ಕರ್ನಾಟಕ

ಮೇಕೆದಾಟು ಯೋಜನೆಗೆ ತಕರಾರು ತೆಗೆದ ಜಯಲಲಿತ ವಿರುದ್ಧ ವಾಟಾಳ್ ಕಿಡಿ

Pinterest LinkedIn Tumblr

32

ಬೆಂಗಳೂರು: ಮೇಕೆದಾಟು ಯೋಜನೆಗೆ ತಕರಾರು ತೆಗೆದಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಜಯಲಲಿತ ಅವರ ಭೂತದಹನ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಜಯಲಲಿತ ಅವರ ಪ್ರತಿಕೃತಿ ದಹಿಸಿದ ವಾಟಾಳ್ ನಾಗರಾಜ್ ಅವರು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರ ಯೋಜನೆಯನ್ನು ತೀವ್ರವಾಗಿ ಖಂಡಿಸಿದರು.

ವಿದ್ಯುತಚ್ಛಕ್ತಿ ಹಾಗೂ ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿರುವುದು ಜಯಲಲಿತ ಅವರ ಅವಿವೇಕದ ಪರಮಾವಧಿಯಾಗಿದೆ. ಕುಡಿಯುವ ನೀರಿನ ಯೋಜನೆಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ತಿಳಿಸಿದರು. ಮೇಕೆದಾಟು ಯೋಜನೆಯನ್ನು ಆರಂಭಿಸಲು ಕರ್ನಾಟಕ ಸರ್ಕಾರ ವಿಳಂಬ ಮಾಡುತ್ತಿರುವ ಕ್ರಮವು ಸರಿಯಾಗಿಲ್ಲ. ಒಂದು ತಿಂಗಳೊಳಗಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ಸಿಎಂ ಮನೆ ಎದುರು ಹಗಲುರಾತ್ರಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ಅನೇಕ ಕಡೆ ಕುಡಿಯುವ ನೀರಿನ ಅನುಕೂಲವಾಗುತ್ತದೆ. ಈ ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದರು. ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಪದೇ ಪದೇ ಕ್ಯಾತೆ ತೆಗೆಯುತ್ತಾರೆ. ಅವರು ಮುಖ್ಯಮಂತ್ರಿಯಾದಾಗಲೆಲ್ಲ ಅನಗತ್ಯವಾಗಿ ತೊಂದರೆ ನೀಡುತ್ತಿರುತ್ತಾರೆ. ಮೇಕೆದಾಟು ಯೋಜನೆ ಜಾರಿಗೊಳಿಸುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ವಾಟಾಳ್ ಗುಡುಗಿದರು.

Comments are closed.