ಮನೋರಂಜನೆ

ಒಂದು ರನ್‌ನಿಂದ ಗೆದ್ದ ಆರ್‌ಸಿಬಿ; ವಿರಾಟ್‌ ಬಳಗಕ್ಕೆ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ರೋಚಕ ಗೆಲುವು

Pinterest LinkedIn Tumblr

chris-jordan-rcb-win

ಮೊಹಾಲಿ: ಕ್ರಿಸ್‌ ಜೋರ್ಡಾನ್‌ ಎಸೆದ ಅಂತಿಮ ಓವರ್‌ನ ಕೊನೆಯ ಎಸೆತದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಗೆಲುವಿಗೆ ನಾಲ್ಕು ರನ್‌ ಬೇಕಿತ್ತು. ಕ್ರೀಸ್‌ನಲ್ಲಿ ಮಾರ್ಕಸ್‌ ಸ್ಟೊಯಿನಿಸ್‌ ಇದ್ದ ಕಾರಣ ಆತಿಥೇಯರ ಗೆಲುವು ನಿಶ್ಚಿತವೆಂದೇ ಭಾವಿಸಲಾಗಿತ್ತು.

ಆದರೆ ಜೋರ್ಡಾನ್‌ ಎಲ್ಲರ ನಿರೀಕ್ಷೆಯನ್ನು ತಲೆಕೆಳಗಾಗಿಸಿದರು. ಕೇವಲ ಎರಡು ರನ್‌ ಬಿಟ್ಟುಕೊಟ್ಟ ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪಾಳಯದಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್‌ ಗೆದ್ದ ಕಿಂಗ್ಸ್‌ ಇಲೆವೆನ್‌ ನಾಯಕ ಮುರಳಿ ವಿಜಯ್‌ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಬ್ಯಾಟಿಂಗ್‌ ಮಾಡಲು ಸಿಕ್ಕ ಅವಕಾಶವನ್ನು ವಿರಾಟ್‌ ಕೊಹ್ಲಿ ಸಾರಥ್ಯದ ತಂಡ ಚೆನ್ನಾಗಿಯೇ ಬಳಸಿಕೊಂಡಿತು. ಬೆಂಗಳೂರಿನ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 175ರನ್‌ ಪೇರಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವೆನ್‌ 4 ವಿಕೆಟ್‌ಗೆ 174ರನ್‌ ಕಲೆಹಾಕಿ ನಿರಾಸೆಯ ಕಡಲಲ್ಲಿ ಮುಳುಗಿತು.

ಅಬ್ಬರದ ಆರಂಭ: ಬ್ಯಾಟಿಂಗ್‌ ಆರಂಭಿಸಿದ ಆರ್‌ಸಿಬಿಗೆ ನಾಯಕ ವಿರಾಟ್‌ ಕೊಹ್ಲಿ ( 20; 21ಎ, 2ಬೌಂ) ಮತ್ತು ಕರ್ನಾಟಕದ ಕೆ.ಎಲ್‌.ರಾಹುಲ್‌ (42; 25ಎ, 6ಬೌಂ, 2ಸಿ) ಅಬ್ಬರದ ಆರಂಭ ನೀಡಿದರು. ಕಿಂಗ್ಸ್‌ ಇಲೆವೆನ್‌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 45 ಎಸೆತಗಳಲ್ಲಿ 63ರನ್‌ ಪೇರಿಸಿತು.ಈ ಜೋಡಿಯನ್ನು ಮುರಿಯಲು ಪಂಜಾಬ್‌ ನಾಯಕ ಮುರಳಿ ವಿಜಯ್‌ ಬೌಲಿಂಗ್‌ನಲ್ಲಿ ಹಲವು ಬದಲಾವಣೆಗಳನ್ನು ಮಾಡಿದರು.

