ಕರ್ನಾಟಕ

KPSC ಅಧ್ಯಕ್ಷ ಸ್ಥಾನಕ್ಕೆ ಶಾಮ್‌ಭಟ್ ಹೆಸರು ಶಿಫಾರಸ್ಸು : ಕಾಗೋಡು ತಿಮ್ಮಪ್ಪ ಅಸಮಾಧಾನ

Pinterest LinkedIn Tumblr

kagoಬೆಂಗಳೂರು, ಜೂ.7- ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಬಿಡಿಎ ಆಯುಕ್ತ ಶಾಮ್‌ಭಟ್ ಅವರ ಹೆಸರನ್ನು ಶಿಫಾರಸು ಮಾಡಿರುವ ಸರ್ಕಾರದ ಕ್ರಮಕ್ಕೆ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ವಿರುದ್ಧ ಮತ್ತೊಮ್ಮೆ ಚಾಟಿ ಬೀಸಿರುವ ಅವರು, ಶಾಮ್‌ಭಟ್ ಅವರ ಹೆಸರನ್ನು ಲೋಕಸೇವಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರ ಶಿಫಾರಸು ಮಾಡಿರುವ ಕ್ರಮ ಸರಿಯಲ್ಲ ಎಂದು ಗರಂ ಆಗಿ ನುಡಿದರು.

ರಾಜ್ಯಪಾಲರು ಅವರ ಹೆಸರನ್ನು ಅಂಗೀಕರಿಸುತ್ತಾರೋ, ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಇವರ ಹೆಸರನ್ನು ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿರುವುದು ಸೂಕ್ತವಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ಹೇಳುವ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜು.4ರಿಂದ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ. ದಿನಾಂಕದ ಬಗ್ಗೆ ನಿನ್ನೆ ಕಾನೂನು ಮತ್ತು ಸಂಸದೀಯ ಸಚಿವರು ಚರ್ಚೆ ನಡೆಸಿದ್ದಾರೆ. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಬೆಳಗಾವಿಯಲ್ಲಿ ಒಂದು ವಾರ ಅಧಿವೇಶನ ನಡೆಸಬೇಕು ಎಂಬ ಉದ್ದೇಶವಿದೆ.

ಎರಡೂ ಕಡೆ ಅಧಿವೇಶನ ನಡೆಸಬೇಕೆಂಬ ಉದ್ದೇಶ ನಮ್ಮದಾಗಿದ್ದು, ಎರಡು ಸೌಧಗಳನ್ನು ನಿರ್ಮಿಸಿದ್ದೇವೆ. ಇದಕ್ಕೆ ಸರ್ಕಾರ ಒಪ್ಪಬೇಕು. ಸರ್ಕಾರ ಒಪ್ಪಿದರೆ ನಾವು ಸಿದ್ಧರಿದ್ದೇವೆ ಎಂದು ಹೇಳಿದರು. ರಾಜ್ಯಸಭಾ, ವಿಧಾನ ಪರಿಷತ್ ಚುನಾವಣೆ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಅವರು, ರಾಜಕೀಯ ಪಕ್ಷಗಳು ಶಿಷ್ಟಾಚಾರವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ನಿಷ್ಠಾವಂತರನ್ನು ಕಡೆಗಣಿಸಿ ತಮಗೆ ಇಷ್ಟ ಬಂದವರನ್ನು ಕಣಕ್ಕಿಳಿಸುತ್ತಿವೆ. ಪ್ರಜಾಪ್ರಭುತ್ವದ ಬಲ ಕಡಿಮೆಯಾಗುತ್ತಿದೆ. ಮಾಧ್ಯಮಗಳು ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಬೇಕು.

ರಾಜ್ಯಸಭಾ ಚುನಾವಣೆ ಸಂಬಂಧ ಮತ ಖರೀದಿಗೆ ಶಾಸಕರು ಹಣ ಕೇಳಿದ್ದಾರೆ. ಈ ಬಗ್ಗೆ ಕುಟುಕು ಕಾರ್ಯಾಚರಣೆ ನಡೆದಿದೆ ಎಂಬ ಬಗ್ಗೆ ಯಾರೂ ದೂರು ಕೊಟ್ಟಿಲ್ಲ. ಯಾರಾದರೂ ದೂರು ಕೊಟ್ಟರೆ ಅದನ್ನು ಆಯೋಗಕ್ಕೆ ಕಳುಹಿಸಿಕೊಡುತ್ತೇನೆ. ಶಾಸನ ಸಭೆಯಲ್ಲಿ ಕ್ರಮ ಕೈಗೊಳ್ಳಲು ನನಗೆ ಅಧಿಕಾರವಿದೆ. ಇಲ್ಲಿ ನಾನು ಕ್ರಮ ಕೈಗೊಳ್ಳಲು ಬರುವುದಿಲ್ಲ. ಆಯೋಗಕ್ಕೆ ಕಳುಹಿಸಿಕೊಡಬೇಕಾಗುತ್ತದೆ ಎಂದು ತಿಳಿಸಿದರು. ಯಾವುದೇ ಪಕ್ಷದವರೂ ಈವರೆಗೂ ತಮ್ಮ ಶಾಸಕರುಗಳ ಬಗ್ಗೆ ದೂರು ಕೊಟ್ಟಿಲ್ಲ. ದೂರು ಕೊಟ್ಟರೆ ಪರಿಶೀಲನೆ ನಡೆಸುತ್ತೇನೆ ಎಂದು ಸ್ಪೀಕರ್ ಹೇಳಿದರು. ಇದೇ ಸಂದರ್ಭದಲ್ಲಿ ರಾಜ್ಯಸಭಾ ಕಾಂಗ್ರೆಸ್ ಅಭ್ಯರ್ಥಿಗಳಾದ ಆಸ್ಕರ್ ಫರ್ನಾಂಡಿಸ್, ಜಯರಾಂ ರಮೇಶ್ ಅವರುಗಳು ಸ್ಪೀಕರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Comments are closed.