ಕರ್ನಾಟಕ

ಫುಟ್‌ಪಾತ್ ಮೇಲಿನ ಅಂಗಡಿ ತೆರವು

Pinterest LinkedIn Tumblr

20rajajinagar2ಬೆಂಗಳೂರು, ಮೇ ೨೦- ರಾಜಾಜಿನಗರ ಇ.ಎಸ್.ಐ. ಆಸ್ಪತ್ರೆ ಸಮೀಪದಲ್ಲಿ ಫುಟ್‌ಪಾತ್ ಮೇಲಿದ್ದ ೬೦ಕ್ಕೂ ಹೆಚ್ಚು ಅಂಗಡಿಗಳನ್ನು ಬಿಬಿಎಂಪಿ ಕಾರ್ಯಾಚರಣೆ ಪಡೆ ಇಂದು ನೆಲಸಮಗೊಳಿಸಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಕಾರ್ಯಾಚರಣೆ ಪಡೆ ಸಿಬ್ಬಂದಿಗಳು ಅಂಗಡಿ ವ್ಯಾಪಾರಿಗಳ ವಿರೋಧವನ್ನು ಲೆಕ್ಕಿಸದೆ ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸಿ ಅಂಗಡಿಗಳನ್ನು ತೆರವುಗೊಳಿಸಿದರು.
ಕಳೆದ ಹಲವು ವರ್ಷಗಳಿಂದ ಫುಟ್‌ಪಾತ್ ಮೇಲೆ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿಕೊಂಡು ಹಣ್ಣು, ಹೂವು ಮತ್ತು ತರಕಾರಿ ವ್ಯಾಪಾರವನ್ನು ನಡೆಸುತ್ತಿದ್ದರು.
ಸ್ಥಳೀಯ ನಿವಾಸಿ ಗೀತಾ ಶರ್ಮ ಎಂಬುವವರು ಫುಟ್‌ಪಾತ್ ಮೇಲಿನ ಅಂಗಡಿಗಳ ವಿರುದ್ಧ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ನ್ಯಾಯಾಲಯ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಅಂಗಡಿಗಳನ್ನು ಬೆಳಿಗ್ಗೆ ೭ ಗಂಟೆಗೆ ವೇಳೆಗೆ ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿಗಳು ಜೆಸಿಬಿಯೊಂದಿಗೆ ಬರುತ್ತಿದ್ದಂತೆ, ಅಂಗಡಿ ಮಾಲೀಕರು ತೀವ್ರ ಪ್ರತಿರೋಧ ಒಡ್ಡಿದರು. ಅಲ್ಲದೆ, ಅಂಗಡಿಗಳ ತೆರವಿಗೆ ಕಾರಣರಾದ ಗೀತಾ ಶರ್ಮ ಅವರ ಮನೆಮುಂದೆಯೂ ನೂರಾರು ಮಂದಿ ವ್ಯಾಪಾರಿಗಳು ದಿಢೀರ್ ಮುತ್ತಿಗೆ ಹಾಕಿದರು.
ಪೊಲೀಸರು ಅವರನ್ನು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾದರು.
ಇದೇ ವೇಳೆ ವ್ಯಾಪಾರಿಗಳು ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದು ಬೆಳಿಗ್ಗೆ ಬೇರೆ ಕಡೆ ಸ್ಥಳಾವಕಾಶ ಕೊಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲ ಮಹಿಳಾ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಅಂಗಡಿಗಳನ್ನು ನೆಲಸಮಗೊಳಿಸಿದ್ದನ್ನು ಕಣ್ಣಾರೆ ಕಂಡು ಮುಂದೇನು ಗತಿ ಎಂದು ಚಿಂತಾಕ್ರಾಂತರಾಗಿದ್ದರು.

Comments are closed.