ಕರ್ನಾಟಕ

ಸೋಮಾರಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಪಟ್ಟು ಬಿಬಿಎಂಪಿ ಸಭೆಯಲ್ಲಿ ನ್ಯಾಯಾಧೀಶರ ನೇಮಕಕ್ಕೆ ಆಗ್ರಹ

Pinterest LinkedIn Tumblr

bbmp_logo

ಬೆಂಗಳೂರು, ಮೇ ೩೧- ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳ ಕರ್ತವ್ಯಲೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಕ್ಷಣವೇ ಆರೋಪ ಪಟ್ಟಿ ಹೊರಡಿಸಲು ಸೆಷನ್ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಬೇಕೆಂದು ಪಾಲಿಕೆ ಆಯುಕ್ತರನ್ನು ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಅವರನ್ನು ಆಗ್ರಹಪಡಿಸಿದರು.
ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಇಲಾಖಾ ವಿಚಾರಣೆ ನಡೆಸುವ ಷರತ್ತಿಗೊಳಪಟ್ಟು ಮೂಱ್ನಾಲ್ಕು ವರ್ಷಗಳಾದರು ಇನ್ನೂ ಸಹ ಆರೋಪಪಟ್ಟಿ ಹೊರಡಿಸದ ಹಲವು ಪ್ರಕರಣಗಳಿವೆ ಎಂದು ಪಾಲಿಕೆ ಸಭೆಯಲ್ಲಿಂದು ಆಯುಕ್ತರ ಗಮನಕ್ಕೆ ತಂದರು.
ಇಲಾಖಾ ವಿಚಾರಣೆ ನಡೆಸದೆ ಆಯುಕ್ತರ ಕಚೇರಿಯಲ್ಲಿ ಆರೋಪಿ ಅಧಿಕಾರಿಗಳು ಮತ್ತು ನೌಕರರಿಗೆ ಅನುಕೂಲವಾಗುವಂತೆ ವಿಳಂಬ ಧೋರಣೆ ಅನುಸರಿಸಿ ಖಡತಗಳನ್ನು ಮುಚ್ಚಿಡಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ದ್ವಿತೀಯ ದರ್ಜೆ ಸಹಾಯಕರಾದ ಮಧು, ಕಾತ್ಯಾಯಿನಿ, ಕಲ್ಯಾಣ ಅಧಿಕಾರಿ ಅಭಿಷೇಕ್, ಆದಿತ್ಯ ಸೇರಿದಂತೆ ಹಲವು ಪ್ರಕರಣಗಳಲ್ಲಿ ಇನ್ನೂ ಸಹ ಆರೋಪಪಟ್ಟಿ ಹೊರಡಿಸಿಲ್ಲ. ಕಟ್ಟಡ ನಿರ್ಮಾಣ ಉಲ್ಲಂಘನೆಗೆ ಸಂಬಂಧಿಸಿದಂತೆ 500 ಪ್ರಕರಣಗಳಿವೆ. ಈ ಖಡತಗಳು ಆಯುಕ್ತರ ಆಡಳಿತ ಶಾಖೆಯಲ್ಲೂ ಲಭ್ಯವಿಲ್ಲ, ಹಾಗಾಗಿ, ಖಡತಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದರು.
ಬಿಬಿಎಂಪಿ ಸೇವೆಗೆಂದು ನೇಮಕಗೊಂಡು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಇತರ ಮಹಾನಗರ ಪಾಲಿಕೆಗಳಿಗೆ ಕೆಲ ನೌಕರರನ್ನು ನಿಯೋಜಿಸಲಾಗಿದೆ. ಅಂತಹ ನೌಕರರನ್ನು ಪಾಲಿಕೆ ಸೇವೆಗೆ ವಾಪಸ್ಸು ಪಡೆಯುವಂತೆ ಆಯುಕ್ತರನ್ನು ಒತ್ತಾಯಿಸಿದರು.
ಕಂದಾಯ ವಸೂಲಿಗಾರರು, ಪ್ರಥಮ ದರ್ಜೆ ಸಹಾಯಕರು, ಅಭಿಯಂತರರು, ಆರೋಗ್ಯ ಪರಿವೀಕ್ಷಕರ ಕೊರತೆ ಇದ್ದು, ಕೂಡಲೇ ಇತರ ಮಹಾನಗರ ಪಾಲಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ವಾಪಸ್ಸು ಕರೆಸಿಕೊಳ್ಳುವಂತೆ ಒತ್ತಾಯಿಸಿದರು.
ಕೆಲವು ಅಧಿಕಾರಿಗಳು, ಅಭಿಯಂತರರ ವಿರುದ್ಧ ಇಲಾಖಾ ವಿಚಾರಣೆಗೆ ಆರೋಪ ಪಟ್ಟಿಯನ್ನು ತಯಾರಿಸುವ ನೆಪದಲ್ಲಿ ವಲಯ ಕಚೇರಿಗಳಿಗೆ ಖಡತಗಳನ್ನು ಕಳುಹಿಸಿಕೊಟ್ಟು ಆ ಖಡತಗಳ ಬಗ್ಗೆ ನೆನಪಿನ ಪತ್ರಗಳನ್ನೂ ಕಳುಹಿಸದೆ ಹಲವಾರು ವರ್ಷಗಳಿಂದ ಮೌನವಹಿಸಲಾಗಿದೆ. ಇದರಿಂದ ಆರೋಪ ಎದುರಿಸುತ್ತಿರುವ ಅಧಿಕಾರಿಗಳು ನುಣುಚಿಕೊಂಡಂತಾಗಿದೆ ಎಂದು ಸತ್ಯನಾರಾಯಣ ಆಪಾದಿಸಿದರು.

Comments are closed.