ಎಂಟನೇ ಓವರ್‌ ಬೌಲ್‌ ಮಾಡಲು ವಿಜಯ್‌, ಸ್ಪಿನ್ನರ್‌ ಕೆ.ಸಿ. ಕಾರ್ಯಪ್ಪ ಕೈಗೆ ಚೆಂಡು ನೀಡಿದ್ದು ಫಲ ನೀಡಿತು. ರಾಜ್ಯದ ಪ್ರತಿಭಾನ್ವಿತ ಬೌಲರ್‌ ಕಾರ್ಯಪ್ಪ ತಾವೆಸೆದ ಮೊದಲ ಓವರ್‌ನ ಮೂರು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ರಾಹುಲ್‌ ಮತ್ತು ಕೊಹ್ಲಿ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ರಾಹುಲ್‌ ಅವರು ಚೆಂಡನ್ನು ಸ್ವೀಪ್‌ ಮಾಡಲು ಮುಂದಾಗಿ ಬೌಲ್ಡ್‌ ಆದರೆ, ಕೊಹ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ಮುರಳಿ ವಿಜಯ್‌ಗೆ ಕ್ಯಾಚ್‌ ನೀಡಿದರು.
ಇವರಿಬ್ಬರು ಔಟಾದ ಬಳಿಕ ಕ್ರೀಸ್‌ಗೆ ಬಂದ ಶೇನ್‌ ವ್ಯಾಟ್ಸನ್‌ (1) ಅವರಿಗೆ ಅಕ್ಷರ್‌ ಪಟೇಲ್‌ ತಳವೂರಲು ಬಿಡಲಿಲ್ಲ.

ಸೊಬಗಿನ ಇನಿಂಗ್ಸ್‌: ಬೆಂಗಳೂರಿನ ತಂಡ 67ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಒಂದಾದ ಡಿವಿಲಿಯರ್ಸ್‌ ಮತ್ತು ಸಚಿನ್‌ ಬೇಬಿ (33; 29ಎ, 1ಬೌಂ) ಸೊಗಸಾದ ಇನಿಂಗ್ಸ್‌ ಕಟ್ಟಿದರು. ಕಿಂಗ್ಸ್‌ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿದ ಈ ಜೋಡಿ ಆರಂಭದಲ್ಲಿ ನಿಧಾನವಾಗಿ ರನ್‌ ಸೇರಿಸುತ್ತಾ ಸಾಗಿತಲ್ಲದೆ, ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ರನ್‌ ಗಳಿಕೆಗೆ ವೇಗ ತುಂಬಿತು. ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್‌ ಬೀಸುತ್ತಾ ಆಟಕ್ಕೆ ಕುದುರಿಕೊಂಡ ಡಿವಿಲಿಯರ್ಸ್‌ ಆ ಬಳಿಕ ಎಂದಿನಂತೆ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

ದಕ್ಷಿಣ ಆಫ್ರಿಕಾದ ಬಲಗೈ ಬ್ಯಾಟ್ಸ್‌ಮನ್‌ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ ಸಹಿತ 64ರನ್‌ ಸಿಡಿಸಿದರು. ಸಂದೀಪ್‌ ಶರ್ಮಾ ಬೌಲ್‌ ಮಾಡಿದ 18ನೇ ಓವರ್‌ನ ಐದನೇ ಎಸೆತವನ್ನು ಬೌಂಡರಿಗಟ್ಟುವ ಭರದಲ್ಲಿ ಡಿವಿಲಿಯರ್ಸ್‌ ಕಾರ್ಯಪ್ಪ ಹಿಡಿದ ಸೊಗಸಾದ ಕ್ಯಾಚ್‌ಗೆ ಬಲಿಯಾದರು. ಇದರೊಂದಿಗೆ 88ರನ್‌ಗಳ ನಾಲ್ಕನೇ ವಿಕೆಟ್‌ ಜೊತೆಯಾಟಕ್ಕೂ ತೆರೆಬಿತ್ತು.

