ಕರ್ನಾಟಕ

ಸಮಾಜದಲ್ಲಿ ದಿನೇ ದಿನೇ ಮಾನವೀಯತೆ ಕುಸಿಯುತ್ತಿದೆ : ಸಂತೋಷ್ ಹೆಗಡೆ

Pinterest LinkedIn Tumblr

santoshಬೆಂಗಳೂರು, ಮೇ 8- ಕುಡಿಯುವ ನೀರಿಲ್ಲದೆ ಜನ ತತ್ತರಿಸುತ್ತಿರುವ ಸಂದರ್ಭದಲ್ಲಿ ಬರ ವೀಕ್ಷಣೆಗೆ ಹೋಗುವ ಮುಖ್ಯಮಂತ್ರಿಗಳಿಗೆ ಧೂಳಿನಿಂದ ತೊಂದರೆಯಾಗಬಾರದು ಎಂದು ರಸ್ತೆಯುದ್ದಕ್ಕೂ ನೀರು ಚೆಲ್ಲಿ ನೆನೆಸುವಂತಹ ವಿಪರ್ಯಾಸಗಳು ನಡೆದಿವೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು. ನಗರದ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ದಿನೇ ದಿನೇ ಮಾನವೀಯತೆ ಕುಸಿಯುತ್ತಿದೆ.

ಸಾಯುವವರ ಬಾಯಿಗೆ ಒಂದು ತೊಟ್ಟು ನೀರು ಬಿಡದಷ್ಟು ಕಲ್ಲು ಹೃದಯ ಜನರಿಗೆ ಬಂದಿದೆ. ಇತ್ತೀಚೆಗೆ ನೆಲಮಂಗಲದ ಬಳಿ ಹರೀಶ್ ಎಂಬ ಯುವಕ ಅಪಘಾತಕ್ಕೊಳಗಾಗಿ ಅವಹನ ದೇಹ ಎರಡು ಭಾಗವಾಗಿತ್ತು. ಆತ ನೀರಿಗಾಗಿ ಅಂಗಲಾಚುತ್ತಿದ್ದ. ಆದರೆ, ಬಹಳಷ್ಟು ಜನ ಅವರ ವೀಡಿಯೋ ತೆಗೆಯಲು ಕಾತರರಾಗಿದ್ದು, ಯಾರೂ ನೀರು ಕೊಡಲು ಮುಂದಾಗಲಿಲ್ಲ. ಕೊನೆಗೆ ಆತನನ್ನು ಆಂಬುಲೆನ್ಸ್‌ನಲ್ಲಿ ಸಾಗಿಸುವಾಗ ಸಾಯುವುದು ಖಚಿತ ಎಂದು ಅರ್ಥ ಮಾಡಿಕೊಂಡ ಆತ ತನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಹೇಳಿ ಮಾನವೀಯತೆ ಮೆರೆದಿದ್ದಾನೆ. ಒಂದೆಡೆ ಮಾನವೀಯತೆ ಇಲ್ಲದ ಜನ. ಮತ್ತೊಂದೆಡೆ ಮಾನವೀಯತೆ ಇರುವ ಹರೀಶ್‌ನಂತ ಜನರಿಂದ ಈ ಸಮಾಜ ತುಂಬಿದೆ. ಹರೀಶ್‌ಗೆ ನನ್ನ ಸಲಾಮು ಎಂದು ಹೇಳಿದರು.

