ಕರ್ನಾಟಕ

ಮಳೆ ಅವಾಂತರ ಬಿಬಿಎಂಪಿಗೆ ಗಂಡಾಂತರ

Pinterest LinkedIn Tumblr

raiಬೆಂಗಳೂರು, ಮೇ ೨೦- ಇಷ್ಟು ದಿನ ಬಿಸಿಲಿನ ಪ್ರಖರತೆಗೆ ತತ್ತರಿಸಿದ್ದ ನಗರದ ಜನತೆ ಇದೀಗ ಮಳೆಯ ಆರ್ಭಟಕ್ಕೆ ಕಂಗಾಲಾಗುವಂತಾಗಿದೆ. ನಿನ್ನೆ ಸುರಿದ ಒಂದೇ ಮಳೆಗೆ “ಸಾಕಪ್ಪ ಸಾಕು” ಎನ್ನುವಂತಾಗಿದ್ದು, ತಗ್ಗುಪ್ರದೇಶದ ನಿವಾಸಿಗಳು ಕಳೆದ ರಾತ್ರಿ ನಿದ್ದೆಯಿಲ್ಲದೆ ರಾತ್ರಿ ಕಳೆಯುವಂತಾಯಿತು.
ನಗರದಲ್ಲಿ ಗುರುವಾರ ಮಧ್ಯರಾತ್ರಿ ಭಾರಿ ಮಳೆ ಸುರಿದಿದ್ದು, ವಿವಿಧೆಡೆ ತಗ್ಗು ಪ್ರದೇಶಗಳಿಗೆ, ಅಪಾರ್ಟ್‌ಮೆಂಟ್ ಬೇಸ್‌ಮೆಂಟ್‌ಗಳಿಗೆ, ಅಂಡರ್‌ಪಾಸ್‌ಗಳಿಗೆ ನೀರು ನುಗ್ಗಿದೆ. ನಗರದ ನಾಲ್ಕಾರು ಕಡೆ ಮರಗಳು ಉರುಳಿದ್ದು, ಅವನ್ನು ಬೆಳಗಿನ ಹೊತ್ತಿಗೆ ತೆರವುಗೊಳಿಸಲಾಗಿದೆ. ನಾಲ್ಕಾರು ಕೊಳೆಗೇರಿಗಳಿಗೆ, ತಗ್ಗು ಪ್ರದೇಶದ ಬಡಾವಣೆಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಜೆಪಿನಗರದ ಮೊದಲ ಹಂತದ ನಾಗಾರ್ಜುನ ಎನ್‌ಕ್ಲೇವ್ ಅಪಾರ್ಟ್‌ಮೆಂಟ್ ತಳ ಮಹಡಿಗೆ ನೀರು ನುಗ್ಗಿದ್ದು, ೫೦ಕ್ಕೂ ಹೆಚ್ಚು ಐಶಾರಾಮಿ ಕಾರುಗಳು ಮುಳುಗಿ ಹೋಗಿವೆ. ಅಪಾರ್ಟ್‌ಮೆಂಟ್ ಪಕ್ಕದ ರಾಜಕಾಲುವೆ ತಡೆಗೋಡೆ ಒಡೆದು ನೀರು ತಳಮಹಡಿಗೆ ನುಗ್ಗಿದೆ. ಈ ಬಗ್ಗೆ ಅಪಾರ್ಟ್‌ಮೆಂಟ್ ವಾಸಿಗಳು ತಕ್ಷಣ ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತಿಳಿಸಿದ್ದಾರೆ.
ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದರೆ ಅಲ್ಲಿ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಬಹಳ ತೊಂದರೆಯಾಯಿತು ಎಂದು ನಿವಾಸಿಗಳು ಆರೋಪಿಸಿದ್ದಾರೆ. ಬಿಬಿಎಂಪಿ ಮಳೆಯಿಂದ ಆಗುವ ಅನಾಹುತ ತಪ್ಪಿಸಲು ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ರಾತ್ರಿ ಮಳೆ ಬಂದು ಮನೆಗಳಿಗೆ ನೀರು ನುಗ್ಗಿದ್ದರೂ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆ ೪.