ಮನೋರಂಜನೆ

ಅಪೂರ್ವ ‘ಹಿಟ್’ ಅಲ್ಲ ಎಂದು ಹೇಳಿದ್ರೆ…

Pinterest LinkedIn Tumblr

apoorva1_0ಪ್ರತಿಯೊಂದು ಸಿನಿಮಾ ಹಲವಾರು ಕಲಾವಿದರನ್ನು ಹುಟ್ಟು ಹಾಕುತ್ತದೆ. ಪ್ರತಿಯೊಂದು ಸಿನಿಮಾಗೂ ಅದರದ್ದೇ ಆದ ಪ್ರೇಕ್ಷಕ ವರ್ಗವೂ ಇದ್ದೇ ಇರುತ್ತದೆ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿ ದೇವರು ಎಂದೇ ಸಂಭೋಧಿಸುತ್ತಿದ್ದರು. ಒಬ್ಬ ಕಲಾವಿದ ತೆರೆಯ ಮೇಲೆ ಅಭಿನಯ ಕೌಶಲದೊಂದಿಗೆ ವ್ಯಾಪಿಸುತ್ತಾ ಹೋದಂತೆ ಆತನದ್ದೇ ಒಂದು ಅಭಿಮಾನಿ ಬಳಗವೂ ಹುಟ್ಟಿಕೊಳ್ಳುತ್ತದೆ. ಪ್ರೇಕ್ಷಕರು ಸಿನಿಮಾ ನೋಡಿ ಖುಷಿ ಪಟ್ಟು ಸುಮ್ಮನಾಗುವ ಕಾಲವೊಂದಿತ್ತು. ಆದರೆ ಕಾಲ ಬದಲಾದಂತೆ ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಅನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳಲು ತೊಡಗಿದ. ಸಾಮಾಜಿಕ ಜಾಲತಾಣಗಳು ಎಲ್ಲರ ಕೈಗೆಟಕುತ್ತಿದ್ದಂತೆ ಸಿನಿಮಾ ಪ್ರೇಕ್ಷಕರೆಲ್ಲರೂ, ಪ್ರೇಕ್ಷಕ ವರ್ಗದಿಂದ ವಿಮರ್ಶಕರ ಸ್ಥಾನಕ್ಕೆ ಜಿಗಿದು ಬಿಟ್ಟರು.

ಸಿನಿಮಾ ಬಗ್ಗೆ ಅವರಿಗೆ ಏನು ಅನಿಸಿತೋ, ಅದೆಲ್ಲವನ್ನೂ ಫೇಸ್ ಬುಕ್ ನಲ್ಲಿಯೋ, ಟ್ವಿಟರ್ ನಲ್ಲಿಯೋ ಗೀಚತೊಡಗಿದರು. ಸಿನಿಮಾ ನೋಡುತ್ತಿದ್ದೇನೆ ಎಂಬುದರಿಂದ ಹಿಡಿದು ಸಿನಿಮಾದಲ್ಲಿ ಏನೆಲ್ಲಾ ಇತ್ತು, ಹೇಗಿತ್ತು ಎಂಬುದೆಲ್ಲವೂ ಫೇಸ್ ಬುಕ್ ಸ್ಟೇಟಸ್ ಆಗಿ ಬಿಟ್ಟಿತು. ಇಲ್ಲಿಗೆ ನಿಂತಿಲ್ಲ ಬಿಡಿ, ಸಿನಿಮಾದ ಬಗ್ಗೆ ಯಾರಾದರೂ ಚೆನ್ನಾಗಿಲ್ಲ ಎಂಬ ಸ್ಟೇಟಸ್ ಹಾಕಿದರೆ ಸಾಕು ಆ ಕಲಾವಿದನ ಅಭಿಮಾನಿಗಳು ನೀವ್ಯಾಕೆ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತೀರಿ? ನಮ್ಮ ಬಾಸ್ ಮೂವಿ, ತುಂಬಾ ಚೆನ್ನಾಗಿದೆ ಎಂಬ ಕಾಮೆಂಟ್ ಗಳಿಂದ ಚರ್ಚೆ ಆರಂಭವಾಗಿ ಅದು ಆ ವ್ಯಕ್ತಿಯನ್ನು ಬ್ಲಾಕ್ ಮಾಡುವುದರ ಮೂಲಕ ಅಂತ್ಯಕಾಣುತ್ತದೆ. ಸದ್ಯ ಸಾಮಾಜಿಕ ತಾಣದಲ್ಲಿ ಕ್ರೇಜಿಸ್ಟಾರ್ ಅವರ ಅಪೂರ್ವ ಸಿನಿಮಾದ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆದು ಬರುತ್ತಿವೆ. ರವಿಚಂದ್ರನ್ ಅವರ ಸಿನಿಮಾ ಹೇಗೇ ಇದ್ದರೂ ನಾವದನ್ನು ನೋಡುತ್ತೀವಿ ಎನ್ನುವ ಬಳಗದಿಂದ ಹಿಡಿದು, ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದವರ ವಿರುದ್ಧ ಟೀಕಾಪ್ರಹಾರಗಳೂ ಇಲ್ಲಿ ಪುಂಕಾನುಪುಂಕವಾಗಿ ನಡೆದು ಬರುತ್ತಿದೆ.

