ಕರ್ನಾಟಕ

ಹೊರಟ್ಟಿ ಗೆಲುವಿನ ನಾಗಲೋಟ ಮುಂದುವರಿಕೆ ! ಗಿನ್ನಿಸ್ ದಾಖಲೆಯ 7 ನೇ ಗೆಲುವು

Pinterest LinkedIn Tumblr

horatti

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಯಲ್ಲಿ 7 ನೇ ಬಾರಿ ಗೆಲುವು ದಾಖಲಿಸುವ ಮೂಲಕ ಜೆಡಿ(ಎಸ್) ನ ಬಸವರಾಜ್ ಹೊರಟ್ಟಿ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ನಗರದ ಜ್ಯೋತಿ ಕಾಲೇಜನಲ್ಲಿ ಆರಂಭವಾದ ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಅಧಿಕಾರಿಗಳೂ ಆಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತ ಎನ್.ಜಯರಾಮ್ ಅವರು ಎಲ್ಲ ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಮೊದಲು ಮತ ಪೆಟ್ಟಿಗೆಗಳನ್ನು ಒಡೆದು ಮತಪತ್ರಗಳ ವಿಂಗಡಣೆಗೆ ಚಾಲನೆ ನೀಡಿದರು.

ನಂತರ ಸಿಬ್ಬಂದಿ ಮತ ಪತ್ರಗಳನ್ನು ವಿಂಗಡಿಸಿ ಎಣಿಕೆ ಆರಂಭಿಸಿದರು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 7 ಜನ ಅಭ್ಯರ್ಥಿಗಳು ಕಣದಲ್ಲಿದ್ದರು. 22 ಸಾವಿರದ 388 ಮತದಾರರ ಪೈಕಿ 14,939 ಶಿಕ್ಷಕರ ಮತಚಲಾಯಿಸಿದ್ದರು. ಕಣದಲ್ಲಿದ್ದ ಜೆಡಿ(ಎಸ್)ನ ಬಸವರಾಜ ಹೊರಟ್ಟಿ 7480 ಪ್ರಥಮ ಪ್ರಾಶಸ್ತ್ಯದ ಮತಗಳೊಂದಿಗೆ 7 ನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಜಯಭೇರಿ ಬಾರಿಸಿದರು.ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮಾ.ನಾಗರಾಜ 4371, ಕಾಂಗ್ರೆಸ್ ನ ಟಿ.ಈಶ್ವರ 1352, ಬಿಜೆಪಿ ಬಂಡಾಯ ಅಭ್ಯರ್ಥಿ ಎಮ್.ಕುಬೇರಪ್ಪ ಕೇವಲ 883 ಮತಗಳನ್ನು ಪಡೆಯುವಲ್ಲಿ ಸಫಲರಾದರು.784 ಮತಗಳು ತಿರಸ್ಕೃತಗೊಂಡಿವೆ. ಹೊರಟ್ಟಿ ಗೆಲುವು ಘೋಷಣೆಯಾಗುತ್ತಿದ್ದಂತೆ ಸ್ಥಳದಲ್ಲಿದ್ದ ಸಾವಿರಾರು ಶಿಕ್ಷಕರು, ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಎಂ.ಬಿ.ನಾತು, ಗಡದಿನ್ನಿ,ವಸಂತ ಹೊರಟ್ಟಿ, ಶಾಸಕ ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ ಎಮ್.ಎಸ್.ಅಕ್ಕಿ, ರಾಜಣ್ಣ ಕೊರವಿ, ಗಜಾನನ ಅಣವೇಕರ, ಬಸವರಾಜ ರಾಯನಗೌಡರ, ಶ್ರೀಕಾಂತ ಮಗಜಿಕೊಂಡಿ, ಕಿರಣ ಹಿರೇಮಠ ಸೇರಿದಂತೆ ಅನೇಕರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ಇನ್ನು ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಬೇಕಿದ್ದು, ಸಂಜೆವೇಳೆಗೆ ಫಲಿತಾಂಶ ದೊರಕುವ ನಿರೀಕ್ಷೆಯಿದೆ. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ ಶಹಾಪುರ ಪುನರಾಯ್ಕೆ ಬಯಸಿದ್ದು, ಕಾಂಗ್ರೆಸ್ ನಿಂದ ಎಸ್.ಬಿ.ಬನ್ನೂರ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಚಂದ್ರಶೇಖರ ಲೋಣಿ ಕಣದಲ್ಲಿದ್ದಾರೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಶಿವಾನಂದ ಕೌಜಲಗಿ, ಬಿಜೆಪಿಯ ಹನುಮಂತ ನಿರಾಣಿ, ಜೆಡಿಎಸ್ ನಿಂದ ಸಾತಗೌಡಾ ಪಾಟೀಲ, ಜೆಡಿಯು ನಿಂದ ಎಮ್.ಪಿ.ನಾಡಗೌಡ ಸ್ಪರ್ಧಿಸಿದ್ದು ಸಂಜೆ ವೇಳೆಗೆ ಇವರ ಭವಿಷ್ಯ ನಿರ್ಧಾರವಾಗಲಿದೆ.

Comments are closed.