ಕರ್ನಾಟಕ

ಬತ್ತಿದ ಜಲಮೂಲಕ್ಕೆ ಬದಲಿ ವ್ಯವಸ್ಥೆಯೇ ಇಲ್ಲ!

Pinterest LinkedIn Tumblr

pvec290416h-bg-mvs2ಬೆಳಗಾವಿ: ಕೊಳವೆ ಬಾವಿಯಲ್ಲಿನ ಫ್ಲೋರೈಡ್‌ಯುಕ್ತ ನೀರಿನಿಂದ ಗ್ರಾಮೀಣ ಪ್ರದೇಶಗಳ ಜನರಿಗೆ ಮುಕ್ತಿ ದೊರಕಿಸಿ, ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಸರ್ಕಾರ ಕೆಲವು ವರ್ಷಗಳ ಹಿಂದೆಯೇ ಆರಂಭಿಸಿರುವ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ ಅಡಿ ಜಿಲ್ಲೆಯಲ್ಲಿ ₹ 272 ಕೋಟಿ ಖರ್ಚು ಮಾಡಲಾಗಿದೆ.

ಆದರೆ, ಬೇಸಿಗೆಯಲ್ಲಿ ನೀರಿನ ಮೂಲ ಬತ್ತಿದಾಗ ಈ ಯೋಜನೆ ನಿರುಪಯುಕ್ತವಾಗುತ್ತದೆ. ರಾಜ್ಯದಲ್ಲೇ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆಯ ಬೆಳಗಾವಿ ಜಿಲ್ಲೆಯ ನೂರಾರು ಗ್ರಾಮಗಳಿಗೆ ಪೂರೈಸಲು ಇಲ್ಲಿ ಹರಿದಿರುವ ಏಳು ನದಿಗಳ ನೀರನ್ನೇ ಆಧಾರವಾಗಿಸಿಕೊಂಡು ಒಟ್ಟು 64 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಪೈಕಿ 27 ಯೋಜನೆಗಳು ಏಳೆಂಟು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದು, ಮೂರು ವರ್ಷಗಳ ಹಿಂದೆ 29 ಕಡೆ ಕೈಗೆತ್ತಿಕೊಂಡ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ ಎಂಟು ಯೋಜನೆಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಭೂ ಸ್ವಾಧೀನ ಮತ್ತು ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದೆ.

ಯೋಜನೆ ಅಡಿ ಕೆಲವೆಡೆ ಮೂರು ವರ್ಷಗಳ ಹಿಂದೆಯೇ ಮುಗಿಯಬೇಕಿದ್ದ ಕಾಮಗಾರಿ ಕುಂಟುತ್ತ ಸಾಗಿದ್ದು, ಕೆಲವೆಡೆ ಕಾಮಗಾರಿ ಪೂರ್ಣಗೊಂಡರೂ ಗ್ರಾಮಗಳಿಗೆ ನೀರು ದೊರೆಯುತ್ತಿಲ್ಲ. ಇದಕ್ಕೆ ಅನುದಾನದ ಕೊರತೆ ಕಾರಣ.

ಇದ್ದೂ ಇಲ್ಲದ ಯೋಜನೆ: ಚಿಕ್ಕೋಡಿ, ಅಥಣಿ, ರಾಯಬಾಗ, ಸವದತ್ತಿ, ಬೈಲಹೊಂಗಲ, ಗೋಕಾಕ ಮತ್ತು ಬೆಳಗಾವಿ ತಾಲ್ಲೂಕುಗಳಲ್ಲಿ ಈಗಾಗಲೇ ಪೂರ್ಣಗೊಂಡಿರುವ ಯೋಜನೆ ಅಡಿ ಅನೇಕ ಗ್ರಾಮಗಳಿಗೆ ನೀರನ್ನು ಪೂರೈಸಲಾಗುತ್ತಿದೆಯಾದರೂ ಬರಗಾಲದ ಕಾರಣ ನದಿಗಳೆಲ್ಲ ಬತ್ತಿರುವುದರಿಂದ ಈಗ ಆ ಎಲ್ಲ ಯೋಜನೆಗಳು ಇದ್ದೂ ಇಲ್ಲದಂತಾಗಿವೆ.

