ಕರಾವಳಿ

ಚತುಷ್ಪತ ಕಾಮಗಾರಿ ಅವಾಂತರ: ಕುಂದಾಪುರ ತಲ್ಲೂರು ಜನರಿಗೆ ಮಳೆಗಾಲದಲ್ಲಿ ಕಾದಿದೆ ಗಂಡಾಂತರ..!

Pinterest LinkedIn Tumblr

ವರದಿ,ಚಿತ್ರ-ಯೋಗೀಶ್ ಕುಂಭಾಸಿ

ಕುಂದಾಪುರ: ಒಂದೂರಿನಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು ಅವೈಜ್ಞಾನಿಕವಾದರೇ ಆ ಭಾಗದ ಜನರ ಮೇಲೆ ಸಾಕಷ್ಟು ಪರಿಣಾಮ ಬೀರುವುದು ಮಾತ್ರವಲ್ಲದೇ ಗಂಭೀರ ಸಮಸ್ಯೆಗಳನ್ನು ಜನರು ಅನುಭವಿಸಬೇಕಾಗುತ್ತದೆ ಎನ್ನುವುದಕ್ಕೆ ಕುಂದಾಪುರ ತಾಲೂಕಿನ ತಲ್ಲೂರು ಕಲ್ಕೆರೆ ಎಂಬಲ್ಲಿನ ಜನರು ಅನುಭವಿಸುತ್ತಿರುವ ಮಳೆ ನೀರಿನಿಂದಾಗುವ ನೆರೆ ಸಮಸ್ಯೆಯೇ ಸಾಕ್ಷಿ. ಅಷ್ಟಕ್ಕೂ ಇದೆಲ್ಲಾ ಅವಂತರಕ್ಕೆ ಕಾರಣವಾಗಿರುವುದು ಚತುಷ್ಪತ ಕಾಮಗಾರಿ.

Kundapura_Rain_Problem (9) Kundapura_Rain_Problem (6) Kundapura_Rain_Problem (4) Kundapura_Rain_Problem (5) Kundapura_Rain_Problem (3) Kundapura_Rain_Problem (2)

ಕುಂದಾಪುರದಿಂದ ಕಾರವಾರ ತನಕ ನಡೆಯುತ್ತಿರುವ ಚತುಷ್ಪತ ಕಾಮಗಾರಿ ಈಗಾಗಲೇ ಭರದಿಂದ ಸಾಗ್ತಾ ಇದೆ. ಅಲ್ಲಲ್ಲಿ ಸೇತುವೆ ಕಾಮಗಾರಿಯನ್ನೇ ಮೊದಲು ಆರಂಭಿಸಿರುವ ಗುತ್ತಿಗೆ ಕಂಪೆನಿಯಾದ ಐ.ಆರ್.ಬಿ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಹರಸಾಹಸಪಡುತ್ತಿದೆಯಾದರೂ ಮಳೆಗಾಲದಲ್ಲಿ ಜನರ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂಬ ಕಿಂಚಿತ್ತೂ ಮುಂದಾಲೋಚನೆಯಿಲ್ಲದೇ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದೆ. ಇದರಿಂದಾಗಿ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇರುವ ಕಲ್ಕೆರೆ ಎಂಬಲ್ಲಿನ ಜನರಿಗೆ ನೆರೆ ಸಮಸ್ಯೆ ಕಾಡುತ್ತಿದೆ. ಕಲ್ಕೆರೆ ಪ್ರದೇಶದಲ್ಲಿ ಹತ್ತಾರು ಮನೆಗಳಿದ್ದು ಸಾವಿರಾರು ಎಕ್ರೆ ಕೃಷಿಭೂಮಿಗಳಿದ್ದು ಸಣ್ಣಮಳೆಗೂ ಈ ಭಾಗ ಹೊಳೆಯಂತಾಗಿ ಮನೆಯೊಳಗೆ ನೀರು ನುಗ್ಗುತ್ತಿದೆ. ಕೃಷಿಗಾಗಿ ಗದ್ದೆಗೆ ಹಾಕಿದ ಗೊಬ್ಬರ ನೀರುಪಾಲಾಗುತ್ತಿದೆ. ಇದರಿಂದ ಇಲ್ಲಿ ಬೇಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ರಾಬರ್ಟ್ ತಿಳಿಸಿದ್ದಾರೆ.

Kundapura_Rain_Problem (7) Kundapura_Rain_Problem (10) Kundapura_Rain_Problem (8)

