ಕರ್ನಾಟಕ

ಲೇಡಿ ಟೈಗರ್ ಖ್ಯಾತಿಯ ಸಿಐಡಿ ಡಿಐಜಿ ಸೋನಿಯಾ ನಾರಂಗ್ NIA ಸೇವೆಗೆ ಸಜ್ಜು

Pinterest LinkedIn Tumblr

sonia narang

ಬೆಂಗಳೂರು: ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿ ಅನೇಕ ಹಗರಣಗಳನ್ನು ಹೊರ ತಂದು ಲೇಡಿ ಟೈಗರ್ ಎಂದೇ ಇಲಾಖೆಯಲ್ಲಿ ಖ್ಯಾತಿ ಗಳಿಸಿದ್ದ ಸಿಐಡಿ ಡಿಐಜಿ ಸೋನಿಯಾ ನಾರಂಗ್ ಇದೀಗ ಕೇಂದ್ರ ಸೇವೆಗೆ ತೆರಳಲು ಸಜ್ಜಾಗಿದ್ದಾರೆ. ಸೋನಿಯಾ ನಾರಂಗ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವರ್ಗಾಯಿಸಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಸೋನಿಯಾ ನಾರಂಗ್ ಅವರನ್ನು ಕೇಂದ್ರ ಸೇವೆಗೆ ಕಳುಹಿಸಲು ಸಿದ್ಧ ಎಂದು ಸರ್ಕಾರ ಅಶ್ವಾಸನೆ ಕೊಟ್ಟಿದೆ. ಇದರಿಂದ ರಾಜ್ಯಕ್ಕೆ ಓರ್ವ ದಕ್ಷ ಐಪಿಎಸ್ ಅಧಿಕಾರಿಯ ಕೊರತೆ ಎದುರಾಗಲಿದೆ.

ಇದೀಗ ಸೋನಿಯಾ ಎನ್‌ಐಎಗೆ ತೆರಳಿದರೆ ಕನಿಷ್ಠ ಪಕ್ಷ ನಾಲ್ಕು ವರ್ಷ ಅವರು ಅಲ್ಲಿಯೇ ಸೇವೆ ಸಲ್ಲಿಸಬೇಕು. ತದನಂತರ ರಾಜ್ಯಕ್ಕೆ ಮರಳಲಿದ್ದಾರೆ. ಕಾರಣವೇನು? ಎನ್‌ಐಎ ಕೇಂದ್ರದ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಬಾಂಬ್ ಸ್ಫೋಟ, ಭಯೋತ್ಪಾದನೆ ಸೇರಿದಂತೆ ಪ್ರಮುಖ ಘಟನೆಗಳ ಬಗ್ಗೆ ತನಿಖೆ ನಡೆಸುತ್ತದೆ. ಈ ಸಂಸ್ಥೆಗೆ ಸಾಮಾನ್ಯವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುವ ದಕ್ಷ ಪ್ರಾಮಾಣಿಕ ಅಧಿಕಾರಿಗಳನ್ನು ಮಾತ್ರ ಸೇವೆಗೆ ಬಳಸಿಕೊಳ್ಳಲಾಗುತ್ತದೆ.

ಸಿಬಿಐ ಮಾದರಿಯಲ್ಲಿ ಎನ್‌ಐಎ ಕಾರ್ಯನಿರ್ವಹಿಸಲಿದ್ದು, ಈಗಾಗಲೇ ದೇಶದ ಅನೇಕ ಪ್ರಮುಖ ಘಟನೆಗಳನ್ನು ತನಿಖೆ ನಡೆಸಿ ಅನೇಕ ಸಮಾಜಘಾತುಕ ಶಕ್ತಿಗಳಿಗೆ ಶಿಕ್ಷೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಮಾಲೇಗಾಂವ್, ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ, ಮುಂಬೈನಲ್ಲಿ ನಡೆದ ಉಗ್ರರ ದಾಳಿ, ಪುಣೆಯ ಜರ್ಮನ್ ಬೇಕರಿ ಸೇರಿದಂತೆ ತೀರಾ ಇತ್ತೀಚೆಗೆ ಕರ್ನಾಟಕದಲ್ಲಿ ಐಸಿಸ್ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕೆಲ ಶಂಕಿತರನ್ನು ಎನ್‌ಐಎ ಬಂಧಿಸಿತ್ತು. ದೆಹಲಿಯಲ್ಲಿ ಇದರ ಕೇಂದ್ರ ಕಚೇರಿ ಇದ್ದು, ಐಪಿಎಸ್ ದರ್ಜೆಯ ಡಿಜಿಪಿ, ಎಡಿಜಿಪಿ, ಡಿಐಜಿ, ಎಸ್‌ಪಿ ಸೇರಿದಂತೆ ಐಪಿಎಸ್ ಹಂತದ ಅಧಿಕಾರಿಗಳು ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಉಳಿದಂತೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್ ಹಂತದ ಪ್ರಾಮಾಣಿಕ ಅಧಿಕಾರಿಗಳನ್ನು ಎನ್‌ಐಎ ಬಳಸಿಕೊಳ್ಳುತ್ತದೆ.

