ಕರ್ನಾಟಕ

ಬಿಎಂಟಿಸಿ ಬಸ್ ಸೇವೆಗೆ ಮೊಬೈಲ್ ಆಪ್

Pinterest LinkedIn Tumblr

mobile-appಬೆಂಗಳೂರು, ಮೇ ೨೦: ಇನ್ನಷ್ಟು ಪ್ರಯಾಣಿಕ ಸ್ನೇಹಿ ಉಪಕ್ರಮಕ್ಕೆ ಮುಂದಾಗಿರುವ ಬಿಎಂಟಿಸಿ, ಬಸ್ ಸೇವೆಗಳ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಒಳಗೊಂಡ ಮೊಬೈಲ್ ಆಪ್ ಒಂದನ್ನು ಮುಂದಿನ ವಾರ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ಈ ಹೊಸ ಮೊಬೈಲ್ ಆಪ್‌ನಲ್ಲಿ ಬಸ್ ಹೊರಡುವ ಮತ್ತು ತಲುಪುವ ನೈಜ ಸಮಯ ಸೇರಿದಂತೆ ಹಲವು ಮಾಹಿತಿಗಳು ಕೈಬೆರಳಲ್ಲೇ ಪ್ರಯಾಣಿಕರಿಗೆ ದೊರಕಲಿದೆ. ಪ್ರಾರಂಭಿಕವಾಗಿ ಸುಮಾರು ೭೦೦ರಿಂದ ೧೦೦೦ ಬಸ್‌ಗಳ ಸಯಮವನ್ನು ಈ ಅಪ್ಲಿಕೇಷನ್‌ನಲ್ಲಿ ಸೇರಿಸಲಾಗುತ್ತದೆ. ಮುಂದಿನ ಕೆಲವೇ ವಾರಗಳಲ್ಲಿ ಎಲ್ಲಾ ೬೪೦೦ ಬಸ್‌ಗಳ ಸಮಯವೂ ಇದರಲ್ಲಿ ಅಡಕವಾಗಲಿದೆ. ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಮೊಬೈಲ್ ಆಪ್‌ನಲ್ಲಿ ಅತ್ಯಲ್ಪ ಮಾಹಿತಿ ದೊರೆಯುತ್ತಿತ್ತು. ಮಾತ್ರವಲ್ಲ ಅದಕ್ಕೆ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಆದರೆ ಈ ಹೊಸ ಆಪ್‌ನಲ್ಲಿ ಸಮಗ್ರ ಮಾಹಿತಿ ದೊರೆಯಲಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್ ತಿಳಿಸಿದ್ದಾರೆ.
ಬಿಎಂಟಿಸಿ ರೂಪಿಸಿರುವ ಇಂಟಲಿಜಂಟ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಪ್ರಾಜೆಕ್ಟ್‌ನಡಿ ಹಲವು ಸೇವೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಾರ ಉದ್ಘಾಟಿಸಲಿದ್ದಾರೆ. ಇದರಲ್ಲಿ ಈ ಮೊಬೈಲ್ ಆಪ್ ಕೂಡ ಸೇರಿದೆ. ದೈನಂದಿನ ಪ್ರಯಾಣಿಕರು ಮತ್ತು ಹೊಸ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ಆಪ್ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರು ತಾವು ಇರುವ ಸ್ಥಳ, ಹತ್ತಿರದ ಬಸ್ ನಿಲ್ದಾಣ, ತಮ್ಮ ನಿಲ್ದಾಣಕ್ಕೆ ಇರುವ ದೂರ ಮತ್ತು ಸಮಯ, ಬಸ್ ಬರುವ ಸಮಯ ಮುಂತಾದ ಮಾಹಿತಿಗಳು ಈ ಆಪ್‌ನಲ್ಲಿ ದೊರಕಲಿದೆ. ಮಾತ್ರವಲ್ಲ ಇದರಲ್ಲಿ ಮೆಜೆಸ್ಟಿಕ್, ಟಿಟಿಎಂಸಿ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಂತಹ ಪ್ರಮುಖ ಬಸ್‌ನಿಲ್ದಾಣಗಳ ಮಾಹಿತಿಯನ್ನು ಸೇರಿಸಲಾಗಿದೆ.
