ರಾಷ್ಟ್ರೀಯ

ಮೋದಿ ಸರ್ಕಾರದಿಂದ ಭ್ರಷ್ಟಾಚಾರ ನಿಯಂತ್ರಣಕ್ಕೆ ಯತ್ನ: ಸಮೀಕ್ಷೆ

Pinterest LinkedIn Tumblr

modi-governmentನವದೆಹಲಿ: ನರೇಂದ್ರ ಮೋದಿಯವರ ಎರಡು ವರ್ಷದ ಆಡಳಿತ ಸರ್ಕಾರ ಶೇಕಡಾ 51ರಷ್ಟು ಭ್ರಷ್ಟಾಚಾರವನ್ನು ನಿಗ್ರಹಿಸಿದ್ದು, ಉತ್ತಮ ಕೆಲಸ ಮಾಡುತ್ತಿದೆ ಎಂದು ಆನ್ ಲೈನ್ ಸಮೀಕ್ಷೆ ಹೇಳಿದೆ.
ಪ್ರಧಾನ ಮಂತ್ರಿಗಳ ಅಧಿಕೃತ ವೆಬ್ ಸೈಟ್ ಯಲ್ಲಿ ‘Rate My Government’ ಎಂಬ ಹೆಸರಿನಲ್ಲಿ ಆನ್ ಲೈನ್ ಸಮೀಕ್ಷೆ ನಡೆಸಲಾಗಿದ್ದು, ಇಂದು ಸಂಜೆಯವರೆಗೆ 23 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.
ಸುಮಾರು 51.7 ಶೇಕಡಾದಷ್ಟು ಮಂದಿ ಪ್ರತಿಕ್ರಿಯೆ ನೀಡಿದವರು ಮೋದಿ ಸರ್ಕಾರದ ಕೆಲಸಕ್ಕೆ 5 ಸ್ಟಾರ್ ಕೊಟ್ಟಿದ್ದು, ಶೇಕಡಾ 22ರಷ್ಟು ಮಂದಿ 4 ಸ್ಟಾರ್ ಕೊಟ್ಟಿದ್ದಾರೆ. ಆದರೆ ಕಪ್ಪು ಹಣವನ್ನು ವಿದೇಶದಿಂದ ವಾಪಸ್ ತರುವಲ್ಲಿ ಸರ್ಕಾರಕ್ಕೆ ಶೇಕಡಾ 29 ಮಂದಿ ಮಾತ್ರ 5 ಸ್ಟಾರ್ ಕೊಟ್ಟರೆ, ಶೇಕಡಾ 23ರಷ್ಟು ಜನರು 4 ಸ್ಟಾರ್ ಕೊಟ್ಟಿದ್ದಾರೆ.
ಮೋದಿ ಸರ್ಕಾರದ ಸಾಧನೆಗೆ ಪ್ರತಿಕ್ರಿಯೆ ನೀಡಿದವರು ಸರ್ಕಾರದ ವಿದೇಶಾಂಗ ನೀತಿಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇಕಡಾ 65ಕ್ಕೂ ಹೆಚ್ಚು ಮಂದಿ 5 ಸ್ಟಾರ್ ನೀಡಿದ್ದಾರೆ.
ಇನ್ನು ಕೇಂದ್ರದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಭಾರೀ ಪ್ರಶಂಸೆ ಸಿಕ್ಕಿದೆ. ಶೇಕಡಾ 52ರಷ್ಟು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಚ್ಛ ಭಾರತ್ ಅಭಿಯಾನಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಶೇಕಡಾ 32ರಷ್ಟು ಮಾತ್ರ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಸರ್ಕಾರದ ಪ್ರಯತ್ನಕ್ಕೆ ಶೇಕಡಾ 34ರಷ್ಟು ಮಂದಿ 5 ಸ್ಟಾರ್ ಅಂಕ ನೀಡಿದ್ದಾರೆ. ಈ ಸಮೀಕ್ಷೆಯನ್ನು ಮೋದಿ ಸರ್ಕಾರ ಎರಡು ವರ್ಷ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಾಡಲಾಗಿತ್ತು.
ಸಮೀಕ್ಷೆ ಜೂನ್ 10ರಂದು ಮುಕ್ತಾಯವಾಗುತ್ತದೆ. ವೆಬ್ ಸೈಟ್ ನಲ್ಲಿ 20 ರಸಪ್ರಶ್ನೆಗಳಿದ್ದು 5 ನಿಮಿಷದೊಳಗೆ ಉತ್ತರಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರು ಪ್ರಧಾನ ಮಂತ್ರಿಯನ್ನು ಭೇಟಿ ಮಾಡುವ ಅವಕಾಶವಿದೆ. ಈ ಸಮೀಕ್ಷೆ ಮತ್ತು ರಸಪ್ರಶ್ನೆ ಮೇ 25ರಂದು ಆರಂಭಗೊಂಡಿತ್ತು.

Comments are closed.