ಕರ್ನಾಟಕ

ಅನುಪಮಾಗೆ ಹುಡುಕಾಟ : ರಾಜೀನಾಮೆ ಅಂಗೀಕಾರಕ್ಕೆ ಬದಲು ಮನವೊಲಿಕೆಗೆ ಸಿಎಂ ಸೂಚನೆ

Pinterest LinkedIn Tumblr

anupama-shenoyclrಬೆಂಗಳೂರು, ಜೂ. ೮ – ಕೂಡ್ಲಗಿ ಡಿವೈಎಸ್‌ಪಿ ಅನುಪ್ರಧಾನ ಸುದ್ದಿ ಅನುಪಮಾಗೆ ಹುಡುಕಾಟ : ರಾಜೀನಾಮೆ ಅಂಗೀಕಾರಕ್ಕೆ ಬದಲು ಮನವೊಲಿಕೆಗೆ ಸಿಎಂ ಸೂಚನೆಪಮಾ ಶೆಣೈ ಅವರ ರಾಜೀನಾಮೆ ಅಂಗೀಕರಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ಯಾರಿಗೂ ಸಂಪರ್ಕಕ್ಕೂ ಸಿಗದಂತೆ ನಾಪತ್ತೆಯಾಗಿರುವ
ಅನುಪಮಾ ಶೆಣೈ ಅವರಿಗಾಗಿ ಹುಡುಕಾಟ ಆರಂಭವಾಗಿದೆ.
ರಾಜೀನಾಮೆ ನೀಡಿ ನಾಲ್ಕು ದಿನಗಳು ಕಳೆದರೂ ಯಾರ ಸಂಪರ್ಕಕ್ಕೂ ಸಿಗದೆ ಫೇಸ್‌ಬುಕ್‌ನಲ್ಲಿ ಕ್ರಿಯಾಶೀಲರಾಗಿರುವ ಅನುಪಮಾ ಶೆಣೈ ಅವರನ್ನು ಸಂಬಂಧಿಕರ ಮೂಲಕ ಸಂಪರ್ಕಿಸಲು ಬಳ್ಳಾರಿ ಪೊಲೀಸರ ತಂಡ ಉಡುಪಿಗೆ ತೆರಳಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್ ಅವರು ಅನುಪಮಾ ಅವರನ್ನು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಮನವೊಲಿಸುವಂತೆ ಸೂಚನೆ ನೀ‌ಡಿರುವುದರಿಂದ ಬಳ್ಳಾರಿ ಎಸ್‌ಪಿ ಚೇತನ್ ಅವರು ಅನುಪಮಾ ಅವರನ್ನು ಪತ್ತೆ ಮಾಡಿ ಮನವೊಲಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ.
ಉಡುಪಿಯ ಸಂಬಂಧಿಕರ ಜತೆ ಅನುಪಮಾ ಶೆಣೈ ಅವರು ಸಂಪರ್ಕದಲ್ಲಿರುವುದನ್ನು ಪೊಲೀಸ್ ತಂಡ ಪತ್ತೆ ಹಚ್ಚಿದ್ದು, ಅವರು ಎಲ್ಲಿದ್ದಾರೆ ಎನ್ನುವುದನ್ನು ತಿಳಿದುಕೊಂಡು ಅಲ್ಲಿಗೆ ಎಸ್‌ಪಿ ಚೇತನ್ ಅವರು ತೆರಳಿ ಮನವೊಲಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅನುಪಮಾ ಶೆಣೈ ಅವರನ್ನು ಸಂಪರ್ಕಿಸಲು 3 ದಿನಗಳಿಂದ ಪ್ರಯತ್ನ ನಡೆಸಿದ್ದೇನೆ. ಅವರು ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಫೇಸ್‌ಬುಕ್‌ನಲ್ಲಿ ಅವರ ಅಭಿಪ್ರಾಯ ಹಂಚಿಕೊಳ್ಳುತ್ತಿರುವ ಬಗ್ಗೆ ನಾವೇನು ಮಾಡಲು ಸಾಧ್ಯ ಎಂದು ಎಸ್‌ಪಿ ಚೇತನ್ ಅವರು ತಿಳಿಸಿದ್ದಾರೆ.
ಈ ನಡುವೆ ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನುಪಮಾ ಶೆಣೈ ಅವರ ರಾಜೀನಾಮೆಯನ್ನು ಅಂಗೀಕರಿಸದೆ ಸೇವೆಯಲ್ಲಿ ಮುಂದುವರೆಯಲು ಮನವೊಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಒಬ್ಬ ಹೆಣ್ಣು ಮಗಳಾಗಿ ಅನುಪಮಾ ಶೆಣೈ ಅವರು ಡಿವೈಎಸ್‌ಪಿ ಹುದ್ದೆಯಂತಹ ಸೇವೆಯಲ್ಲಿದ್ದಾರೆ. ಅವರು ಸೇವೆಯಲ್ಲಿ ಮುಂದುವರೆಯಬೇಕು, ರಾಜೀನಾಮೆ ನೀಡಿರುವುದನ್ನು ಅಂಗೀಕರಿಸದೆ ಸೇವೆಯಲ್ಲಿ ಮುಂದುವರೆಸುವಂತೆ ಡಿಜಿಪಿ ಅವರಿಗೆ ತಿಳಿಸಿದ್ದೇನೆ ಎಂದರು.
