ಕರ್ನಾಟಕ

ವಿದ್ಯಾರ್ಥಿನಿ ಕನ್ನಡದಲ್ಲಿ ಗಳಿಸಿದ್ದು 72, ಅಂಕ ಪಟ್ಟಿಯಲ್ಲಿ ನಮೂದಾಗಿದ್ದು 12 ! ಅನುತ್ತೀರ್ಣಳಾಗಿ ನೊಂದಿದ್ದ ಬಾಲೆಗೆ 409 ಅಂಕ!

Pinterest LinkedIn Tumblr

32

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿ ಖಿನ್ನತೆಗೆ ಒಳಗಾಗಿದ್ದ ಬಾಲಕಿಯ ಉತ್ತರ ಪತ್ರಿಕೆಯ ಫೋಟೊ ಪ್ರತಿ ಪೋಷಕರ ಕೈಸೇರಿದ್ದು, ಆಕೆ ಒಟ್ಟು 409 ಅಂಕ ಪಡೆಯುವ ಮೂಲಕ ಪ್ರಥಮ ದರ್ಜೆಗೆ ಅರ್ಹಳಾಗಿದ್ದಾಳೆ.

ನಗರದ ಕಸ್ತೂರ ಬಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಎಲ್‌.ಅಮೃತಸಿಂಧು 2015–16ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಬಂದಾಗ ಆಘಾತಕ್ಕೆ ಒಳಗಾಗಿದ್ದಳು. ಎಲ್ಲ ವಿಷಯಗಳಲ್ಲೂ ಉತ್ತಮ ಅಂಕಗಳಿಸಿದ್ದ ಆಕೆಗೆ ಕನ್ನಡ ಭಾಷಾ ವಿಷಯದಲ್ಲಿ ದೊರೆತಿದ್ದು ಕೇವಲ 12 ಅಂಕ!

ಉತ್ತಮ ಅಂಕ ಪಡೆದು ಕಾಲೇಜು ಮೆಟ್ಟಿಲೇರುವ ಕನಸು ಕಂಡಿದ್ದ ಅಮೃತ, ಫಲಿತಾಂಶ ಪ್ರಕಟವಾದಾಗ ಕುಸಿದುಬಿದ್ದಿದ್ದಳು. ಸಹಪಾಠಿಗಳ ಎದುರು ತಲೆ ಎತ್ತಲಾಗದೇ ಖಿನ್ನತೆಗೆ ಒಳಗಾಗಿದ್ದಳು. ಆತ್ಮಹತ್ಯೆಗೂ ಮುಂದಾಗಿದ್ದ ಅವಳಲ್ಲಿ ಆತ್ಮಸ್ಥೈರ್ಯ ತುಂಬಲು ಪೋಷಕರು ಹೆಣಗಾಡಿದ್ದರು.

ಸಂಸ್ಕೃತದಲ್ಲಿ 100, ಇಂಗ್ಲಿಷ್‌ನಲ್ಲಿ 67, ಗಣಿತದಲ್ಲಿ 54, ಸಮಾಜ ವಿಜ್ಞಾನದಲ್ಲಿ 50 ಹಾಗೂ ವಿಜ್ಞಾನದಲ್ಲಿ 47 ಅಂಕ ಪಡೆದಿದ್ದ ಆಕೆ ಕನ್ನಡದಲ್ಲಿ ಮಾತ್ರ 12 ಅಂಕ ಪಡೆದಿದ್ದಳು.

ಪ್ರಥಮ ಭಾಷೆಯಾಗಿ ಸಂಸ್ಕೃತ ತೆಗೆದುಕೊಂಡಿದ್ದ ಕಾರಣ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿದ್ದಳು. ಹಾಗಾಗಿ, ಕನ್ನಡ 100 ಅಂಕಗಳಿಗೆ ಸೀಮಿತವಾಗಿತ್ತು (ಪ್ರಥಮ ಭಾಷೆ ಕನ್ನಡವಾಗಿದ್ದರೆ ಗರಿಷ್ಠ ಅಂಕ 125). ಆಂತರಿಕ ಅಂಕದಲ್ಲಿ ಆಕೆಗೆ 20ಕ್ಕೆ 19 ನೀಡಲಾಗಿತ್ತು. ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೆ 80ಕ್ಕೆ 28 ಅಂಕ ಗಳಿಸಲೇ ಬೇಕಿತ್ತು. ಆದರೆ, ದೊರೆತದ್ದು ಮಾತ್ರ 12 ಅಂಕ.

