ಕರ್ನಾಟಕ

ಸರ್ಕಾರದ ಆಡಳಿತದಲ್ಲಿ ದಲ್ಲಾಳಿಗಳಿಗೆ ಕಡಿವಾಣ

Pinterest LinkedIn Tumblr

sidduಬೆಂಗಳೂರು, ಜೂ. ೭- ಬೆಂಗಳೂರಿನಲ್ಲಿ ಠಿಕಾಣಿ ಹೂಡದೆ ನಿಯಮಿತವಾಗಿ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರ ರೂಪಿಸಿರುವ ಯೋಜನೆಗಳ ಅನುಷ್ಠಾನದ ಬಗ್ಗೆ ಗಮನ ಹರಿಸಿ ಆಡಳಿತ ಚುರುಕುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ನೌಕರರ ಕಾರ್ಯವೈಖರಿಯನ್ನು ಓರೆಗಲ್ಲಿಗೆ ಹಚ್ಚುವ ಮೂಲಕ ಅಧಿಕಾರ ನಿರ್ವಹಣೆಯಲ್ಲಿ ಹೇಳುವವರು, ಕೇಳುವವರು ಇದ್ದಾರೆ ಎಂಬ ಭಯದ ವಾತಾವರಣವನ್ನು ಕೆಳ ಹಂತದ ನೌಕರರಲ್ಲಿ ಮೂಡಿಸಬೇಕು ಎಂದು ಮುಖ್ಯಮಂತ್ರಿಗಳು ತಾಕೀತು ಮಾಡಿದರು.
ವಿಧಾನಸೌಧದಲ್ಲಿಂದು ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಸಿಇಓಗಳಾಗಿ ಕೆಲಸ ಮಾಡಿದ ಅನುಭವ ಇದೆ ಎನ್ನುವ ಕಾರಣಕ್ಕೆ ನಿಮಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಜವಾಬ್ದಾರಿ ನೀಡಲಾಗಿದೆ. ನಿಮ್ಮ ಅನುಭವವನ್ನು ಬಳಸಿಕೊಂಡು ಜನರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ನೀಡಿ. ಇದರಿಂದ ಆಡಳಿತ ಚುರುಕಾಗಿ ಪಾರದರ್ಶಕತೆ ತರಬಹುದು ಎಂದು ಕಿವಿಮಾತು ಹೇಳಿದರು.
ಪ್ರತಿ ತಿಂಗಳು ಜಿಲ್ಲೆಗಳಿಗೆ ಭೇಟಿ ನೀಡಿದ ಬಗ್ಗೆ ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರಿ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕೆಲಸ ಮಾಡದ ನೌಕರ, ಅಧಿಕಾರಿಗಳನ್ನು ಅಮಾನತ್ತು ಮಾಡಿದರೆ ಬೇರೆಯವರಿಗೂ ಭಯ ಬರುತ್ತದೆ. ಹೇಳುವವರು, ಕೇಳುವವರು ಇದ್ದಾರೆ ಎಂಬ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಆಡಳಿತದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಆದಷ್ಟು ಜನರ ಜತೆ ಬೆರೆಯಬೇಕು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಮೂಲಮಂತ್ರ ಇಟ್ಟುಕೊಂಡು ಕೆಲಸ ಮಾಡಿದರೆ ಆಡಳಿತದಲ್ಲಿ ಬದಲಾವಣೆ ತಂದು ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನ ಪರಿಣಾಮಕಾರಿಯಾಗಿ ಆಗಲಿದೆ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿರುವ ದೂರುಗಳು ಬಂದಿವೆ. ಅದರಲ್ಲೂ ತಹಶೀಲ್ದಾರ್ ಕಚೇರಿ, ಪೊಲೀಸ್ ಠಾಣೆ, ಸಮಾಜ ಕಲ್ಯಾಣ ಹಾಗೂ ವಸತಿ ಇಲಾಖೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಈ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದರು.
ಮಧ್ಯವರ್ತಿಗಳಿಗೆ ಕಡಿವಾಣ ಹಾಕದಿದ್ದರೆ ಫಲಾನುಭವಿಗಳಿಗೆ ತಲುಪುವ ಹಣ ಮಧ್ಯವರ್ತಿಗಳ ಪಾಲಾಗುತ್ತದೆ. ವಸತಿ ನಿರ್ಮಾಣಕ್ಕೆ ನೀಡುವ 1.2 ಲಕ್ಷ ರೂ.ಗಳಲ್ಲಿ ಬಹುಪಾಲು ಹಣ ಮಧ್ಯವರ್ತಿಗಳಿಗೆ ಹೋಗುತ್ತದೆ ಎಂಬ ದೂರುಗಳು ವ್ಯಾಪಕವಾಗಿವೆ. ಈ ಬಗ್ಗೆ ಗಮನಹರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗ ಸೂಚನೆ ನೀಡಿದರು.
ಸರ್ಕಾರದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನವಾದರೆ ಬಡವರು, ಅಶಕ್ತರ ಬದುಕಿಗೆ ಶಕ್ತಿ ತುಂಬಿ ಅವರು ಮುಖ್ಯವಾಹಿನಿಗೆ ಬರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ಸೇರಿದಂತೆ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Comments are closed.