ಕರ್ನಾಟಕ

ಸರ್ಕಾರದ ನಡವಳಿಕೆಯಿಂದ ಅರಾಜಕತೆ: ಎಚ್‍ಡಿಕೆ

Pinterest LinkedIn Tumblr

hdkಧಾರವಾಡ: ಸರ್ಕಾರದ ನಡವಳಿಕೆಯಿಂದ ಅರಾಜಕತೆ ಉಂಟಾಗಿದೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ವರ್ಷದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಸಂದರ್ಭದಲ್ಲಿಯೇ ಚುನಾವಣೆ ನಡೆಯುತ್ತಿವೆ. ಜತೆಗೆ ಸರಕಾರಿ ನೌಕರರು, ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದಾರೆ ಇದೆಲ್ಲ ರಾಜ್ಯದಲ್ಲಿನ ಅರಾಜಕ ಸ್ಥಿತಿಗೆ ಉದಾಹರಣೆ ಎಂದರು.

ರಾಜ್ಯ ಸರ್ಕಾರ, ಸರ್ಕಾರಿ ನೌಕರರ ಮೇಲೆ ಮೃದು ಧೋರಣೆ ತೋರಿದಂತೆ ಕಾಣುತ್ತಿದೆ. ಪೊಲೀಸರೂ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸರ್ಕಾರ ಅವರಿಗೆ ಭಯದ ವಾತಾವರಣ ಸೃಷ್ಟಿ ಮಾಡಿತು. ಆದರೆ, ಸರ್ಕಾರಿ ನೌಕರರಿಗೇಕೆ ಹೀಗೆ ಬೆದರಿಕೆಯೊಡ್ಡಲಿಲ್ಲ ಎಂದು ಪ್ರಶ್ನಿಸಿದ ಅವರು, ಹಾಗಂತ ನಾನು ಪೋಲೀಸರಿಗೆ ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ಕೊಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರ ಬೇಡಿಕೆ ನ್ಯಾಯಯುತವಾಗಿವೆ. ಪೊಲೀಸರೂ ಸರಕಾರಿ ನೌಕರರು. ಅವರಿಗೇಕೆ ಭಯದ ವಾತಾವರಣ ಸೃಷ್ಟಿಸಲಾಯಿತು? ಎಂದು ಕುಮಾರಸ್ವಾಮಿ ಪ್ರಶ್ನೆ ಎತ್ತಿದರು.

ಮೇಲಧಿಕಾರಿಗಳು ಪೊಲೀಸರನ್ನು ಇಂದಿಗೂ ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ. ಐಪಿಎಸ್ ಅಧಿಕಾರಿಗಳ ಮನೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಕಡಿಮೆ ಸಂಬಳದಿಂದಾಗಿ ಪೊಲೀಸರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ವಿಧಾನ ಪರಿಷತ್ ಚುನಾವಣೆ: ಶಿಕ್ಷಕ ಸಮುದಾಯಕ್ಕೆ ಕಾಂಗ್ರೆಸ್, ಬಿಜೆಪಿ ಸರಕಾರ ಏನು ನೀಡಿವೆ ಎಂದ ಅವರು, ಜೆಡಿಎಸ್ ಸರಕಾರ ಶಿಕ್ಷಕ ಸಮುದಾಯಕ್ಕೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ. ಇದನ್ನ ಶಿಕ್ಷಕ ಕ್ಷೇತ್ರದ ಮತದಾರರು ಮನಗಾಣಬೇಕು ಎಂದು ಹೇಳಿದರು.

ಸಭೆ ಬಳಿಕ ಪಕ್ಷದಲ್ಲಿನ ಭಿನ್ನಮತ, ಗೊಂದಲ ನಿವಾರಣೆ
ಮೇ ೧೨ರಂದು ಬೆಂಗಳೂರಿನಲ್ಲಿ ಪಕ್ಷದ ಸಭೆ ಕರೆಯಲಾಗಿದೆ. ಸಭೆ ಬಳಿಕ ಪಕ್ಷದಲ್ಲಿನ ಎಲ್ಲ ಗೊಂದಲಗಳೂ ನಿವಾರಣೆಯಾಗಲಿವೆ. ಸಭೆಯ ಬಳಿಕ ಪಕ್ಷ ವಿರೋಧಿ ಚಟುವಟಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರು ಎಷ್ಟೇ ದೊಡ್ಡವರಿರಲಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಇಂದು ಉದ್ಯಮಿ ಅಶೋಕ ಖೇಣಿ ಅವರ ವಿರುದ್ಧ ಪಕ್ಷದಿಂದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು. ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿ.ಎಸ್. ಯಡಿಯೂರಪ್ಪ ಯತ್ನ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

Comments are closed.