ಕುಡಿಯುವ ನೀರಿಲ್ಲದೆ ಜನ ಪರಿತಪಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಬರ ಅಧ್ಯಯನಕ್ಕೆ ಜಿಲ್ಲೆಗಳಿಗೆ ತೆರಳುತ್ತಾರೆ. ರಸ್ತೆಯಲ್ಲಿ ಧೂಳೆದ್ದು ಸಿಎಂಗೆ ಎಲ್ಲಿ ತೊಂದರೆಯಾಗುತ್ತದೆಯೋ ಎಂದು ರಸ್ತೆಯುದ್ದಕೂ ನೀರು ಹಾಕಿ ನೆನೆಸಲಾಗಿದೆ. ಮಹಾರಾಷ್ಟ್ರದಲ್ಲಿ ಸಚಿವನೊಬ್ಬ ಹೆಲಿಕಾಪ್ಟರ್‌ನಲ್ಲಿ ಬಂದು ಇಳಿಯುತ್ತಾರೆ ಎಂಬ ಕಾರಣಕ್ಕಾಗಿ ಹೆಲಿಪ್ಯಾಡ್ ಪೂರ್ತಿ ನೀರು ಹಾಕಿ ಧೂಳನ್ನು ದಮನ ಮಾಡಲಾಗಿದೆ. ಕರ್ನಾಟಕ ಮುಖ್ಯಮಂತ್ರಿಯವರು ಜಿಲ್ಲೆಗಳಿಗೆ ಹೋದಾಗ ಜನರ ಕಷ್ಟಗಳನ್ನು ಕೇಳುವ ಬದಲಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬರುತ್ತಿದ್ದಾರೆ ಎಂದು ಸಂತೋಷ್ ಹೆಗಡೆ ತರಾಟೆಗೆ ತೆಗೆದುಕೊಂಡರು.

ರೆಡ್‌ಕ್ರಾಸ್ ಸಂಸ್ಥೆ ಉತ್ತಮ ಮಾನವೀಯ ಸೇವೆ ಮಾಡುತ್ತಿದೆ. ರಕ್ತ ಸಂಗ್ರಹಣೆ ಮತ್ತು ವಿತರಣೆಯಂತಹ ಅಮೂಲ್ಯ ಸೇವೆಯ ಜತೆಗೆ ನಕ್ಸಲ್‌ಪೀಡಿತ ಪ್ರದೇಶಗಳಿಗೆ ಕನಿಷ್ಠ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಹಿಂದಿನ ದಿನಗಳಲ್ಲಿ ಇರುವ ಆದಾಯದಲ್ಲೇ ತೃಪ್ತಿಕಾಣುವ ಮನೋಭಾವ ಇತ್ತು. ವೈದ್ಯರು ತಮ್ಮ ವೇತನಕ್ಕೆ ತೃಪ್ತಿಪಟ್ಟುಕೊಂಡು ಉತ್ತಮ ಸೇವೆ ಮಾಡುತ್ತಿದ್ದರು. ಈಗ ವೇತನ ಇತರೆ ಭತ್ಯಗಳು ಸಿಕ್ಕರೂ ದುರಾಸೆಗೆ ಮಿತಿಯಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಬಾಲಕಿಯೊಬ್ಬಳ ಕರುಣಾಜನಕ ಕತೆಯನ್ನು ವಿವರಿಸಿದರು. ಸಮಾಜ ಮಾನವೀಯತೆಯನ್ನು ರೂಢಿಸಿಕೊಳ್ಳಬೇಕು, ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಅವರು ಹೇಳಿದರು.

ರೆಡ್‌ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎನ್.ಆರ್.ಶೆಟ್ಟಿ ಮಾತನಾಡಿ, ಕಳೆದ ವರ್ಷ 31ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಈ ವರ್ಷ 41ಸಾವಿರ ಯೂನಿಟ್ ರಕ್ತ ಸಂಗ್ರಹಿಸುವ ಗುರಿಯಿದೆ ಎಂದು ಹೇಳಿದರು. ಆರು ಸಾವಿರ ಕಿವುಡ ಮತ್ತು ಮೂಗ ಮಕ್ಕಳಿಗೆ ಅಮೆರಿಕದಿಂದ ಬಂದ ವೈದ್ಯರ ತಂಡವೊಂದು ಉಚಿತ ಚಿಕಿತ್ಸೆ ನೀಡಿ ನೆರವಾಗಿರುವುದಕ್ಕೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು. ರೆಡ್‌ಕ್ರಾಸ್ ಸಂಸ್ಥೆಯ ಅಶೋಕ್ ಕುಮಾರ್ ಶೆಟ್ಟಿ, ಬಾಸೂರು ರಾಜೀವ್‌ಶೆಟ್ಟಿ, ಸೆಂಥಿಲ್‌ಕುಮಾರ್, ಅಪ್ಪೂರಾವ್ ಅಕೋಣೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Write A Comment