ಕರ್ನಾಟಕ

ರಾಜಿನಾಮೆ ಕೇಳಲು ಅವರು ಯಾರು…? ಸಚಿವ ಅಂಬರೀಶ್ ಗುಡುಗು

Pinterest LinkedIn Tumblr

ambi

ಮಂಡ್ಯ: ಮುಂದಿನ ಸಚಿವ ಸಂಪುಟದ ಪುನಾರಚನೆ ವೇಳೆ ನನ್ನನ್ನು ಸಂಪುಟದಲ್ಲಿ ಮುಂದುವರಿಸಿದರೂ, ಕೈಬಿಟ್ಟರೂ ಸಂತೋಷವೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಸ್ಪಷ್ಟಪಡಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಆವರಣದಲ್ಲಿ ನಬಾರ್ಡ್ ಹಾಗೂ ಆರ್‍ಕೆವೈ ಯೋಜನೆಗಳ ಅನುದಾನ ಹಾಗೂ ಸಮಿತಿ ನಿತಿಯಿಂದ 10.90 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನಗೆ ಎಲ್ಲಾ ಭಾಗ್ಯವನ್ನೂ ಕಲ್ಪಿಸಿದೆ. ಆದ್ದರಿಂದ ನಾನು ಆ ಪಕ್ಷಕ್ಕೆ ಋಣಿಯಾಗಿದ್ದೇನೆ ಎಂದರು.

ಚಿತ್ರರಂಗದಲ್ಲಿ ಖಳನಟನಾಗಿ 400 ರೂ. ಸಂಭಾವನೆ ಪಡೆಯುತ್ತಿದ್ದ ನನ್ನನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಸಚಿವನನ್ನಾಗಿ ಮಾಡಿ ಕೆಂಪು ದೀಪದ ಕಾರಿನಲ್ಲಿ ಓಡಾಡುವಂತೆ ಕಾಂಗ್ರೆಸ್‍ಪಕ್ಷ ಅವಕಾಶ ಕಲ್ಪಿಸಿದೆ. ಅಧಿಕಾರ ಇಂದು ಇರುತ್ತದೆ, ನಾಳೆ ಹೋಗುತ್ತದೆ. ನಾನು ಮಾಡಿರುವ ಒಳ್ಳೆಯ ಕೆಲಸಗಳೇ ನನ್ನ ಕೈ ಡಿಯಲಿವೆ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದ ಸಚಿವರ ಕಾರ್ಯ ವೈಖರಿ ಬಗ್ಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರು ಅಸಮಾಧಾನ ವ್ಯಕ್ತಪಡಿಸಿರುವುದು ನಿಜ. ಈ ಹಿಂದಿನಿಂದಲೂ ರಾಜ್ಯಪಾಲರು ರಾಜ್ಯ ಸರ್ಕಾರ ಹಾಗೂ ಸಚಿವರ ಬಗ್ಗೆ ಆರೋಪ ಮಾಡುತ್ತಲೇ ಬಂದಿದ್ದಾರೆ. ಆದರೆ, ಯಾವ ಸಚಿವರು ಎಂದು ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜೀನಾಮೆ ಕೇಳಲು ಅವರ್ಯಾರು?:

ನನ್ನ ರಾಜೀನಾಮೆ ಕೇಳಲು ಅವರ್ಯಾರು? ನಾನು ತಪ್ಪು ಮಾಡಿದ್ದರೆ ಜನ ಕೇಳುತ್ತಾರೆ. ಅವರಿಗೆ ಈಗಾಗಲೇ ಶ್ರೀರಂಗಪಟ್ಟಣ ಜನತೆ ಬುದ್ಧಿ ಕಲಿಸಿದ್ದಾರೆ, ಮುಂದೆಯೂ ಕಲಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‍ಗೆ ದ್ರೋಹ ಬಗೆಯುವ ವ್ಯಕ್ತಿ ನಾನಲ್ಲ, ಅವರು ಕಾಂಗ್ರೆಸ್ ಪಕ್ಷಕ್ಕೆ ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಶ್ರೀರಂಗಪಟ್ಟಣ ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂದರ್ಭ ಪಕ್ಷೇತರ ಸದಸ್ಯರೇ ನಿರ್ಣಯ ಕೈಗೊಂಡು, ಜೆಡಿಎಸ್‍ನ್ನು ಬೆಂಬಲಿಸಿದ್ದಾರೆ. ಇದರಲ್ಲಿ ನನ್ನ ಪಾತ್ರವೇನಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಕ್ತಿಮೀರಿ ಕೆಲಸ ಮಾಡುತ್ತಿದ್ದೇನೆ:

ಮಂಡ್ಯ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತಡೆಯಲು ನಾನು ಮತ್ತು ಅಧಿಕಾರಿಗಳು ಶಕ್ತಿಮಿರಿ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಒಳ್ಳೆಯದಾಗಲಿ ಎಂದು ಕೆಲ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ್ದೆ. ಅಲ್ಲದೆ, ಬರ ಅಧ್ಯಯನ ಸಂಪುಟ ಸಮಿತಿಯನ್ನು ಎಲ್ಲ ತಾಲೂಕುಗಳಿಗೂ ಕರೆತಂದು ಅಧ್ಯಯನ ನಡೆಸಿ, ಪ್ರತಿ ತಾಲೂಕುಗಳಿಗೂ ಬರ ನಿವಾರಣೆಗಾಗಿ 50 ಲಕ್ಷ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗಿದೆ ಎಂದು ಹೇಳಿದರು.

ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಸಹ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ಡಿ.ಆರ್.ಪುಷ್ಪಾ, ನಿರ್ದೇಶಕರಾದ ಎಂ.ಮಾದೇಗೌಡ, ತಿಮ್ಮೇಗೌಡ, ವೆಂಕಟೇಶ್ ಕುಮಾರ್, ವಿಷಕಂಠಯ್ಯ, ಸುರೇಶ್, ರಾಮಚಂದ್ರ ಇತರರು ಇದ್ದರು.

Write A Comment