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ದೂದಗಂಗಾ ಮತ್ತು ವೇದಗಂಗಾ ನದಿಗಳಿಗೆ ನಿರ್ಮಿಸಿರುವ ಬ್ಯಾರೇಜುಗಳಲ್ಲಿ ಸಂಗ್ರಹವಾಗುವ ನೀರನ್ನೇ ಜಾಕ್‌ವೆಲ್‌ ಮೂಲಕ ಎತ್ತಿ, ಆಯಾ ಗ್ರಾಮಗಳ ಬಳಿ ನಿರ್ಮಿಸಿರುವ ಘಟಕಗಳಲ್ಲಿ ಶುದ್ಧೀಕರಿಸಿ, ಮೇಲ್ಮಟ್ಟದ ಜಲ ಸಂಗ್ರಹಾಗಾರಗಳ ಮೂಲಕ ಪ್ರತಿ ಊರಿಗೆ ಸರಬರಾಜು ಮಾಡಲಾಗುತ್ತದೆ.

ಸಾಮಾನ್ಯವಾಗಿ ಮಾರ್ಚ್‌ ವರೆಗೂ ನದಿಗಳಲ್ಲಿ ದೊರೆಯುವ ನೀರನ್ನು ಪಡೆದು ಗ್ರಾಮಸ್ಥರಿಗೆ ಪೂರೈಸಲಾಗುತ್ತದೆ. ಆದರೆ, ಈ ಬಾರಿ ತೀವ್ರ ಬರಗಾಲದ ಸ್ಥಿತಿ ಇರುವುದರಿಂದ ನದಿಗಳೆಲ್ಲ ಜನವರಿ ಆರಂಭಕ್ಕೇ ಒಣಗಿ ಆಟದ ಮೈದಾನಗಳಂತಾಗಿದ್ದು, ಈ ಯೋಜನೆಗಳನ್ನೇ ಆಶ್ರಯಿಸಿರುವ ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ.

ಕೆಲವು ಗ್ರಾಮಗಳಿಗೆ 25ರಿಂದ 30 ಕಿ.ಮೀ. ದೂರದಲ್ಲಿರುವ ನದಿಗಳಿಂದ ಪೈಪ್‌ಲೈನ್‌ ಅಳವಡಿಸಿ ನೀರು ಪೂರೈಸಲಾಗುತ್ತಿದೆ. ಅದಕ್ಕೆಲ್ಲ ಸಾಕಷ್ಟು ಹಣ ವ್ಯಯಿಸಲಾಗಿದೆ. ನೀರೇ ಇಲ್ಲವೆಂದ ಮೇಲೆ ಪೂರೈಸುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.

ಅನುದಾನದ ಕೊರತೆ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ, ಕಾಮಗಾರಿ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ವಹಿಸಲಾಗಿದೆ. ಆದರೆ ಸರ್ಕಾರ ಈ ಯೋಜನೆಗಳಿಗೆಂದೇ ಆದ್ಯತೆಯ ಮೇರೆಗೆ ಪ್ರತ್ಯೇಕವಾದ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ. ಈ ವಿಭಾಗಕ್ಕೆ ವಾರ್ಷಿಕವಾಗಿ ಮಂಜೂರು ಮಾಡುವ ಅನುದಾನದಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಅನುದಾನವನ್ನು ವ್ಯಯಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ವರ್ಷ ಕೈಗೆತ್ತಿಕೊಂಡಿರುವ ಒಟ್ಟು 29 ಯೋಜನೆಗಳಿಗೆ ಅಂದಾಜು ₹ 377 ಕೋಟಿ ಅನುದಾನದ ಅಗತ್ಯವಿದೆ ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತಾದರೂ, ಇಡೀ ಇಲಾಖೆಗೆ ನೀಡಲಾಗಿರುವ ವಾರ್ಷಿಕ ₹ 153 ಕೋಟಿ ಅನುದಾನದೊಳಗೇ ಈ ಯೋಜನೆಗಳ ಕಾಮಗಾರಿಯನ್ನು ಕಾಟಾಚಾರಕ್ಕೆ, ನೆಪ ಮಾತ್ರಕ್ಕೆ ಎಂಬಂತೆ ಆರಂಭಿಸಲಾಗಿದೆ.