ನಾರಂಗ್ ಏಕೆ? ಸೋನಿಯಾ ನಾರಂಗ್ ಎನ್‌ಐಎಗೆ ಬಳಸಿಕೊಳ್ಳುತ್ತಿರುವ ಕೇಂದ್ರ ಅವರ ಸೇವೆ ಮತ್ತು ಪ್ರಾಮಾಣಿಕತೆ ಗುರುತಿಸಿದೆ. ರಾಜ್ಯಕ್ಕೆ ಐಪಿಎಸ್ ಅಧಿಕಾರಿಯಾಗಿ ಬಂದ ನಂತರ ಅವರು ಎಲ್ಲೇ ಸೇವೆ ಸಲ್ಲಿಸಿದರೂ ಭ್ರಷ್ಟಚಾರ ಆರೋಪ ಅಥವಾ ಕಪ್ಪು ಚುಕ್ಕೆ ಇಲ್ಲ. ಬೆಳಗಾವಿಯಲ್ಲಿ ಎಸ್‌ಪಿಯಾಗಿದ್ದ ವೇಳೆ ರಸ್ತೆ ಅಗಲೀಕರಣಕ್ಕಾಗಿ ಬಲಾಢ್ಯರ ನಿವೇಶನಗಳನ್ನು ತೆರವುಗೊಳಿಸಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಮಟ್ಕಾ ದಂಧೆಯನ್ನು ಮಟ್ಟಹಾಕಿದ್ದು, ತೀರಾ ಇತ್ತೀಚೆಗೆ ದೇಶದ ಗಮನ ಸೆಳೆದ ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣ ಬಯಲಿಗೆಳೆದಿದ್ದು ಇದೇ ಸೋನಿಯಾ ನಾರಂಗ್.

ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಸಂಸ್ಥೆಯಲ್ಲಿ ಕೆಲ ಭ್ರಷ್ಟ ಅಧಿಕಾರಿಗಳು ತಮ್ಮ ಹೆಸರು ಬಳಸಿಕೊಂಡು ಕೆಲ ಭ್ರಷ್ಟರಿಂದ ಹಣ ವಸೂಲಿ ಮಾಡುತ್ತಿದ್ದಾರೆಂದು ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್‌ರಾವ್‌ಗೆ ಪತ್ರ ಬರೆದಿದ್ದರು. ಈ ಪತ್ರ ಸ್ಫೋಟಗೊಂಡ ನಂತರವೇ ಲೋಕಾಯುಕ್ತ ಸಂಸ್ಥೆಯ ಹುಳುಕು ಬಟಾಬಯಲಾಗಿತ್ತು. ಇತ್ತೀಚೆಗಷ್ಟೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ರಸಾಯನಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಇದರ ಪರಿಣಾಮ ಅನೇಕ ಮಿಕಗಳು ಇಂದು ಶ್ರೀಕೃಷ್ಣ ಜನ್ಮಸ್ಥಳದ ದರ್ಶನ ಪಡೆಯುವಂತಾಗಿದೆ. ಇಂಥ ದಿಟ್ಟ ಅಧಿಕಾರಿ ಇದೀಗ ಕೇಂದ್ರ ಸೇವೆಗೆ ಹೊರಟಿರುವುದರಿಂದ ರಾಜ್ಯ ಒಬ್ಬ ಪ್ರಾಮಾಣಿಕ ಅಧಿಕಾರಿಯ ಸೇವೆಯಿಂದ ವಂಚಿತವಾಗಿದೆ.

Write A Comment