ಕರ್ನಾಟಕ

ಕೋರ್ಟ್‌ ಕಟಕಟೆಯಲ್ಲಿ ಗಳಗಳನೆ ಅತ್ತ ಬಿಎಸ್‌ವೈ

Pinterest LinkedIn Tumblr

former-karnataka-cm-bs-yeddಬೆಂಗಳೂರು: ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಗಣಿ ಗುತ್ತಿಗೆ ಮಂಜೂರು ಮಾಡಿದ್ದಕ್ಕೆ ಪ್ರತಿಯಾಗಿ ಸೌತ್‌ವೆಸ್ಟ್‌ ಮೈನಿಂಗ್‌ ಕಂಪನಿಯಿಂದ ತಮ್ಮ ಪುತ್ರರ ಒಡೆತನದ ಪ್ರೇರಣಾ ಟ್ರಸ್ಟ್‌ಗೆ ಕೋಟ್ಯಂತರ ರೂ. ಕಿಕ್‌ಬ್ಯಾಕ್‌ ಪಡೆದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಕಣ್ಣೀರು ಹಾಕಿದ ಘಟನೆ ಸೋಮವಾರ ನಡೆದಿದೆ.

ಪ್ರಕರಣ ಸಂಬಂಧ ಹೇಳಿಕೆ ನೀಡಲು ಸೋಮವಾರ ಯಡಿಯೂರಪ್ಪ ಅವರು ನಗರದ ಸಿಟಿ ಸಿವಿಲ್‌ ಕೋರ್ಟ್‌ ಸಂಕೀರ್ಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವಿಚಾರಣೆ ವೇಳೆ ಕೋರ್ಟ್‌ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ ಡಿ-ನೋಟಿಫಿಕೇಷನ್‌ ಸಂಬಂಧ 23 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದನ್ನು ಸ್ಮರಿಸಿಕೊಂಡು, “ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಲಾಗಿದೆ. ನಾನೇನು ತಪ್ಪು$ಮಾಡಿಲ್ಲ’ ಎಂದು ಹೇಳುತ್ತಾ ಗದ್ಗದಿತರಾಗಿದರು. ಜತೆಗೆ, ಮುಂದಿನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕಣ್ಣೀರಿಡುತ್ತಾ ಕಟಕಟೆಯಲ್ಲೇ ಕುಳಿತುಬಿಟ್ಟರು ಎಂದು ಮೂಲಗಳು ತಿಳಿಸಿವೆ.

473 ಪ್ರಶ್ನೆಗಳಿಗೆ ಉತ್ತರಿಸಿದ ಬಿಎಸ್‌ವೈ: ಯಡಿಯೂರಪ್ಪ ಅವರು ಬೆಳಗ್ಗೆ 11 ಗಂಟೆಗೆ ಸಿಬಿಐ ಕೋರ್ಟ್‌ಗೆ ಹಾಜರಾಗಿದ್ದರು. 11.30ಕ್ಕೆ ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಕೆ.ನಾಯಕ್‌ ಅವರು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡರು. ಪ್ರಕರಣದ ಕುರಿತು ಯಡಿಯೂರಪ್ಪ ಅವರಿಗೆ ಕೇಳಲು ಮೊದಲೇ 473 ಪ್ರಶ್ನೆಗಳನ್ನು ನ್ಯಾಯಾಧೀಶರು ಸಿದ್ಧಪಡಿಸಿಕೊಂಡಿದ್ದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಸೌತ್‌ ವೆಸ್ಟ್‌ ಮೈನಿಂಗ್‌ ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದಕ್ಕೆ ಪ್ರತಿಯಾಗಿ ತಮ್ಮ ಪುತ್ರರ ಒಡೆತನದ ಪ್ರೇರಣಾ ಟ್ರÓr…ಗೆ ದೇಣಿಗೆ ರೂಪದಲ್ಲಿ 20 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆಯಲಾಗಿದೆ. ಅಲ್ಲದೆ, ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ ಜಾಗವನ್ನು ಅಕ್ರಮವಾಗಿ ಡಿ-ನೋಟಿಫಿಕೇಷನ್‌ ಮಾಡಿದ ನಂತರ ಕಡಿಮೆ ಬೆಲೆಗೆ ಆ ಭೂಮಿಯನ್ನು ತಮ್ಮ ಪುತ್ರರ ಒಡೆತನದ ಕಂಪನಿಗೆ ಖರೀದಿಸಲಾಗಿದೆ. ಬಳಿಕ ಆ ನಿವೇಶನವನ್ನು 20 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಲಾಗಿದೆ ಎಂದು ಸಿಬಿಐ ತನಿಖಾಧಿಕಾರಿಗಳು ಸಲ್ಲಿಸಿದ್ದ ಆರೋಪಪಟ್ಟಿ ಆಧರಿಸಿ ನ್ಯಾಯಾಧೀಶರು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.