ಯೋಜನೆ ಕಾಮಗಾರಿ ಪೂರ್ಣಗೊಂಡು, ನೀರು ಪೂರೈಕೆ ಕಾರ್ಯ ಆರಂಭವಾದ ನಂತರ ನಿರ್ವಹಣೆ ಜವಾಬ್ದಾರಿಯನ್ನು ಟೆಂಡರ್‌ ಕರೆದು ಗುತ್ತಿಗೆ ನೀಡಲಾಗುತ್ತಿದ್ದು, ಅದಕ್ಕಾಗಿ ಬೇಕಾಗುವ ಅನುದಾನದಲ್ಲೇ ಪ್ರತೀ ವರ್ಷ ₹ 35ರಿಂದ ₹ 40 ಕೋಟಿ ಬಾಕಿ ಇರಿಸಿಕೊಳ್ಳಲಾಗುತ್ತಿದೆ.

ಮುಂದಿನ ವರ್ಷಕ್ಕೆ ಬಿಡುಗಡೆಯಾಗುವ ಅನುದಾನದಲ್ಲಿ ಮೊದಲು ಗುತ್ತಿಗೆದಾರರ ಬಾಕಿ ತೀರಿಸಬೇಕಾಗುತ್ತದೆ. ನಂತರ ಉಳಿದ ಅನುದಾನದಲ್ಲಿ ಹೊಸ ಯೋಜನೆಗಳಿಗೂ, ವಾರ್ಷಿಕ 3,000ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಇತರ ಗ್ರಾಮಗಳಲ್ಲಿನ ಸಣ್ಣ, ಸಣ್ಣ ಯೋಜನೆಗಳಿಗೂ ಹಣವನ್ನು ಹೊಂದಿಸಬೇಕಾಗುತ್ತಿದೆ. ಇವುಗಳಿಗೇ ಅಂದಾಜು ₹ 99 ಕೋಟಿ ಬೇಕಾಗುತ್ತದೆ ಎಂದು ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ವಿ.ಜೆ. ರಾಯ್ಕರ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಅನುದಾನದ ಕೊರತೆಯಿಂದಾಗಿ ಕೆಲವೆಡೆ ಕಾಮಗಾರಿ ಕುಂಟುತ್ತ ಸಾಗಿದೆ. ಇನ್ನು ಕೆಲವೆಡೆ ಕಾಮಗಾರಿ ಪೂರ್ಣಗೊಂಡರೂ ನೀರಿನ ಕೊರತೆಯಿಂದಾಗಿ ಯೋಜನೆ ನಿಷ್ಪ್ರಯೋಜಕವಾಗಿದೆ. ಏಳೆಂಟು ವರ್ಷಗಳ ಹಿಂದೆಯೇ ಯೋಜನೆ ಅಡಿ ನೀರು ಪೂರೈಸುತ್ತಿರುವ ಕಡೆಯೆಲ್ಲ ಬೇಸಿಗೆ ಬಂದರೆ ಈ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ ಎಂದು ಅವರು ಹೇಳಿದರು.

ವಿದ್ಯುತ್‌ ಸಮಸ್ಯೆ: ಬೆಳಗಾವಿ ತಾಲ್ಲೂಕಿನ ಬಡಸ, ಬಡಾಲ ಅಂಕಲಗಿ, ಗಜಪತಿ, ಹುಲಿಕವಿ, ಹಾಲಗಾ– ಮರಡಿ, ನಾಗೇನಹಟ್ಟಿ, ನಾಗೇರಹಾಳ, ಕೆ.ಕೆ. ಕೊಪ್ಪ ಗ್ರಾಮಗಳಿಗೆ ಕಾಮಸಿನಕೊಪ್ಪ ಗ್ರಾಮದ ಬಳಿ ಮಲಪ್ರಭಾ ನದಿಗೆ ನಿರ್ಮಿಸಿರುವ ಬ್ಯಾರೇಜ್‌ನಿಂದ ನೀರು ಪೂರೈಸಲು ಈಗಾಗಲೇ ₹ 7.50 ಕೋಟಿ ವೆಚ್ಚದಲ್ಲಿ ಜಾಕ್‌ವೆಲ್‌, ಜಲ ಶುದ್ಧೀಕರಣ ಘಟಕ, ಮೇಲ್ಮಟ್ಟದ ಜಲ ಸಂಗ್ರಹಾಗಾರಗಳ ನಿರ್ಮಾಣ, ಪೈಪ್‌ಲೈನ್‌ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗಿದೆ.

