ಕರ್ನಾಟಕ

ಮೇ 2ರಂದು ಭಯೋತ್ಪಾದನಾ ಚಟುವಟಿಕೆ ಸಿಡಿ ಬಿಡುಗಡೆ : ಮುತಾಲಿಕ್

Pinterest LinkedIn Tumblr

mutalikಬೆಂಗಳೂರು, ಏ.29- ರಾಜ್ಯದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಬಗ್ಗೆ ಮೇ 2ರಂದು ಸಿಡಿ ಬಿಡುಗಡೆ ಮಾಡುವುದಾಗಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಧಾನಿ ಬೆಂಗಳೂರು ಸೇರಿದಂತೆ ಅನೇಕ ಕಡೆ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿವೆ. ಮೇ 2 ರಂದು ಇದರ ಸಮಗ್ರ ಮಾಹಿತಿಯನ್ನೊಳಗೊಂಡ ಸಿಡಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಇಲ್ಲಿ ತನಕ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಭಯೋತ್ಪಾದನೆ ಮತ್ತು ಸಮಾಜ ಘಾತುಕ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಭಯೋತ್ಪಾದಕರು ಈ ಹಿಂದೆ ಅನೇಕ ಕಡೆ ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದರೂ ಸರ್ಕಾರ ಅವರ ಬಗ್ಗೆ ಕ್ರಮ ಕೈಗೊಳ್ಳದೆ ಮೃದು ಧೋರಣೆ ಅನುಸರಿಸಿದೆ. ಇದರ ಪರಿಣಾಮವೇ ಕರ್ನಾಟಕ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ ಎಂದು ಅವರು ಹೇಳಿದರು.

ಭಯೋತ್ಪಾದನಾ ಚಟುವಟಿಕೆಗಳನ್ನು ನಿಗ್ರಹಿಸಲು ಡಾ.ಜಗನ್ನಾಥ ಶೆಟ್ಟಿ ನೀಡಿದ್ದ ವರದಿಯನ್ನು ಸರ್ಕಾರ ದುರುದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದೆ. ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬೆಂಬಲ: ಭಯೋತ್ಪಾದನೆ ಮುಕ್ತ ಭಾರತ, ಭ್ರಷ್ಟಾಚಾರ ರಹಿತ ರಾಷ್ಟ್ರ, ಭೇದ ಭಾವ ರಹಿತ ಸಮಾಜ, ರಾಷ್ಟ್ರೀಯ ಹೆಮ್ಮೆಯ ಸಂಕೇತಗಳ ಸಂರಕ್ಷಣೆ, ನೆಲ- ಜಲ ರಕ್ಷಣೆ, ರೈತ, ಸೈನಿಕ, ಆರಕ್ಷಕರಿಗೆ ವಿಶೇಷ ಗೌರವ, ಕಾನೂನು, ಸಂಹಿಧಾನ ಎತ್ತಿಹಿಡಿಯುವುದು, ಸಂಸ್ಕೃತಿ ಹಿರಿಮೆ- ಗರಿಮೆ ಪರಿಚಯ, ಯುವ ಜನತೆಯಲ್ಲಿ ದೇಶ ಪ್ರೇಮ ಮೂಡಿಸುವುದೂ ಸೇರಿದಂತೆ ಶ್ರೀರಾಮ ಸೇನೆ ಹೊಂದಿರುವ ಅನೇಕ ನಿಲುವುಗಳಿಗೆ ಸಹಮತ ವಿರುವುದರಿಂದ ರಾಷ್ಟ್ರ ಜಾಗೃತಿ ಸಮಿತಿ ಜತೆ ಶ್ರೀರಾಮ ಸೇವೆ ಕೈ ಜೋಡಿಸಿದೆ. ಎರಡೂ ಸಂಘಟನೆಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬಹಿರಂಗ ಸಭೆ: ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರ ಜಾಗೃತ ಸಮಿತಿ ವತಿಯಿಂದ ಮೇ 1ರಂದು ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಸಭೆ ಏರ್ಪಡಿಸಿದೆ ಎಂದು ತಿಳಿಸಿದರು. ಕಾಶ್ಮೀರದಿಂದ ಹೊರಹೋಗಿರುವ ಪಂಡಿತರಿಗೆ ಸುರಕ್ಷಿತ ವಾತಾವರಣದಲ್ಲಿ ಸೂಕ್ತ ಸ್ಥಾನ ಮಾನ ಒದಗಿಸುವುದು, ಸಂವಿಧಾನದ 370ನೇ ವಿಧಿಯನ್ನು ರದ್ಧುಪಡಿಸುವುದು, ಭಯೋತ್ಪಾದನಾ ತರಬೇತಿ ಕೇಂದ್ರಗಳ ನಿರ್ಮೂಲನೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ಭಾರತಕ್ಕೆ ವಾಪಸ್ ಪಡೆಯುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚಿಸಿದ ನಂತರ ಕೇಂದ್ರ ಸರ್ಕಾರಕ್ಕೆ ನಿರ್ಣಯಗಳನ್ನು ಅನುಷ್ಠಾನಕ್ಕಾಗಿ ಕಳೂಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ಕಲಬುರ್ಗಿಯ ಕರಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಇತಿಹಾಸ ತಜ್ಞ ಡಾ.ಎಂಚಿದಾನಂದಮೂರ್ತಿ, ರಂಗಭೂಮಿ ಕಲಾವಿದ ಮಾಸ್ಟರ್ ಹೀರಣ್ಣಯ್ಯ, ಹಿರಿಯ ವಕೀಲ ದೊರೆರಾಜು, ಮಾಜಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ 15ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

Write A Comment