ಕರ್ನಾಟಕ

ಸೌರ ವಿದ್ಯುದುತ್ಪಾದನೆ ಹೆಚ್ಚಿದರೆ ರೈತರಿಗೆ ಹಗಲಿನಲ್ಲಿ ವಿದ್ಯುತ್

Pinterest LinkedIn Tumblr

9j3ಬೆಂಗಳೂರು, ಮೇ ೯ – ರಾಜ್ಯದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಹೆಚ್ಚಾದರೆ ರೈತರಿಗೆ ಹಗಲಿನ ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವ ಬಗ್ಗೆ ಆದೇಶ ಹೊರಡಿಸುವ ಚಿಂತನೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದಿದೆ ಎಂದು ಆಯೋಗದ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಇಂದಿಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 134 ಮೆ.ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರ ಪ್ರಮಾಣ 1.5 ಸಾವಿರದಿಂದ 2 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾದರೆ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯತನಕ ರೈತರಿಗೆ 3 ಫೇಸ್ ವಿದ್ಯುತ್ ನೀಡುವಂತೆ ಆದೇಶಿಸುವ ಯೋಚನೆ ಮುಂದಿದೆ ಎಂದು ಹೇಳಿದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನೂತನ ಕಚೇರಿ ಸಂಕೀರ್ಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಂಕರ ಲಿಂಗೇಗೌಡ, ರೈತರಿಗೆ ಹಗಲಿನ ವೇಳೆ 3 ಫೇಸ್ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡಿದರೆ ಅವರಿಗೂ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಚಿಂತನೆಯೂ ಇದೆ. ಎಲ್ಲದಕ್ಕೂ ಸೋಲಾರ್ ಉತ್ಪಾದನೆಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಶರಾವತಿ, ರಾಯಚೂರು, ಬಳ್ಳಾರಿ, ಶಾಖೋತ್ಸನ್ನ ವಿದ್ಯುತ್ ಘಟಕಗಳು ವಿದ್ಯುತ್ ಉತ್ಪಾದನೆ ಮಾಡಲು ಸಿದ್ಧವಿದೆ. ಆದರೆ, ಕಲ್ಲಿದ್ದಲು ಆದಾರಿತ ವಿದ್ಯುತ್ ಉತ್ಪಾನೆಗೆ ನೀರಿನ ಕೊರತೆ ಇದೆ. ನೀರು ಯತೇಚ್ಛವಾಗಿ ಬಂದರೆ ವಿದ್ಯುತ್ ಉತ್ಪಾದನೆ ಸರಾಗವಾಗಲಿದೆ ಎಂದು ಹೇಳಿದರು.
ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಇಲ್ಲ
ರಾಜ್ಯದಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಹೊರತುಪಡಿಸಿದರೆ ಎಲ್ಲವೂ ಸುಸೂತ್ರವಾಗಿ ಇದೆ. ಸದ್ಯ ರಾಜ್ಯ 9 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗಿದ್ದು, ಕೇಂದ್ರದಿಂದ ಹೆಚ್ಚು ಕಡಿಮೆ ಎರಡೂವರೆ ಸಾವಿರ ಮೆ.ವ್ಯಾ ವಿದ್ಯುತ್ ಬರುತ್ತದೆ ಎಂದರು.
ರಾಜ್ಯಸರ್ಕಾರ 6 ಸಾವಿರ ಮೆ.ವ್ಯಾ. ಸೋಲಾರ್ ಉತ್ಪಾದನೆಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಹೇಳಿದರು.

Write A Comment