ದಿಟ್ಟ ಆಟ: ಗುರಿ ಬೆನ್ನಟ್ಟಿದ ಕಿಂಗ್ಸ್‌ ಇಲೆವೆನ್‌ ಕೂಡಾ ಉತ್ತಮ ಆರಂಭ ಪಡೆಯಿತು. ಹಾಶಿಮ್‌ ಆಮ್ಲಾ (21; 20ಎ, 2ಬೌಂ) ಮತ್ತು ನಾಯಕ ಮುರಳಿ ವಿಜಯ್‌ (89; 57ಎ, 12ಬೌಂ, 1ಸಿ) ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 33ಎಸೆತಗಳಲ್ಲಿ 45ರನ್‌ ಗಳಿಸಿ ಆರ್‌ಸಿಬಿ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿತು.ಇವರಿಬ್ಬರ ವಿಕೆಟ್‌ ಪಡೆದ ಶೇನ್‌ ವ್ಯಾಟ್ಸನ್‌ ಬೆಂಗಳೂರಿನ ತಂಡಕ್ಕೆ ಮೇಲುಗೈ ತಂದಿತ್ತರು. ವೃದ್ಧಿಮಾನ್‌ ಸಹಾ (16) ಮತ್ತು ಡೇವಿಡ್‌ ಮಿಲ್ಲರ್‌ (0) ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರಿಕೊಂಡ ರು. ಹೀಗಾಗಿ ಆರ್‌ಸಿಬಿ ಪಾಳಯದಲ್ಲಿ ಗೆಲುವಿನ ಕನಸು ಚಿಗುರೊಡೆದಿತ್ತು.
ಆದರೆ ಮಾರ್ಕಸ್ ಸ್ಟೊಯಿನಿಸ್‌ (ಔಟಾಗದೆ 34; 22ಎ, 3ಬೌಂ, 1ಸಿ) ಅಬ್ಬರದ ಬ್ಯಾಟಿಂಗ್‌ ನಡೆಸಿ ವಿರಾಟ್‌ ಬಳಗದ ಸಂಕಷ್ಟ ಹೆಚ್ಚಿಸಿದರು.

ಅಂತಿಮ ಓವರ್‌ನ ರೋಚಕತೆ: ಕಿಂಗ್ಸ್‌ ಇಲೆವೆನ್‌ ತಂಡದ ಗೆಲುವಿಗೆ ಕೊನೆಯ ಓವರ್‌ನಲ್ಲಿ 17ರನ್‌ ಬೇಕಿತ್ತು. ಮೊದಲ ಎಸೆತದಲ್ಲಿ ಬೆಹಾರ್ಡೀನ್‌ ಒಂದು ರನ್‌ ಗಳಿಸಿದರೆ, ಮಾರ್ಕಸ್‌ ಅವರು ಎರಡು ಮತ್ತು ಮೂರನೇ ಎಸೆತಗಳನ್ನು ಕ್ರಮವಾಗಿ ಬೌಂಡರಿ ಮತ್ತು ಸಿಕ್ಸರ್‌ಗೆ ಅಟ್ಟಿದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. ಹೀಗಾಗಿ ಅಭಿಮಾನಿಗಳ ಎದೆ ಬಡಿತ ಜೋರಾಗಿತ್ತು. ಐದನೇ ಎಸೆತದಲ್ಲಿ ಮಾರ್ಕಸ್‌ ಎರಡು ರನ್‌ ಗಳಿಸಿದರು. ಜೋರ್ಡಾನ್‌ ಎಸೆದ ಅಂತಿಮ ಎಸೆತದಲ್ಲೂ ಅವರು ಎರಡು ರನ್‌ ಮಾತ್ರ ಕಲೆಹಾಕಲು ಶಕ್ತರಾದರು.

ಸ್ಕೋರ್‌ಕಾರ್ಡ್‌
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 6ಕ್ಕೆ 175 (20ಓವರ್‌ಗಳಲ್ಲಿ)

