ಬೆಂಗಳೂರು, ಜೂ. ೧೬- ಬೇವು ಲೇಪಿತ ಯೂರಿಯಾದಿಂದ ರೈತರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಆದರೆ ಬೇವು ಲೇಪಿತ ಯೂರಿಯಾ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ಅಬ್ಬರದ ಪ್ರಚಾರ ಮಾಡುತ್ತಿದೆ. ರೈತರ ಬದುಕಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದೇವೆ ಎನ್ನುವಂತೆ ಮಾಧ್ಯಮಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಇಂದು ಇಲ್ಲಿ ಟೀಕಿಸಿದರು.
ಬೇವು ಲೇಪಿತ ಯೂರಿಯಾ ಬಳಕೆ ಆಂದೋಲನ ಈಗ ಆರಂಭವಾಗಿದ್ದಲ್ಲ. 3-4 ವರ್ಷಗಳ ಹಿಂದೆಯೇ ಆಂದೋಲನಕ್ಕೆ ಚಾಲನೆ ದೊರಕಿತ್ತು. ಈಗ ಪೂರ್ಣಪ್ರಮಾಣದಲ್ಲಿ ರೈತರು ಬೇವು ಲೇಪಿತ ಯೂರಿಯಾ ಬಳಕೆಗೆ ಮುಂದಾಗಿದ್ದಾರೆ. ಎನ್‌ಡಿಎ ಸರ್ಕಾರ ಬಂದ ನಂತರವೇ ಈ ಯೂರಿಯಾ ಬಳಕೆ ಹೆಚ್ಚಾಗುತ್ತಿದೆ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೇವು ಲೇಪಿತ ಯೂರಿಯಾದಿಂದ ಯೂರಿಯಾಕ್ಕೆ ನೀಡುತ್ತಿದ್ದ ಸಬ್ಸಿಡಿ ದುರ್ಬಳಕೆ ಆಗುವುದನ್ನು ಮತ್ತು ಯೂರಿಯಾ ಸೋರಿಕೆಯಾಗುತ್ತಿರುವುದನ್ನು ತಡೆಯಲು ಅನುಕೂಲವಾಗಿದೆ. ಕೇಂದ್ರ ಸರ್ಕಾರಕ್ಕೆ ಸಬ್ಸಿಡಿ ಹಣ ಉಳಿತಾಯವಾಗಿದೆ. ಇದರಿಂದ ರೈತರಿಗೇನೂ ಪ್ರಯೋಜನವಾಗಿಲ್ಲ. ತೀರಾ ಸ್ವಲ್ಪ ಮಟ್ಟಿಗೆ ಪ್ರಯೋಜನ ಆಗಿರಬಹುದಷ್ಟೆ ಎಂದರು.
ಟಿಂಬರ್ ಕಾರ್ಖಾನೆಗಳು ಯೂರಿಯಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು. ಈಗ ಬೇವು ಲೇಪಿತ ಯೂರಿಯಾ ಪೂರೈಕೆ ಮಾಡುವುದರಿಂದ ಅದನ್ನು ತಡೆಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಜಮೀನು ನೀಡಲು ಸಿದ್ಧ
ಉತ್ತರ ಕರ್ನಾಟಕ ಭಾಗದಲ್ಲಿ ರಸಗೊಬ್ಬರ ಕಾರ್ಖಾನೆ ಪ್ರಾರಂಭಿಸಲು ಅಗತ್ಯವಿರುವಷ್ಟು ಜಮೀನು ಕೊಡಲು ಸರ್ಕಾರ ಸಿದ್ಧವಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಅವರಿಗೆ ಪತ್ರ ಬರೆದು ಜಮೀನು ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ. ಆದರೆ ಕೇಂದ್ರ ಸಚಿವರು ಜಮೀನು ಕೊಡಲು ಸರ್ಕಾರ ಸಿದ್ಧವಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಅವರು, ರಸಗೊಬ್ಬರ ಕಾರ್ಖಾನೆಗೆ ಜಮೀನು ನೀಡುವ ವಿಚಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದಾರೆ. ಕೇಂದ್ರ ಸಚಿವರೊಂದಿಗೂ ಸಂಪರ್ಕದಲ್ಲಿದ್ದಾರೆ ಎಂದರು.
ಸಾವಯವ ಕೃಷಿಗೆ ಸರ್ಕಾರ ಹೆಚ್ಚು ಒತ್ತು ನೀಡಿದೆ. ಕಳೆದ ಎರಡು ವರ್ಷಗಳಿಂದ 63 ಸಾವಿರ ಹೆಕ್ಟೇರ್‌ನಷ್ಟು ಜಮೀನು ಸಾವಯವ ಕೃಷಿಗೆ ಒಳಪಟ್ಟಿದೆ. ಸಾವಯವ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡುವ ಅಗತ್ಯವಿದ್ದು, ಇದಕ್ಕಾಗಿ ಕೆ.ಎಂ.ಎಫ್ ಮಾದರಿಯಲ್ಲಿ 14 ರೈತರ ಒಕ್ಕೂಟಗಳನ್ನು ರಚನೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 566 ಕ್ಲಸ್ಟರ್‌ಗಳಿದ್ದು, ಒಕ್ಕೂಟಗಳ ರಚನೆಗೆ ಪ್ರೋತ್ಸಾಹಿಸುತ್ತಿದ್ದೇವೆ. ಪ್ರತಿಯೊಂದು ಒಕ್ಕೂಟಕ್ಕೆ 20 ಲಕ್ಷ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.
ರಾಜ್ಯದಲ್ಲೆಡೆ ಕೃಷಿ ಹೊಂಡಗಳ ನಿರ್ಮಾಣ ಕಾರ್ಯ ಮುಂದುವರೆದಿದ್ದು, ಈ ವರ್ಷ 1 ಲಕ್ಷ ಹೊಂಡಗಳ ನಿರ್ಮಾಣ ಆಗಲಿದೆ ಎಂದರು.
Comments are closed.