ನೆರೆಹೊರೆಯವರು, ಶಾಲೆಯ ಶಿಕ್ಷಕರ ಸಲಹೆಯಂತೆ ಪೋಷಕರು ಉತ್ತರ ಪತ್ರಿಕೆಯ ಫೋಟೊ ಪ್ರತಿಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಫೋಟೊ ಪ್ರತಿ ಅವರ ಕೈಸೇರಿದ್ದು, ಅದರಲ್ಲಿ ಆಕೆ 80ಕ್ಕೆ 72 ಅಂಕ ಪಡೆದಿದ್ದಾಳೆ. ಆದರೆ, ಮೌಲ್ಯಮಾಪಕರು ಒಟ್ಟು ಅಂಕಗಳನ್ನು ಕೂಡಿ, ಅಕ್ಷರ ರೂಪದಲ್ಲಿ ಬರೆಯುವಾಗ 72ರ ಬದಲು 12 ಎಂದು ನಮೂದಿಸಿದ್ದಾರೆ. ಅದೇ ತಪ್ಪು ಅಂಕವನ್ನೇ ಅಂಕಪಟ್ಟಿಗೂ ತೆಗೆದುಕೊಂಡಿದ್ದು, ಒಟ್ಟು ಫಲಿತಾಂಶ ಅನುತ್ತೀರ್ಣ ಎಂದು ಪ್ರಕಟವಾಗಿದೆ.

ಉತ್ತರ ಪತ್ರಿಕೆಯನ್ನು 2014ರಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆದಿರುವ ಮೌಲ್ಯಮಾಪಕರು (ಮೌಲ್ಯ ಮಾಪಕರ ನೋಂದಣಿ ಸಂಖ್ಯೆ 20149060001) ಮೌಲ್ಯಮಾಪನ ಮಾಡಿದ್ದು, 1990ರಲ್ಲೇ ಮೌಲ್ಯ ಮಾಪನದ ಅರ್ಹತೆ ಪಡೆದಿರುವ ಅನುಭವಿ ಮೇಲ್ವಿಚಾರಕರು (199012010004) ಉತ್ತರ ಪತ್ರಿಕೆಯ ಮೇಲ್ವಿಚಾರಣೆ ನಡೆಸಿದ್ದಾರೆ. ಆದರೂ, 72 ಅಂಕದ ಬದಲು 12 ಎಂದು ನಮೂದಾಗಿದೆ!

ಉತ್ತರ ಪತ್ರಿಕೆಗಳಲ್ಲಿನ ಅಂಕಗಳ ವ್ಯತ್ಯಾಸ 5ಕ್ಕಿಂತ ಹೆಚ್ಚಿದ್ದರೆ ಮೌಲ್ಯ ಮಾಪಕರ ಮೇಲೆ ಶಿಸ್ತುಕ್ರಮ ಜರುಗಿಸಬಹುದು. ಅಮೃತಸಿಂಧು ಉತ್ತರ ಪತ್ರಿಕೆಯಲ್ಲಿ ಆಗಿರುವ ವ್ಯತ್ಯಾಸ 60 ಅಂಕ! ಫಲಿತಾಂಶ ಅನುತ್ತೀರ್ಣ! ತಂದೆ ಲೋಕೇಶ್ ವೃತ್ತಿಯಲ್ಲಿ ಪುರೋಹಿತರು. ತಾಯಿ ವಿದ್ಯಾವತಿ ಗೃಹಿಣಿ. ಬಡತನದ ನಡುವೆಯೇ ಇಬ್ಬರು ಮಕ್ಕಳಿಗೆ ಓದಿಸುತ್ತಿದ್ದಾರೆ.

‘ಫಲಿತಾಂಶ ಬಂದಾಗ ಖಿನ್ನತೆ ಒಳಗಾಗಿದ್ದ ಮಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ಈಗ ಉತ್ತರ ಪತ್ರಿಕೆ ಫೋಟೊ ಪ್ರತಿ ನೋಡಿ ಸಮಾಧಾನವಾಗಿದೆ. ಈಗಾಗಲೇ ಬಹುತೇಕ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಮುಗಿಯುತ್ತಾ ಬಂದಿದೆ. ಪ್ರೌಢಶಿಕ್ಷಣ ಮಂಡಳಿ ಅಂಕಪಟ್ಟಿ ಸರಿಪಡಿಸಿಕೊಡುವಷ್ಟರಲ್ಲಿ ಇನ್ನಷ್ಟು ವಿಳಂಬವಾಗಬಹುದು.

ನೊಂದಿರುವ ಆಕೆಗೆ ಒಳ್ಳೆಯ ಕಾಲೇಜು ಸಿಕ್ಕಿರೆ ಸಾಕು. ನಮ್ಮ ಮಗಳಿಗೆ ಆದ ಸಮಸ್ಯೆ ಇತರೆ ಮಕ್ಕಳಿಗೆ ಆಗುವುದು ಬೇಡ’ ಎಂದು ವಿದ್ಯಾರ್ಥಿನಿ ತಂದೆ, ವೆಂಕಟೇಶನಗರದ ಎಚ್‌.ಎಂ.ಲೋಕೇಶ್‌ ನೋವು ಹಂಚಿಕೊಂಡರು.
ಚಂದ್ರಹಾಸ ಹಿರೇಮಳಲಿ(ಪ್ರಜಾವಾಣಿ)

Comments are closed.