ವಿಚಾರಣೆ ವೇಳೆ ನ್ಯಾಯಾಧೀಶರು ಒಂದೊಂದಾಗಿ 473 ಪ್ರಶ್ನೆಗಳನ್ನು ಕೇಳಿದರು. ಬಹುತೇಕ ಪ್ರಶ್ನೆಗಳಿಗೆ “ನನಗೆ ಗೊತ್ತಿಲ್ಲ’ ಎನ್ನುವ ಉತ್ತರ ಯಡಿಯೂರಪ್ಪ ಅವರು ನೀಡಿದರು. ಮತ್ತೂಂದಷ್ಟು ಪ್ರಶ್ನೆಗಳಿಗೆ, “ಇರಬಹುದು’ ಎಂದರೆ, ಕೆಲ ಪ್ರಶ್ನೆಗಳಿಗೆ “ನನಗೆ ಗೊತ್ತಿದ್ದು, ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸಿದ್ದೇನೆ’ ಎಂಬ ಉತ್ತರವನ್ನು ಯಡಿಯೂರಪ್ಪ ನೀಡಿದರು. ಎಲ್ಲಾ 473 ಪ್ರಶ್ನೆಗಳಿಗೂ ಉತ್ತರ ಪಡೆದುಕೊಂಡ ಬಳಿಕ ಪ್ರಶ್ನೋತ್ತರವನ್ನೊಳಗೊಂಡ 125 ಪುಟಗಳ ವಿವರಣಾ ಪ್ರತಿಗಳಿಗೆ ಯಡಿಯೂರಪ್ಪಅವರಿಂದ ಸಹಿ ಪಡೆದುಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.

ಗದ್ಗರಿತರಾಗಿ ಕಟಕಟೆಯಲ್ಲೇ ಕುಳಿತರು: ವಿಚಾರಣೆ ಆರಂಭದಿಂದ ಯಡಿಯೂರಪ್ಪಸಮಾಧಾನದಿಂದ ಉತ್ತರಿಸುತ್ತಿದ್ದರು. ಆದರೆ, ಡಿ-ನೋಟಿಫಿಕೇಷನ್‌ ಕುರಿತ ಖಾಸಗಿ ದೂರು ದಾಖಲಾಗಿ ಆ ಸಂಬಂಧ 23 ದಿನಗಳ ಕಾಲ ಜೈಲು ವಾಸ ಅನುಭವಿಸಿದ ಬಗ್ಗೆ ನ್ಯಾಯಾಲಯವು 470ನೇ ಪ್ರಶ್ನೆ ಕೇಳಿತು. ಈ ಸಂದರ್ಭದಲ್ಲಿ ಜೈಲುವಾಸವನ್ನು ನೆನೆಸಿಕೊಂಡ ಯಡಿಯೂರಪ್ಪ ಗದ್ಗದಿತರಾದರು.

ಮುಖ್ಯಮಂತ್ರಿಯಾಗಿದ್ದಾಗ ನಾನು ನನ್ನ ಅಧಿಕಾರ ವ್ಯಾಪ್ತಿಯಲ್ಲಿಯೇ ಕೆಲಸ ಮಾಡಿದ್ದೇನೆ. ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿಲ್ಲ. ಬದಲಿಗೆ ಲಾಭ ತರುವಂತಹ ಕೆಲಸ ಮಾಡಿದ್ದೇನೆ. ಜನ ಹಿತ ಕಾರ್ಯಗಳನ್ನೇ ಮಾಡಿದ್ದೇನೆ. ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ದೂರು ದಾಖಲು ಮಾಡಲಾಗಿದೆ. ನಾನೇನೂ ತಪ್ಪ ಮಾಡಿಲ್ಲ. ನನ್ನ ವಿರುದ್ಧದ ಡಿನೋಟಿಫಿಕೇಷನ್‌ ಪ್ರಕರಣಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ ಎಂದು ಹೇಳುತ್ತಾ ಕಣ್ಣೀರಿಟ್ಟರು.

ಪ್ರಕರಣ ಸಂಬಂಧ ಬೇರೆ ಯಾವುದಾದರೂ ಹೇಳಿಕೆ ನೀಡುವುದು ಇದೆಯೇ ಎಂದು ನ್ಯಾಯಾಧೀಶರು 473ನೇ ಪ್ರಶ್ನೆ ಕೇಳುತ್ತಿದ್ದಂತೆ ಅದಕ್ಕೆ ಉತ್ತರಿಸಲೂ ಸಾಧ್ಯವಾಗದಷ್ಟು ಅಳು ಒತ್ತರಿಸಿ ಬಂದಿದ್ದರಿಂದ ಕಟಕಟೆಯಲ್ಲೇ ಕುಳಿತುಬಿಟ್ಟರು. ಕರವಸ್ತ್ರ ತೆಗೆದುಕೊಂಡು ಕಣ್ಣೀರಿಸಿಕೊಂಡರು.

ಯಡಿಯೂರಪ್ಪ ಅವರು ಸುಧಾರಿಸಿಕೊಂಡ ಬಳಿಕ ಕೊನೆಯ ಪ್ರಶ್ನೆ ಕೇಳಿ ಉತ್ತರ ಪಡೆದ ನ್ಯಾಯಾಧೀಶರು ಅಂತಿಮವಾಗಿ ನೀವು ಏನಾದರೂ ಹೇಳುವುದಿದೆಯೇ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಯಡಿಯೂರಪ್ಪ, ನಾನು ಕಾನೂನುಬದ್ಧವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಿದ್ದಂತೆ ಮತ್ತೆ ಅಳು ಒತ್ತರಿಸಿ ಬಂದು ಮಾತು ಹೊರಬರಲಿಲ್ಲ. ಯಡಿಯೂರಪ್ಪ ಅವರ ಪರಿಸ್ಥಿತಿ ಅರಿತ ಅವರ ವಕೀಲರು, ಇನ್ನೇನೂ ಹೇಳುವಂತಹದ್ದಿಲ್ಲ ಎಂದು ಹೇಳಿದರು. ಬಳಿಕ ನ್ಯಾಯಾಲಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
-ಉದಯವಾಣಿ

Write A Comment