ಕರ್ನಾಟಕ

ಅನುಪಮಾ ಶೆಣೈ ರಾಜಕೀಯ ಸೇರುವುದಿಲ್ಲ: ಅಚ್ಯುತ್‌ ಶೆಣೈ

Pinterest LinkedIn Tumblr

anupama

ಭಟ್ಕಳ : ‘ಸಹೋದರಿ ಅನುಪಮಾ ಸರ್ಕಾರದ ವಿರುದ್ಧ ಸಮರ ಸಾರಿಲ್ಲ ಮತ್ತು ರಾಜಕೀಯ ಸೇರುವುದಿಲ್ಲ’ ಎಂದು ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಅವರ ಸಹೋದರ ಅಚ್ಯುತ್‌ ಶೆಣೈ ಮತ್ತು ಸಹೋದರಿ ಅಪೂರ್ವಾ ಗಾಯತೊಂಡೆ ತಿಳಿಸಿದರು.

ಅಪೂರ್ವಾ, ಅಚ್ಚುತ್‌ ಅವರು ತಾಯಿ ನಳಿನಿ ಶೆಣೈಅವರೊಂದಿಗೆ ಶುಕ್ರವಾರ ಮುಂಜಾನೆ 11ರ ಸುಮಾರಿಗೆ ಅವರ ಸಂಬಂಧಿ, ಖಾಸಗಿ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಶೆಣೈ ಅವರ ಮನೆಗೆ ಬಂದರು.

ಅನುಪಮಾ ಅವರು ಭಟ್ಕಳಕ್ಕೆ ಬರುತ್ತಿದ್ದಾರೆ ಎಂದು ರಘುನಾಥ ಅವರ ಮನೆಗೆ ತೆರಳಿದ್ದ ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದು ಅಪೂರ್ವಾ ಮತ್ತು ಅಚ್ಯುತ್‌ ಮಾತ್ರ.
‘ನಾವು ಬಳ್ಳಾರಿಯಿಂದ ಒಟ್ಟಿಗೆ ಹೊರಟರೂ, ಮಾರ್ಗದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಅನುಪಮಾ ತೆರಳಿದರು. ನೀವು ಮುಂದೆ ಹೋಗಿ, ನಾನು ಬರುತ್ತೇನೆ ಎಂದು ಹೇಳಿ ಹೋದವಳು ಇನ್ನೂ ಬಂದಿಲ್ಲ. ಮೊಬೈಲ್‌ ಕರೆಗೂ ಸಿಗುತ್ತಿಲ್ಲ. ನಾನು ಕ್ಷೇಮವಾಗಿದ್ದೇನೆ ಎಂದು ಸಂದೇಶ ಕಳುಹಿಸಿದ್ದು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಇಲ್ಲ’ ಎಂದು ಅವರು ಹೇಳಿದರು.

‘ಬಳ್ಳಾರಿಯಲ್ಲಿ ಹಿರಿಯ ಅಧಿಕಾರಿಗಳು ಮನವೊಲಿಸಿ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸುತ್ತಾರೆ ಎಂದು ಅನುಪಮಾ ಭಾವಿಸಿದ್ದಳು. ಆದರೆ ಸರ್ಕಾರ ರಾಜೀನಾಮೆ ಅಂಗೀಕಾರ ಮಾಡಿದ್ದು ಅಚ್ಚರಿಯ ಜತೆಗೆ ಅವಮಾನವೂ ಆಯಿತು. ಹೀಗಾಗಿ ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ ಅವರಿಗೆ ಗೆಲುವು ದೊರಕಿದಂತಾಗಿದೆ. ಆದರೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ಅನುಪಮಾಳ ಹುದ್ದೆಗೆ ಸಂಚಕಾರ ಬಂತು’ ಎಂದು ಇಬ್ಬರೂ ತಮ್ಮ ನೋವು ತೋಡಿಕೊಂಡರು.

ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಅನುಪಮಾ ಬಿಜೆಪಿ ಪಕ್ಷ ಸೇರುತ್ತಾರೆ ಎಂದು ಹರಡಿರುವ ವದಂತಿಯನ್ನು ಅಚ್ಯುತ್‌ ತಳ್ಳಿ ಹಾಕಿದರು.
ತಾಯಿ ಆಗ್ರಹ: ‘ಚಿಕ್ಕಂದಿನಿಂದಲೂ ಅಂದುಕೊಂಡಿದ್ದನ್ನು ಸಾಧಿಸುವ, ನೇರ ನಡೆ, ನುಡಿಯವಳಾಗಿದ್ದ ನನ್ನ ಮಗಳ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದ್ದು ಆಕೆಗೆ ಭಾರಿ ಹಿನ್ನಡೆಯಾದಂತಾಗಿದೆ. ರಾಜಕೀಯ ಶಕ್ತಿಗಳ ಮುಂದೆ ಪ್ರಾಮಾಣಿಕತೆ ಮಂಕಾಗಿದೆ. ಅವಳಿಗೆ ಬೇರೆಡೆ ವರ್ಗಾಯಿಸಿ, ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು’ ಎಂದು ನಳಿನಿ ಶೆಣೈ ಸರ್ಕಾರಕ್ಕೆ ಆಗ್ರಹಿಸಿದರು.

Comments are closed.