೩೦ಕ್ಕೆ ಸುಮಾರಿಗೆ ಆಗಮಿಸಿ ಆಟೊಪ್ರೇಮ್ ಪಂಪ್ ಮೂಲಕ ನೀರನ್ನು ಹೊರಕ್ಕೆ ಹಾಕಿದ್ದಾರೆ. ರಾತ್ರಿ ಪೂರ್ತಿ ಮಳೆಯಿಂದಾಗಿ ತಗ್ಗುಪ್ರದೇಶದ ನಿವಾಸಿಗಳು ನಿದ್ರೆ ಇಲ್ಲದೆ ಕಾಲ ಕಳೆಯುವಂತಾಯಿತು. ಅರ್ಧ ನೀರನ್ನು ಆಚೆ ತೆಗೆಯಲು ಮೂರ-ನಾಲ್ಕು ಗಂಟೆ ಕಾಲ ಹಿಡಿದಿದೆ. ಕಚೇರಿಗೆ ತೆರಳಲು ವಾಹನಗಳಿಲ್ಲ. ಸಮಸ್ಯೆಗೆ ಬಿಬಿಎಂಪಿಯೇ ಕಾರಣ ಎಂದು ನಿವಾಸಿಗಳು ದೂರಿದ್ದಾರೆ. ಸಾಕಷ್ಟು ದ್ವಿಚಕ್ರ ವಾಹನಗಳು ಕೂಡ ನೀರಲ್ಲಿ ಮುಳುಗಡೆಯಾಗಿವೆ.
ಜನರ ಪರದಾಟ
ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಮೆಜೆಸ್ಟಿಕ್ ಸುತ್ತಲಿನ ವಿವಿಧ ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಆನಂದರಾವ್ ವೃತ್ತ ಸಮೀಪದ ರೈಲ್ವೆ ಅಂಡರ್‌ಪಾಸ್‌ನಲ್ಲಿ ವರ್ಷದಂತೆ ಈ ಬಾರಿಯೂ ನೀರು ನಿಂತು ವಾಹನ ಸವಾರರು ಪರದಾಡಿದರು. ಹೊರ ಊರಿಗೆ ತೆರಳುವ ಖಾಸಗಿ ಬಸ್‌ಗಳು ಬೇರೆ ಮಾರ್ಗ ಹುಡುಕಿಕೊಂಡು ವಿಳಂಬವಾಗಿ ಹೊರಟಿತು.
ಬನಶಂಕರಿ ಬಸ್ ನಿಲ್ದಾಣ ಬಳಿ ಬೃಹತ್ ಮರವೊಂದು ರಸ್ತೆ ಮಧ್ಯೆ ಉರುಳಿ ಬಿದ್ದ ಪರಿಣಾಮ ಮರ ತೆರವುಗೊಳಿಸುವವರೆಗೂ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಸಾರಕ್ಕಿ ಸಮೀಪ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಬೆಳಗಿನ ವರೆಗೂ ನಿವಾಸಿಗಳು ಮನೆಯೊಳಗೆ ತುಂಬಿದ್ದ ನೀರು ಆಚೆ ಹಾಕುವಲ್ಲೇ ಕಾಲ ಕಳೆದರು. ಇನ್ನು ಮಳೆಯ ನೀರಲ್ಲಿ ಡಿವೈಡರ್ ಇರುವುದನ್ನು ಗುರುತಿಸಲಾಗದ ಕಾರು ಚಾಲಕರೊಬ್ಬರು ಕೆ.ಆರ್.ಪುರಂ ತೂಗು ಸೇತುವೆ ಸಮೀಪ ಡಿವೈಡರ್ ಮೇಲೆ ಕಾರು ಹತ್ತಿಸಿಕೊಂಡು ಅಲ್ಲಿಂದ ಹೊರಬರಲು ಪರದಾಡಿದರು. ಈ ಕಾರು ಡಿಕ್ಕಿಯಿಂದ ಡಿವೈಡರ್ ಮೇಲಿದ್ದ ಮರ ಧರೆಗುರುಳಿದೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮಳೆ ಮುಂದುವರಿಯು ಸಾಧ್ಯತೆ: ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹಮಾನ ಇಲಾಖೆ ತಿಳಿಸಿದೆ. ರಾಜ್ಯದ ಒಳನಾಡು, ಕರಾವಳಿ, ಉತ್ತರ ಭಾಗದಲ್ಲಿ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ ಎಂದು ಇಲಾಖೆ ತಿಳಿಸಿದೆ.

Comments are closed.