ಸುನಗ (ಬಾಗಲಕೋಟೆ ಜಿಲ್ಲೆ): ಗ್ರಾಮದಲ್ಲಿ ಕಳ್ಳಬಟ್ಟಿ ಮಾರಾಟ ತಡೆಯಬೇಕು ಎಂದು ಒತ್ತಾಯಿಸಿ ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯ್ತಿ ಕಚೇರಿ ಆವರಣದ ಎದುರು ಪ್ರತಿಭಟನೆ ನಡೆಸಿದರು.
ಬೀಳಗಿ ತಾಲ್ಲೂಕಿನ ಸುತ್ತಮುತ್ತಲಿನ ತಾಂಡಾಗಳಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದು, ಗ್ರಾಮದಲ್ಲಿ ಎಗ್ಗಿಲ್ಲದೇ ಕಳ್ಳಬಟ್ಟಿ ಮಾರಾಟ ನಡೆಯುತ್ತಿದೆ. ಇದನ್ನು ತಡೆಯಬೇಕು. ‘ನಮ್ಮ ಊರು ಸಾರಾಯಿ ಮುಕ್ತವಾಗಬೇಕು’ ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ‘ವಾರದೊಳಗೆ ಈ ಕೆಲಸ ಆಗದಿದ್ದರೆ ನಮಗೊಂದಿಷ್ಟು ವಿಷ ಕೊಡಿ; ಕುಡಿದು ಸಾಯುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮದ್ಯಪಾನ ಮಾಡಿ ಊರಿಗೆ ಬಂದವರನ್ನು ಹಾಗೂ ಅಕ್ರಮವಾಗಿ ಸಾರಾಯಿ ಮಾರಿದವರನ್ನು ಮಹಿಳೆಯರೇ ಹಿಡಿದು ಥಳಿಸಿ, ಬುದ್ಧಿ ಕಲಿಸಬೇಕು ಎಂಬ ಸಂಕಲ್ಪವನ್ನೂ ಅವರು ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮವ್ವ ನಾಗರಾಳ, ‘ದಿನಾ ಪೂರ್ತಿ ದುಡದ್ರ ನಮಗ ನೂರು ರೂಪಾಯಿ ಕೊಡ್ತಾರ. ಗಂಡಸರು ಮನ್ಯಾಗ ಕುತಗೊಂಡು ಯಾಡ್ನೂರು (ಇನ್ನೂರು) ರೂಪಾಯಿ ಕುಡ್ದ ಹಾಳ್ ಮಾಡ್ತಾರ. ಸಂಜೀತನಾ ದುಡ್ದು ಬಂದ ನಮಗ ರಾತ್ರಿ ಹೊತ್ತು ನಿದ್ದಿ ಮಾಡಾಕೂ ಆಗವಲ್ದು. ಮನ್ಯಾಗ ಗಂಡಸ್ರು ಕುಡ್ದ ಬಂದು ದಿನಾಲೂ ಜಗಳ, ಕಿರಿಕಿರಿ ಮಾಡ್ತಾರ. ಹಿಂಗಾದ್ರ ಜೀವನಾ ಹೆಂಗ್ ಮಾಡಬೇಕ್ರಿ? ಊರಾಗ ಸೆರೆ ಬಂದ್ ಮಾಡಿ ಪುಣ್ಯಾ ಕಟ್ಕೊಳ್ರಿ’ ಎಂದು ಮನವಿ ಮಾಡಿದರು.
ಅಬಕಾರಿ ಇಲಾಖೆ ಉಪ ಅಧೀಕ್ಷಕ ಸಂಗನಗೌಡ ಹೊಸಳ್ಳಿ, ‘ಈ ಭಾಗದಲ್ಲಿನ ಕಳ್ಳಬಟ್ಟಿ ತಯಾರಿಕೆ ಕುರಿತು ಮಾಹಿತಿ ನೀಡಿದರೆ ದಾಳಿ ನಡೆಸಲಾಗುವುದು ಎಂದರು.
ಪಡಿಯವ್ವ ನಾಗರಾಳ, ರತ್ನವ್ವ ನಾಗರಾಳ, ಮುತ್ತವ್ವ ಗುಣದಾಳ, ಕಮಲವ್ವ ದಾನಿ, ಸಾಬವ್ವ ಗಿರಿಸಾಗರ, ಬೇಗಂ ತಹಶೀಲ್ದಾರ್ ಭಾಗವಹಿಸಿದ್ದರು.
ಗ್ರಾ.ಪಂ. ಬೆಂಬಲ
ಗ್ರಾಮವನ್ನು ಸಾರಾಯಿ ಮುಕ್ತ ಮಾಡಲು ಮಹಿಳೆಯರು ಕೈಗೊಂಡಿ ರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಲ್ಲಪ್ಪ ತೋಳಮಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು. ಇದೇ 18ರಂದು ಸಾಮಾನ್ಯ ಸಭೆ ಕರೆಯಲಾಗಿದ್ದು, ಈ ಕುರಿತು ಅಂದು ನಿರ್ಣಯ ಕೈಗೊಳ್ಳ ಲಾಗುವುದು ಎಂದರು.
Comments are closed.