ಅಷ್ಟಕ್ಕೂ ಈ ಹಿಂದೆಲ್ಲಾ ತಲ್ಲೂರು ಕಲ್ಕೆರೆ ಪ್ರದೇಶದಲ್ಲಿ ಈ ಸಮಸ್ಯೆ ಇರಲಿಲ್ಲ. ಯಾವಾಗ ಚತುಷ್ಪತ ಕಾಮಗಾರಿ ಈ ಭಾಗದಲ್ಲಿ ಆರಂಭವಾಯಿತೋ ಅಂದಿನಿಂದ ಇಲ್ಲಿನ ಜನರಿಗೆ ಸಂಕಷ್ಟವೂ ಆರಂಭವಾಯಿತು. ಕಳೆದ ಮಳೆಗಾಲದಲ್ಲಿಯೂ ಕಲ್ಕೆರೆ ಜನರು ನೆರೆ ಸಮಸ್ಯೆ ಅನುಭವಿಸಿ ಹೈರಾಣಾಗಿದ್ದರು. ಈ ಬಾರೀ ಮಳೆಗಾಲ ಆರಂಭವಾಗಿದ್ದು ಜನರ ಕಷ್ಟದ ದಿನಗಳು ಆರಂಭಗೊಂಡಿದೆ. ಹೊಳೆಯ ಸಮೀಪವೇ ಕಲ್ಕೆರೆ ಪ್ರದೇಶವಿರುವುದೇ ಇಷಕ್ಕೆಲ್ಲಾ ಕಾರಣ. ಈಗಾಗಲೇ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್.ಬಿ. ಕಂಪೆನಿ ಹೊಳೆಗೆ ಬ್ರಿಡ್ಜ್ ನಿರ್ಮಿಸಲು ಸಿದ್ದತೆ ಮಾಡಿದ್ದು ಈ ಪ್ರದೇಶದಲ್ಲಿ ಕೆಂಪು ಮಣ್ಣು ತುಂಬಿಸಿ ಪರ್‍ಯಾಯ ರಸ್ತೆ ಮಾಡಲಾಗಿದೆ. ಈ ಮೊದಲು ಮಳೆಗಾಲದಲ್ಲ್ಲಿ ಹಟ್ಟಿಯಂಗಡಿ, ಗುಡ್ಡೆಯಂಗಡಿ ಸೇರಿದಂತೆ ಹಲವು ಪ್ರದೇಶಗಳಿಂದ ಮಳೆ ನೀರು ಚರಂಡಿ ಮೂಲಕ ಹೊಳೆ ಸೇರುತ್ತಿತ್ತು. ಅಲ್ಲದೇ ಕಲ್ಕೆರೆ ಸಮೀಪದ ಕೆರೆಯಿದ್ದು ಅದರಲ್ಲಿ ಹೆಚ್ಚಿದ ನೀರು, ಕಲ್ಕೆರೆ ಭಾಗದಲ್ಲಿನ ಮಳೆ ನೀರು ಚಿಕ್ಕದೊಂದು ಚರಂಡಿ ಮೂಲಕ ಹೊಳೆ ಸೇರುವ ಕಾರಣ ಮಳೆಗಾಲ ನಿರಾಂತಕವಾಗಿತ್ತು. ಕಳೆದ ವರ್ಷದಿಂದ ಕಾಮಗಾರಿ ಸಲುವಾಗಿ ಈ ಎಲ್ಲಾ ಚರಂಡಿ ಮುಚ್ಚಿ ನೀರು ಹರಿಯಲು ಯಾವುದೇ ಪರ್‍ಯಾಯ ವ್ಯವಸ್ಥೆ ಮಾಡಿಕೊಡದಿರುವುದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಕಳೆದ ಬಾರೀ ಹೊಳೆಯ ಉಪ್ಪುನೀರು ನುಗ್ಗಿ ಹಲವು ತೆಂಗಿನ ಮರಗಳು ನಾಶವಾಗಿದೆ, ಕೃಷಿಯೂ ಹಾಳಾಗಿದೆ. ಇನ್ನು ಇಷ್ಟು ಸಮಸ್ಯೆಯಿದ್ದರೂ ಕೂಡ ಸಂಬಂದಪಟ್ಟ ತಲ್ಲೂರು ಗ್ರಾಮಪಂಚಾಯತ್ ಯಾವುದೇ ಕ್ರಮಕೈಗೊಂಡು ಗುತ್ತಿಗೆ ಕಂಪೆನಿಗೆ ವಿಚಾರ ಮನದಟ್ಟು ಮಾಡಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

Kundapura_Rain_Problem (1)

ಚತುಷ್ಪತ ಕಾಮಗಾರಿ ನಡೆಸುತ್ತಿರುವ ಪರಿಣಾಮ ತಲ್ಲೂರು ಕಲ್ಕೆರೆ ಪ್ರದೇಶದಲ್ಲಿ ನೆರೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಎಲ್ಲಾ ಸಭೆಗಳಲ್ಲಿ ವಿಚಾರ ಪ್ರಸ್ತಾಪಿಸಿ ಚರ್ಚಿಸಲಾಗಿದೆಯಾದರೂ ಪಂಚಾಯತ್ ಅಧ್ಯಕ್ಷರು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ ಎಂದು ತಲ್ಲೂರು ಗ್ರಾಮಪಂಚಾಯತ್ ಪಕ್ಷೇತರ ಸದಸ್ಯ ಉದಯಕುಮಾರ್ ತಲ್ಲೂರು ಆರೋಪಿಸಿದ್ದಾರೆ. ಜನರಿಗೆ ಉತ್ತರ ಕೊಡಬೇಕಾದ ಅಗತ್ಯ ಜನಪ್ರತಿನಿಧಿಗಳಿಗೆಲ್ಲರಿಗೂ ಇದೆ. ಕಾಮಗಾರಿ ಗುತ್ತಿಗೆ ಕಂಪೆನಿಗೆ ವಿಚಾರ ಮುಟ್ಟಿಸಿ ಜನರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಪಂದಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಜನರೇ ಹೇಳುವ ಹಾಗೆ ಬಿಜೆಪಿ ಕಾಂಗ್ರೆಸ್ ರಾಜಕೀಯ ಕಿತ್ತಾಟವೋ ಅಥವಾ ಅಧಿಕಾರಿಗಳ ಕರ್ತ್ಯವಲೋಪವೋ..ತಲ್ಲೂರು ಕಲ್ಲುಕೆರೆ ಜನರು ಮಳೆಗಾಲದಲ್ಲಿ ನರಕಯಾತನೆ ಪಡುತ್ತಿರುವುದು ಸುಳ್ಳಲ್ಲ. ಇನ್ನಾದರೂ ಸಂಬಂದಪಟ್ಟವರು ತುರ್ತು ಕ್ರಮಕೈಗೊಳ್ಳುವರೇ ಕಾದುನೋಡಬೇಕಿದೆ.

 

Comments are closed.