ಕರ್ನಾಟಕ

ರಾಯಚೂರು ಮತ್ತೆ ಮರುಕಳಿಸಿದ ಉದ್ವಿಗ್ನ ಪರಿಸ್ಥಿತಿ

Pinterest LinkedIn Tumblr

raychuru

ರಾಯಚೂರು: ಬೈಕ್ ಅಪಘಾತ ಕ್ಷುಲ್ಲಕ ಕಾರಣಕ್ಕೆ ಮುರುಳಿ ಯಾದವ್ ಗುಂಪು ಹಾಗೂ ಹರಿಜನವಾಡದ ಯುವಕರ ಗುಂಪಿನ ಮಧ್ಯೆ ನಡೆದ ಶುಕ್ರವಾರ ಘರ್ಷಣೆಗೆ ಸಂಬಂಧಿಸಿ ಶಾಂತಿ ಸಭೆ ನಡೆಸಲು ಬಂದ ಎಸ್ಪಿ ನೇತೃತ್ವದ ಪೊಲೀಸರು ಮತ್ತು ಹರಿಜನವಾಡ ಯುವಕರ ಮಧ್ಯೆ ಮಾತಿನ ಚಕಮಕಿ ಹಾಗೂ ನೂಕುನುಗ್ಗಲು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದರಿಂದ ಹಠಾತ್ ಉದ್ರಿಕ್ತ ಸ್ಥಿತಿ ನಿರ್ಮಾಣವಾಗಿದೆ.

ಇಂದು ಮುಂಜಾನೆ ಹರಿಜನವಾಡ ಸಮುದಾಯ ಭವನದಲ್ಲಿ ಶಾಂತಿ ಸಭೆ ಕರೆಯಲಾಗಿತ್ತು. ಎಸ್ಪಿ ಡಾ.ಚೇತನಸಿಂಗ್ ರಾಥೋರ್, ‌ಎ‌ಎಸ್ಪಿ ಪಾಪಯ್ಯ, ಡಿಎಸ್ಪಿ ಚಂದ್ರಶೇಖರ ನೀಲಗಾರ್ ಹಾಗೂ ನೇತಾಜಿನಗರ ಮತ್ತು ಮಾರ್ಕೆಟ್ ಯಾರ್ಡ್ ಠಾಣಾ ಪೊಲೀಸರು ಸಭೆಗೆ ಆಗಮಿಸಿದರು. ಶಾಂತಿ ಸಭೆ ಸಂದರ್ಭದಲ್ಲಿ ಎಸ್ಪಿ ಅವರು ಮಾತನಾಡುತ್ತಾ, ಹಲ್ಲೆ ಮಾಡಿದ ಆರೋಪಿಗಳನ್ನು ಇಂದು ಸಂಜೆಯೊಳಗೆ ಬಂಧಿಸಲಾಗುತ್ತದೆಂದು ಭರವಸೆ ನೀಡಿದರು. ಹಲ್ಲೆಗೆ ಸಂಬಂಧಿಸಿದ ವೀಡಿಯೋ ಚಿತ್ರೀಕರಣ ದಾಖಲೆಗಳಿದ್ದು, ಇದರ ಆಧಾರದ ಮೇಲೆ ಮುಖ್ಯ ಆರೋಪಿಗಳನ್ನು ಬಂಧಿಸಲಾಗುತ್ತದೆಂದು ತಿಳಿಸಿದರು.

ಇದಕ್ಕೆ ಸಂತೃಪ್ತಗೊಳ್ಳದ ನೆರೆದ ಯುವಕರು ಘಟನೆ ನಡೆದು ನಾಲ್ಕು ದಿನ ಕಳೆದಿವೆ. ಆದರೆ, ಇಲ್ಲಿವರೆಗೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ತಿಮ್ಮಪ್ಪ ಮತ್ತು ಇನ್ನಿತರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದರೂ, ಕೊಲೆಯತ್ನ ಐಪಿಸಿ 307 ಪ್ರಕರಣ ದಾಖಲಿಸುವಲ್ಲಿ ನೇತಾಜಿನಗರ ಠಾಣೆ ಪಿಎಸ್ಐ ನಿರ್ಲಕ್ಷ್ಯೆ ವಹಿಸಿದ್ದಾರೆ. ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿದೆಂದು ಆಕ್ರೋಶ ವ್ಯಕ್ತಪಡಿಸಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ಕರ್ತವ್ಯ ನಿರ್ಲಕ್ಷೆ ವಹಿಸಿದ ನೇತಾಜಿನಗರ ಪಿಎಸ್ಐ ಅವರನ್ನು ಅಮಾನತುಗೊಳಿಸಬೇಕೆಂದು ಬಿಗಿ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸ್ ಮತ್ತು ಯುವಕರ ಮಧ್ಯೆ ಮಾತಿನ ಚಕಮಕಿ ತೀವ್ರ ಸ್ವರೂಪಕ್ಕೆ ತಿರುಗಿತು. ಶಾಂತಿ ಕಾಯ್ದುಕೊಳ್ಳುವಂತೆ ಮನವಿ ಮಾಡಿ, ಬಡಾವಣೆಯಲ್ಲಿ ಅಶಾಂತಿ ತಲೆದೂರದಂತೆ ಎಚ್ಚರವಹಿಸಲು ಪೊಲೀಸರು ಸೂಚಿಸಿ ಅಲ್ಲಿಂದ ನಿರ್ಗಮಿಸಿದರು.

ಎಸ್ಪಿ ತೆರಳಿದ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ಹಠಾತ್ತನೆ ಉದ್ರಿಕ್ತಗೊಂಡು ಪೊಲೀಸ್ ಮತ್ತು ಯುವಕರ ಮಧ್ಯೆ ವಾಗ್ವಾದ ಆರಂಭಗೊಂಡಿತ್ತು.

ಉದ್ರಿಕ್ತಗೊಂಡ ಯುವಕರ ಗುಂಪು ನಗರದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಲು ತೆರಳಲು ಮುಂದಾದಾಗ ಅವರನ್ನು ನೇತಾಜಿ ವೃತ್ತದಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಯುವಕರ ಗುಂಪು ಮತ್ತು ಪೊಲೀಸರ ಮಧ್ಯೆ ನೂಕುನುಗ್ಗಲು ತೀವ್ರಗೊಂಡು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಲಾಯಿತು.

Write A Comment