ಸರ್ಕಾರದ ಯಾವುದೇ ಹಿರಿಯ ಕಿರಿಯ ಅಧಿಕಾರಿಗಳಾಗಲಿ ಸರ್ಕಾರಕ್ಕೆ ನಿಷ್ಠರಾಗಿರಬೇಕು. ಅವರಿಗೇನಾದರೂ ತೊಂದರೆ ಇದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು, ಅದನ್ನು ಬಿಟ್ಟು ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಸಮರ ಸಾರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಅನುಪಮಾ ಶೆಣೈ ಅವರಿಗೆ ತೊಂದರೆಯಾಗಿದೆ ಎನ್ನುವುದು ನನ್ನ ಗಮನಕ್ಕೆ ಬಂದರೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿರುದ್ಧ ಅನುಪಮಾ ಮಾಡಿರುವ ಆರೋಪಗಳ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಮಾಧ್ಯಮದವರೇ ಆರೋಪ ಮಾಡಿ ಅವರೇ ತೀರ್ಪು ನೀಡುವುದು ಎಷ್ಟರ ಮಟ್ಟಿಗೆ ಸರಿ, ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಹೇಳಿದರು.
ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ರಾಜೀನಾಮೆಗೆ ಆಗ್ರಹಿಸಿರುವ ಅನುಪಮಾ ಶೆಣೈ, ಪರಮೇಶ್ವರ್ ನಾಯಕ್ ಅವರ ವಿರುದ್ಧದ ಸಿಡಿ ಬಿಡುಗಡೆ ಮಾಡುವುದಾಗಿ ಹಾಕಿದ್ದ ಬಾಂಬ್ ಟುಸ್ ಆಗಿದೆ.
ಕ್ಷಣ ಕ್ಷಣಕ್ಕೂ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಬ್‌ಡೇಟ್ ಮಾಡಿ ಮಕ್ಕಳು ನೋಡಬಾರದ ಸಿಡಿ ಇದೆ ಅದನ್ನು ಮಧ್ಯರಾತ್ರಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಅನುಪಮಾ ಶೆಣೈ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದು ಅವರು ಎಲ್ಲಿದ್ದಾರೆ ಎನ್ನುವುದು ಇನ್ನು ಪತ್ತೆಯಾಗಿಲ್ಲ.
ಅನುಪಮಾ ಅವರ ರಾಜೀನಾಮೆ ಕ್ರಮಕ್ಕೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಬೆಂಬಲ ಸಿಗುತ್ತಿದ್ದು, ಅವರ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ಅಂಗೀಕರಿಸದಂತೆ ಕೂಡ್ಲಗಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.

Comments are closed.