ವಿರಾಟ್‌ ಕೊಹ್ಲಿ ಸಿ ಮುರಳಿ ವಿಜಯ್‌ ಬಿ ಕೆ.ಸಿ. ಕಾರ್ಯಪ್ಪ 20
ಕೆ.ಎಲ್‌. ರಾಹುಲ್‌ ಬಿ ಕೆ.ಸಿ. ಕಾರ್ಯಪ ್ಪ 42
ಎಬಿ ಡಿವಿಲಿಯರ್ಸ್‌ ಸಿ ಕೆ.ಸಿ. ಕಾರ್ಯಪ್ಪ ಬಿ ಸಂದೀಪ್‌ ಶರ್ಮಾ 64
ಶೇನ್‌ ವ್ಯಾಟ್ಸನ್‌ ಬಿ ಅಕ್ಷರ್‌ ಪಟೇಲ್‌ 01
ಸಚಿನ್‌ ಬೇಬಿ ರನ್‌ಔಟ್‌ (ಮಿಲ್ಲರ್‌/ಸಹಾ) 33
ಟ್ರಾವಿಸ್‌ ಹೆಡ್‌ ಸಿ ವಿಜಯ್‌ ಬಿ ಸಂದೀಪ್‌ ಶರ್ಮಾ 11
ಸ್ಟುವರ್ಟ್‌ ಬಿನ್ನಿ ಔಟಾಗದೆ 00
ಇತರೆ: (ವೈಡ್‌ 4) 04
ವಿಕೆಟ್‌ ಪತನ: 1–63 (ರಾಹುಲ್‌; 7.3), 2–64 (ಕೊಹ್ಲಿ; 7.5), 3–67 (ವ್ಯಾಟ್ಸನ್‌; 8.4), 4–155 (ಡಿವಿಲಿಯರ್ಸ್‌; 17.5), 5–174 (ಹೆಡ್‌; 19.5), 6–175 (ಸಚಿನ್‌ ಬೇಬಿ; 19.6).
ಬೌಲಿಂಗ್‌: ಸಂದೀಪ್‌ ಶರ್ಮಾ 4–0–49–2, ಅನುರೀತ್‌ ಸಿಂಗ್‌ 3–0–15–0, ಮೋಹಿತ್‌ ಶರ್ಮಾ 3–0–33–0, ಮಾರ್ಕಸ್‌ ಸ್ಟೊಯಿನಿಸ್‌ 3–0–35–0, ಅಕ್ಷರ್‌ ಪಟೇಲ್‌ 4–0–27–1, ಕೆ.ಸಿ.ಕಾರ್ಯಪ್ಪ 3–0–16–2. ಕಿಂಗ್ಸ್

ಇಲೆವನ್ ಪಂಜಾಬ್ 4 ಕ್ಕೆ 174 (20 ಓವರ್‌ಗಳಲ್ಲಿ)

ಹಾಶಿಮ್‌ ಆಮ್ಲಾ ಸಿ ಸ್ಟುವರ್ಟ್‌ ಬಿನ್ನಿ ಬಿ ಶೇನ್‌ ವ್ಯಾಟ್ಸನ್‌ 21
ಮುರಳಿ ವಿಜಯ್‌ ಸಿ ಯಜುವೇಂದ್ರ ಚಾಹಲ್‌ ಬಿ ಶೇನ್‌ ವ್ಯಾಟ್ಸನ್‌ 89
ವೃದ್ಧಿಮಾನ್‌ ಸಹಾ ರನ್‌ಔಟ್‌ (ಕೆ.ಎಲ್‌.ರಾಹುಲ್‌) 16
ಡೇವಿಡ್‌ ಮಿಲ್ಲರ್‌ ಸ್ಟಂಪ್ಡ್‌ ಕೆ.ಎಲ್‌.ರಾಹುಲ್‌ ಬಿ ಯಜುವೇಂದ್ರ ಚಾಹಲ್‌ 00
ಮಾರ್ಕಸ್‌ ಸ್ಟೊಯಿನಿಸ್‌ ಔಟಾಗದೆ 34
ಫರ್ಹಾನ್‌ ಬೆಹಾರ್ಡೀನ್‌ ಔಟಾಗದೆ 09
ಇತರೆ: (ಬೈ 3, ವೈಡ್‌ 2) 05
ವಿಕೆಟ್‌ ಪತನ: 1–45 (ಆಮ್ಲಾ; 5.3), 2–88 (ಸಹಾ; 10.5), 3–88 (ಮಿಲ್ಲರ್‌; 10.6), 4–139 (ವಿಜಯ್‌; 16.6),
ಬೌಲಿಂಗ್‌: ಸ್ಟುವರ್ಟ್‌ ಬಿನ್ನಿ 2–0–16–0, ಯಜುವೇಂದ್ರ ಚಾಹಲ್‌ 4–0–30–1, ಕ್ರಿಸ್‌ ಜೋರ್ಡಾನ್‌ 4–0–52–0, ಶೇನ್‌ ವ್ಯಾಟ್ಸನ್‌ 4–0–22–2, ವರುಣ್‌ ಆ್ಯರನ್‌ 3–0–25–0, ಇಕ್ಬಾಲ್‌ ಅಬ್ದುಲ್ಲಾ 3–0–26–0.

ಫಲಿತಾಂಶ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಒಂದು ರನ್‌ ಗೆಲುವು.
ಪಂದ್ಯ ಶ್ರೇಷ್ಠ: ಶೇನ್‌ ವ್ಯಾಟ್ಸನ್‌.

Write A Comment