೇ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

Comments are closed.