ಆದರೆ, ಈ ಘಟಕದಿಂದ ನೀರೆತ್ತಿ ಪೂರೈಸಲು ವಿದ್ಯುತ್‌ ಸಂಪರ್ಕ ನೀಡದ್ದರಿಂದ ಒಂದು ವರ್ಷ ಕಳೆದರೂ ಜನತೆಗೆ ನೀರು ಪೂರೈಸಲಾಗುತ್ತಿಲ್ಲ. ಬಡಸದಿಂದ 20 ಕಿ.ಮೀ. ದೂರದಲ್ಲಿರುವ ಹಿರೇಬಾಗೇವಾಡಿ ಗ್ರಾಮದ ಬಳಿ ಇರುವ ವಿದ್ಯುತ್‌ ಫೀಡರ್‌ನಿಂದ ಪ್ರತ್ಯೇಕ ಲೈನ್‌ ಎಳೆದು ವಿದ್ಯುತ್‌ ಪಡೆಯುವಂತೆ ಹೆಸ್ಕಾಂ ಸೂಚಿಸಿದೆ.

ಆದರೆ, ಅಲ್ಲಿಂದ ಪ್ರತ್ಯೇಕ ಲೈನ್‌ ಎಳೆಯಲು ₹1.85 ಕೋಟಿ ಅಗತ್ಯವಿದೆ. ಲಭ್ಯ ಅನುದಾನ ಕೇವಲ ₹ 32 ಲಕ್ಷ ಇರುವುದರಿಂದ ಸಮಸ್ಯೆಯಾಗಿದೆ. ಅದಕ್ಕೆಂದೇ ನಿರಂತರ ಜ್ಯೋತಿ ಯೋಜನೆ ಅಡಿ ಈ ಘಟಕಕ್ಕೆ ವಿದ್ಯುತ್‌ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಡಸ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇಹಾ ಘಸಾರಿ ತಿಳಿಸಿದರು.

ಕೆರೆ ನಿರ್ಮಿಸಿ ನೀರು ಸಂಗ್ರಹಿಸಿದರೆ ಅನುಕೂಲ: ಅಧಿಕಾರಿ ಸಲಹೆ
ಬೆಳಗಾವಿ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಬಹುತೇಕ ಕಡೆ ನದಿಗಳನ್ನೇ ನೆಚ್ಚಿಕೊಳ್ಳಲಾಗಿದ್ದು, ಬೇಸಿಗೆ ವೇಳೆಯಲ್ಲಿ ಅಥವಾ ಬರಗಾಲದಂತಹ ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಗ್ರಾಮಗಳ ಬಳಿ 15ರಿಂದ 20 ಎಕರೆ ವ್ಯಾಪ್ತಿಯಲ್ಲಿ ಕೆರೆ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ.

ಪ್ರತಿ ಯೋಜನೆ ಅಡಿ ಅಂದಾಜು 8ರಿಂದ 15 ಗ್ರಾಮಗಳಿಗೆ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ಗರಿಷ್ಠ ₹ 12 ಕೋಟಿ ಅನುದಾನದ ಅಗತ್ಯವಿದೆ. ಇಷ್ಟೆಲ್ಲ ಹಣ ಖರ್ಚು ಮಾಡಿ ಯೋಜನೆ ಆರಂಭಿಸಿದರೂ, ಬೇಸಿಗೆಯಲ್ಲಿ ನದಿಗಳು ಬತ್ತಿ ನೀರೇ ದೊರೆಯದಿದ್ದರೆ ಪ್ರಯೋಜನವಾಗುವುದಿಲ್ಲ.

ಅದರ ಬದಲಿಗೆ, ಮಳೆಗಾಲದಲ್ಲಿ ತುಂಬಿ ಹರಿಯುವ ನದಿಯಿಂದ ಅದೇ ಜಾಕ್‌ವೆಲ್‌ಗಳ ಸಹಾಯದಿಂದಲೇ ಕೆರೆಗಳಿಗೆ ನೀರು ತುಂಬಿಸಿ, ಅದೇ ನೀರನ್ನು ಬೇಸಿಗೆಯ 3–4 ತಿಂಗಳ ಅವಧಿಗೆ ಪೂರೈಸಬಹುದಾಗಿದೆ. ಇದರಿಂದ ಆ ಗ್ರಾಮದ ಸುತ್ತಲಿನ ಅಂತರ್ಜಲ ಮಟ್ಟವೂ ಸುಧಾರಿಸುವ ಮೂಲಕ ಬೇಸಿಗೆಯಲ್ಲಿ ಕುಡಿಯಲು ನೀರೂ ದೊರೆಯಲಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಲಾಖೆ ಅಧಿಕಾರಿ ಸಲಹೆ ನೀಡಿದರು.

Write A Comment