ಕರ್ನಾಟಕ

ಬಾಗಲಕೋಟೆ ಲೋಕಾಪುರ ಬಳಿ ಅಪಘಾತ: ಆರು ಮಂದಿ ಸಾವು

Pinterest LinkedIn Tumblr

bagalkote

ಬಾಗಲಕೋಟೆ: ಟಂಟಂ ವಾಹನ ಹಾಗೂ-ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಜಿಲ್ಲೆಯ ಮುಧೋಳ ತಾಲ್ಲೂಕು ಲೋಕಾಪುರ ಬಳಿ ರಾಯಚೂರು–ಬೆಳಗಾವಿ ಹೆದ್ದಾರಿಯಲ್ಲಿ ನಡೆದಿದೆ.

ಮುಧೋಳ ತಾಲ್ಲೂಕು ಕಿಂಚಖಂಡಿಯ ರೇಷ್ಮಾ ಲಕ್ಕಪ್ಪ ಕಾತರಕಿ(14), ದರ್ಶನ ಅರ್ಜುನ ಸಾಲು ಮಂಟಪ(12), ಯಮನೂರು ಮಾರುತಿ ಸಾಲು ಮಂಟಪ(8), ಲಲಿತಾ ಮಾರುತಿ ಸಾಲು ಮಂಟಪ(26), ಆನಂದ್(25), ಉನಗುಂದ ತಾಲ್ಲೂಕು ಉಪ್ಪನಾಳು ಗ್ರಾಮದ ಸೋಮವ್ವ(20) ಸಾವಿಗೀಡಾದವರು.

ಟಂಟಂ ವಾಹನ ಚಾಲಕ ಅರ್ಜುನ ಸುಬ್ಬುರಾಯ ಸಾಲು ಮಂಟಪ ಅವರ ಪತ್ನಿ ಸುಮವ್ವ ಸಂಬಂಧಿಕರಾದ ಮಾರುತಿ ಸಾಲು ಮಂಟಪ, ಸುರೇಶ್ ಕಿಳ್ಳೆಖ್ಯಾತರ ಮಂಜುಳಾ ಸಾಲು ಮಂಟಪ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಳುಗಳನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಂಟಂ ವಾಹನ ಬಾಗಲಕೋಟೆ ತಾಲ್ಲೂಕು ಹಳೇ ವೀರಾಪುರದಿಂದ ಚಿಂಚಖಂಡಿಗೆ ತೆರಳುತ್ತಿತ್ತು. ಜಲ್ಲಿ ಕಲ್ಲು ತುಂಬಿದ ಟಿಪ್ಪರ್‌ ಲೋಕಾಪುರಕಡೆಯಿಂದ ಬಾಗಲಕೋಟೆಕಡೆಗೆ ಬರುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.

ಅಪಘಾತದ ರಭಸಕ್ಕೆ ಟಂಟಂ ನುಜ್ಜುಗುಜ್ಜಾಗಿದ್ದು, ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದ ದೃಶ್ಯ ಅಪಘಾತದ ಭೀಕರತೆಯನ್ನು ಬಿಂಬಿಸುತ್ತಿತ್ತು.
ಟಂಟಂನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ಸಂಬಂಧಿಕರಾಗಿದ್ದು, ಹಳೇ ವೀರಾಪುರದಲ್ಲಿ ಶನಿವಾರ ನಡೆದ ದುರ್ಗಾದೇವಿ ಜಾತ್ರೆ ಮುಗಿಸಿ ಮುರು ದಿನ ಎಲ್ಲರೂ ಚಿಂಚಖಂಡಿಗೆ ಹೊರಟಿದ್ದರು.

ಲೋಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಎಂ.ಎನ್‌. ನಾಗರಾಜ್‌ ಹಾಗೂ ಮುದೋಳ ಶಾಸಕ ಗೋವಿಂದ ಕಾರಜೋಳ ಭೇಟಿ ನೀಡಿ, ಸಂಬಂಧಿಕರಿಗೆ ಸಾಂತ್ವನ ಹೇಳಿದರು.

Write A Comment