ಏಕಾಂಗಿ ಮಾಡಿದ್ದಕ್ಕೆ ವಿಷಾದವಿದೆ; ಅಪೂರ್ವ ಮಾಡಿದ್ದಕ್ಕಲ್ಲ
ಅಪೂರ್ವ ಸಿನಿಮಾ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ದಂತೆ ಕ್ರೇಜಿಸ್ಟಾರ್ ರವಿಚಂದ್ರನ್, ಅಪೂರ್ವ ಸಿನಿಮಾ ಚೆನ್ನಾಗಿಲ್ಲದೇ ಇರಬಹುದು, ಆದರೆ ಕೆಟ್ಟ ಸಿನಿಮಾವನ್ನಂತೂ ಮಾಡಿಲ್ಲ ಎಂದು ಹೇಳಿದ್ದಾರೆ.ಅಪೂರ್ವ ಪ್ರಯೋಗಾತ್ಮಕ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ. ಸಿನಿಮಾ ಬಿಡುಗಡೆಯಾಗುವ ಮುನ್ನವೇ ಎರಡು ಆವೃತ್ತಿಗಳನ್ನು ಸಿದ್ಧಪಡಿಸಿದ್ದು, ಮೊದಲ ಆವೃತ್ತಿ ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ, ಎರಡನೇ ಆವೃತ್ತಿಯಲ್ಲು ಬಿ ಮತ್ತು ಸಿ ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದೆ ಎಂದಿದ್ದರು.ಮೊದಲನೇ ಆವೃತ್ತಿದೆಗೆ 20 ನಿಮಿಷ ಕತ್ತರಿ ಹಾಕಿ ಅಪೂರ್ವ ಆಡಿಯನ್ಸ್ ವರ್ಷನ್ ಬಿಡುಗಡೆಯಾಗಿತ್ತು. ಇಷ್ಟೆಲ್ಲಾ ಕಸರತ್ತು ಮಾಡಿದರೂ ಅಪೂರ್ವ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತಿದೆ.

ಅಷ್ಟಕ್ಕೂ ವಿಮರ್ಶೆ ಯಾಕೆ ಬೇಕು?

ಹೀಗೊಂದು ಪ್ರಶ್ನೆಯನ್ನು ಹಲವರು ಕೇಳುತ್ತಿರುತ್ತಾರೆ. ಒಂದು ಸಿನಿಮಾ ಒಬ್ಬನಿಗೆ ಇಷ್ಟವಾಗಬಹುದು, ಇನ್ನೊಬ್ಬನಿಗೆ ಇಷ್ಟವಾಗದೇ ಇರಬಹುದು. ಯಾರ ಮೇಲೂ ನೀವು ಈ ಸಿನಿಮಾವನ್ನು ನೋಡಿ ಇಷ್ಟಪಡಲೇಬೇಕೆಂದು ಒತ್ತಾಯಿಸುವುದು ಸರಿಯಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಟೇಸ್ಟ್ ಇರುತ್ತದೆ. ಪ್ರತಿಯೊಬ್ಬ ಕಲಾವಿದನೂ ಹೇಗೆ ಭಿನ್ನವೋ, ಪ್ರತಿಯೊಬ್ಬ ಪ್ರೇಕ್ಷಕನೂ ಭಿನ್ನವಾಗಿರುತ್ತಾನೆ. ಆ ಪ್ರೇಕ್ಷಕನಿಗೆ ಅನಿಸಿದ್ದನ್ನು ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯವಂತೂ ಇದ್ದೇ ಇರುತ್ತದೆ. ಆದರೆ ಆತ ಬರೆದದ್ದೆಲ್ಲಾ ವಿಮರ್ಶೆಯಾಗವುದಿಲ್ಲ. ಅನಿಸಿಕೆಗೂ ವಿಮರ್ಶೆಗೂ ವ್ಯತ್ಯಾಸವಿದೆ. ಸಿನಿಮಾ ಒಂದು ಕಲೆ ಎಂದು ಹೇಳುವಾಗ ಸಿನಿಮಾ ವೀಕ್ಷಣೆಯೂ ಒಂದು ಕಲೆ. ಅದನ್ನು ಹೇಗೆ ನೋಡಬೇಕೆಂಬುದು ಪ್ರೇಕ್ಷಕನಿಗೆ ಬಿಟ್ಟಿದ್ದು, ಟೀಕೆಯೋ, ಮೆಚ್ಚುಗೆಯೋ ಇವೆರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಸಿನಿಮಾದವರಿಗೆ ಇರಬೇಕು ಅಷ್ಟೇ.

Comments are closed.