೨೦೧೪ರಲ್ಲಿ ಮೊದಲ ಬಾರಿಗೆ ಬಿಎಂಟಿಸಿ ಆಪ್ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಆಪ್ ಡೌನ್‌ಲೋಡ್ ಮಾಡಿದವರಿಗೆ, ನೀವು ಕೇಳಿದ ಮಾಹಿತಿ ದೊರಕುತ್ತಿಲ್ಲ ಮುಂತಾದ ರೀತಿಯಲ್ಲಿ ಉತ್ತರ ಬರುತ್ತಿತ್ತು. ಇದರಿಂದ ಅದು ಯಶಸ್ವಿಯಾಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಬಿಎಂಟಿಸಿ ಅಧಿಕಾರಿಗಳು, ಹೊಸ ಆಪ್ ತಯಾರಿಸಿ ಜನರಿಗೆ ಹೆಚ್ಚಿನ ಸೌಲಭ್ಯ, ಮಾಹಿತಿ ನೀಡಲು ಮುಂದಾಗಿದ್ದಾರೆ.
ಈ ಹೊಸ ಆಪ್‌ನಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಗರದ ಬಸ್ ಸೇವೆಗಳ ಬಗ್ಗೆ ಇದು ನೈಜ ಸಮಯಗಳನ್ನು ತಿಳಿಸಲಿದೆ. ಇದರಿಂದ ಬಿಎಂಟಿಸಿ ಮೇಲೆ ಪ್ರಯಾಣಿಕರಿಗೆ ವಿಶ್ವಾಸವೃದ್ಧಿಯಾಗಲಿದೆ. ಸಾರ್ವಜನಿಕರು ತಮ್ಮ ಪ್ರಯಾಣದ ಯೋಜನೆಯನ್ನು ಈ ಆಪ್ ನೋಡಿಕೊಂಡು ನಿಶ್ಚಯ ಮಾಡಿಕೊಳ್ಳಬಹುದು ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಡ್ರಾಯ್ಡ್ ಮೊಬೈಲ್‌ಗಾಗಿ ಈ ಆಪ್ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇತರ ಮೊಬೈಲ್‌ಗೂ ಅಳವಡಿಸುವಂತಹ ಆಪ್ ಬಿಡುಗಡೆ ಮಾಡಲಾಗುವುದು. ಸ್ಮಾರ್ಟ್‌ಫೋನ್ ಬಳಸದವರು ಬಿಎಂಟಿಸಿಯ ಸಹಾಯವಾಣಿ ಸಂಖ್ಯೆಗೆ ಯಾವುದೇ ಸಮಯದಲ್ಲೂ ಕರೆ ಮಾಡಿ ಬಸ್ ಸೇವೆಗಳು, ಬಸ್ ಪ್ರಯಾಣ ದರ ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯಬಹುದು.
ಸುಮಾರು ೫೨ ಲಕ್ಷ ಜನ ಪ್ರತಿದಿನ ಬಿಎಂಟಿಸಿ ಬಸ್ ಸೇವೆಯನ್ನು ಬಳಸುತ್ತಿದ್ದಾರೆ. ಇವರಲ್ಲಿ ಶೇಕಡಾ ೩೦ರಿಂದ ೪೦ರಷ್ಟು ಮಂದಿ ಆಪ್ ಡೌನ್‌ಲೋಡ್ ಮಾಡಿಕೊಂಡರೆ ಈ ಯೋಜನೆ ಯಶಸ್ವಿಯಾಗಿ ಬಿಎಂಟಿಸಿ ಇನ್ನಷ್ಟು ಮೂಲಸೌಕರ್ಯ ಒದಗಿಸಲು ಸಹಾಯವಾಗುತ್ತದೆ ಎಂಬುದು ಬಿಎಂಟಿಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ.

Comments are closed.