ರಾಷ್ಟ್ರೀಯ

ಆರ್ಥಿಕ ಹಿಂದುಳಿದವರಿಗೆ ಶೇ 10 ಮೀಸಲು: ಗುಜರಾತ್ ಸರ್ಕಾರ

Pinterest LinkedIn Tumblr

guಅಹಮದಾಬಾದ್(ಪಿಟಿಐ): ಪಾಟೀದಾರ್ ಸಮುದಾಯ ಸೇರಿದಂತೆ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡಾ 10ರಷ್ಟು ಮೀಸಲಾತಿ ಕಲ್ಪಿಸಿ ಗುಜರಾತ್ ಬಿಜೆಪಿ ಸರ್ಕಾರ ಶುಕ್ರವಾರ ಘೋಷಿಸಿದೆ. ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದವರಿಗೆ ಈ ಸೌಲಭ್ಯ ಲಭಿಸಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಉಪಸ್ಥಿತಿಯಲ್ಲಿ ನಡೆದ ಪಕ್ಷದ ರಾಜ್ಯ ಘಟಕದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಚೆಗೆ ನಡೆದ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರು ತೋರಿರುವ ಪ್ರತಿಕ್ರಿಯೆ ಹಾಗೂ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿರಿಸಿ ಸರ್ಕಾರ ಮೀಸಲಾತಿ ಪ್ರಕಟಿಸಿದೆ ಎನ್ನಲಾಗಿದೆ.

ಸಾಮಾನ್ಯ ವರ್ಗದ ಆರ್ಥಿಕ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರು ಪ್ರಕಟಿಸಿದರು.

ಗುಜರಾತ್ ರಾಜ್ಯ ಅಸ್ತಿತ್ವಕ್ಕೆ ಬಂದ ಮೇ 1ರಂದು ಅಧಿಸೂಚನೆ ಹೊರಡಿಸಲಾಗುವುದು. ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಪಟೇಲ್ ಸಮುದಾಯ ಹಾರ್ದಿಕ್ ಪಟೇಲ್ ಹಾಗೂ ಲಾಲ್‌ಜಿ ಪಟೇಲ್ ಅವರ ನೇತೃತ್ವದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು, ಹಿಂಸಾ ರೂಪವನ್ನೂ ಪಡೆದುಕೊಂಡಿತ್ತು. ಪಟೇಲ್ ಸಮುದಾಯದ ಬೇಡಿಕೆಯನ್ನು ನಿರ್ಲಕ್ಷಿಸಿದ್ದ ಬಿಜೆಪಿ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಭಾರೀ ನಷ್ಟ ಅನುಭವಿಸಿತ್ತು.

ತಿರಸ್ಕಾರ: ಪಟೇಲ್ ಸಮುದಾಯಕ್ಕೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಬೇಕು ಎಂದು ಪ್ರತಿಭಟನೆ ನಡೆಸಿದ್ದ ಹಾರ್ದಿಕ್ ಪಟೇಲ್ ನೇತೃತ್ವದ ಪಿಎಎಎಸ್, ಸರ್ಕಾರ ಘೋಷಿಸಿರುವ ಶೇ 10ರಷ್ಟು ಮೀಸಲಾತಿಯನ್ನು ತಿರಸ್ಕರಿಸಿದೆ. ಸರ್ಕಾರ ಪಟೇಲ್ ಸಮುದಾಯದ ದಿಕ್ಕು ತಪ್ಪಿಸುತ್ತಿದೆ ಎಂದು ಆಪಾದಿಸಿದ್ದಾರೆ.

Write A Comment