ಬೆಂಗಳೂರು, ಮೇ ೨೩- ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಲು ರಾಜಕೀಯ ಪಕ್ಷಗಳ ನಾಯಕರ ಮನೆಯ ಸುತ್ತ ಟಿಕೆಟ್ ಆಕಾಂಕ್ಷಿಗಳು ದಕ್ಷಿಣೆ – ಪ್ರದಕ್ಷಣೆ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಬಿಜೆಪಿಗಿಂತ ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಕಂಡುಬಂದಿದೆ. ಜಾತಿ, ಪ್ರದೇಶ, ಪಕ್ಷ ನಿಷ್ಠೆ, ಹಿರಿತನವನ್ನು ಮುಂದಿಟ್ಟುಕೊಂಡು ಆಕಾಂಕ್ಷಿಗಳು ಟಿಕೆಟ್ಗಾಗಿ ತೀವ್ರ ಲಾಬಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಖ್ಯಾಬಲದ ಆಧಾರದ ಮೇಲೆ, ಏಳು ಸ್ಥಾನಗಳ ಪೈಕಿ ನಾಲ್ಕು ಸ್ಥಾನಗಳನ್ನು ಅನಾಯಾಸವಾಗಿ ಗೆಲ್ಲಬಹುದಾಗಿದ್ದು, 5ನೇ ಸ್ಥಾನಕ್ಕೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಯತ್ನಗಳು ನಡೆದಿವೆ.
ಐದನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಲವು ತೋರಿದ್ದು, ಪಕ್ಷೇತರರು ಹಾಗೂ ಜೆಡಿಎಸ್ ಶಾಸಕರ ಬೆಂಬಲ ಪಡೆಯಲು ಕಾರ್ಯತಂತ್ರ ರೂಪಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಯಸಿ ಈಗಾಗಲೇ 100ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ.
ಮಾತ್ರವಲ್ಲದೆ, ರಾಜ್ಯ ಹಾಗೂ ಕೇಂದ್ರ ಮಟ್ಟದ ನಾಯಕರನ್ನು ಓಲೈಸುವ ಕೆಲಸದಲ್ಲಿ ಮಗ್ನರಾಗಿರುವ ಕೆಲವು ಆಕಾಂಕ್ಷಿಗಳು, ಆ ಮೂಲಕ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತೆ ಕೆಲವರು, ನೇರವಾಗಿ ಹೈಕಮಾಂಡ್ ಮೂಲಕ ಲಾಬಿಗೆ ಮೊರೆಹೋಗಿದ್ದಾರೆ.
ವಿಧಾನಸಭೆಯಿಂದ ಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ಮೇ 31ರ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ.
ಮೇ 26ಕ್ಕೆ ದೆಹಲಿಗೆ
ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ, ಸಿದ್ದರಾಮಯ್ಯ ಹಾಗೂ ಪರಮೇಶ್ವರ್, ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಮ್ಮೆ ಮುಖಾಮುಖಿ ಚರ್ಚೆ ನಡೆಸಿ, ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳಿಸುವ ಸಾಧ್ಯತೆ ಇದೆ. ಒಮ್ಮೆ ಪಟ್ಟಿಗೆ ಪರಸ್ಪರ ಒಪ್ಪಿಗೆಯಾದರೆ ಮೇ 26ಕ್ಕೆ ದೆಹಲಿಗೆ ತೆರಳಿ ಹೈಕಮಾಂಡ್ ಒಪ್ಪಿಗೆ ಪಡೆಯಲು ಯೋಚಿಸಿದ್ದಾರೆ.
ಜಾತಿವಾರು ಲೆಕ್ಕಾಚಾರದಲ್ಲಿ ತಮಗೇ ಟಿಕೆಟ್ ಸಿಗಬೇಕೆಂಬ ಆಕಾಂಕ್ಷಿಗಳು, ತಮ್ಮ ನೆಚ್ಚಿನ ನಾಯಕರೊಂದಿಗೆ ಸೇರಿ, ಪ್ರತ್ಯೇಕ ಸಭೆಗಳನ್ನು ಏರ್ಪಡಿಸುತ್ತಿದ್ದು, ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ.
ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕೆಂಬ ಬಗ್ಗೆ ಇತ್ತೀಚೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಶಾಸಕರು ಸಭೆ ಸೇರಿ ಚರ್ಚಿಸಿರುವುದು ಗುಟ್ಟಾಗಿ ಉಳಿದಿಲ್ಲ. ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಲು ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಇದೇ ಸಮುದಾಯಕ್ಕೆ ಸೇರಿದ ಗಂಡಸಿ ಶಿವರಾಂ, ಟಿ.ವಿ. ಮಾರುತಿ, ಜಿ.ಸಿ. ಚಂದ್ರಶೇಖರ್, ಕೆಂಚೇಗೌಡ ಮತ್ತಿತರರು ಪರಿಷತ್ ಪ್ರವೇಶಿಸಲು ಲಾಬಿ ಮಾಡುತ್ತಿದ್ದಾರೆ.
ಲಿಂಗಾಯಿತ ಸಮುದಾಯಕ್ಕೆ ಸೇರಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವೆ ರಾಣಿ ಸತೀಶ್ ಸದ್ಯದಲ್ಲೇ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತರಾಗಲಿರುವ ವೀರಣ್ಣ ಮತ್ತಿಕಟ್ಟಿ, ಹಿರಿಯ ನಾಯಕ ಡಿ.ಆರ್. ಪಾಟೀಲ್ ಮುಂತಾದವರ ಹೆಸರುಗಳು ಮುಂಚೂಣಿಯಲ್ಲಿವೆ.
ಹಿಂದುಳಿದ ಸಮುದಾಯಗಳ ಕೋಟಾದಡಿ ತಮಗೆ ಟಿಕೆಟ್ ನೀಡಬೇಕೆಂದು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಚಂದ್ರಪ್ಪ, ಕೆ.ಪಿ. ನಂಜುಂಡಿ, ಎಚ್. ವಿಶ್ವನಾಥ್ ಮುಂತಾದವರು ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ನಡುವೆ ಪರಿಷತ್ನಲ್ಲಿ ಸರ್ಕಾರಿ ಮುಖ್ಯ ಸಚೇತಕರಾಗಿರುವ ಆರ್.ವಿ. ವೆಂಕಟೇಶ್ ಮತ್ತೊಂದು ಅವಧಿಗೆ ಆಯ್ಕೆಯಾಗಲು ಬಯಸಿದ್ದಾರೆ.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಎಂ.ಎಸ್. ಬಸವರಾಜ್, ಛಲವಾದಿ ನಾರಾಯಣಸ್ವಾಮಿ, ಸುಮಾವಸಂತ್ ಪರಿಷತ್ ಪ್ರವೇಶಿಸಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ನಜೀರ್ ಅಹ್ಮದ್, ಎಂ.ಎ. ಗಫೂರ್, ಷಫೀವುಲ್ಲಾ ಮುಂತಾದವರೂ ತಮ್ಮದೇ ದಾಟಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.
ಜಾಣ ನಡೆಗೆ ತೀರ್ಮಾನ
ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಣ ನಡೆಗೆ ತೀರ್ಮಾನಿಸಿದ್ದಾರೆ. ಪರಮೇಶ್ವರ್ ಅವರೊಂದಿಗೆ ಸೇರಿ ಪಟ್ಟಿ ತಯಾರಿಸಿಕೊಂಡು, ಹೈಕಮಾಂಡ್ ವಿವೇಚನೆಗೆ ಬಿಡುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಹೈಕಮಾಂಡ್ ಒಪ್ಪಿಗೆ ಪಡೆಯದೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಿ, ನಂತರ ಅನುಭವಿಸಿದ ಮುಜುಗರ ಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಎಚ್ಚರದಿಂದ ಇರಲು ಅವರು ತೀರ್ಮಾನಿಸಿದ್ದಾರೆನ್ನಲಾಗಿದೆ.
ಈ ನಡುವೆ ಬಿಜೆಪಿ ಪ್ರಮುಖ ನಾಯಕರು ನಿನ್ನೆ ಸಭೆ ಸೇರಿ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಿದರು. ಪರಿಷತ್ನ ಹಾಲಿ ಸದಸ್ಯ ವಿ. ಸೋಮಣ್ಣ, ಮುಖಂಡ ಸುಬ್ಬು ನರಸಿಂಹ ಅವರನ್ನು ಕಣಕ್ಕಿಳಿಸುವ ಬಗ್ಗೆ ನಾಯಕರು ಚಿಂತನೆ ನಡೆಸಿದ್ದು, ಅಂತಿಮ ತೀರ್ಮಾನಕ್ಕಾಗಿ ಮತ್ತೊಂದು ಸಭೆ ನಡೆಸುವ ಸಾಧ್ಯತೆ ಇದೆ.
ಕರ್ನಾಟಕ
Comments are closed.