ಕರ್ನಾಟಕ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ..?

Pinterest LinkedIn Tumblr

kuಬೆಂಗಳೂರು ,ಏ.27- ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿಗೆ ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ರಾಜ್ಯದ ಒಟ್ಟು 30 ಜಿಲ್ಲಾ ಪಂಚಾಯ್ತಿಗಳ ಪೈಕಿ ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ ಆಡಳಿತಾರೂಢ ಕಾಂಗ್ರೆಸ್-11, ಬಿಜೆಪಿ-7 ಹಾಗೂ ಜೆಡಿಎಸ್-2 ಜಿಲ್ಲಾ ಪಂಚಾಯ್ತಿಗಳಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡಿದಿತ್ತು.

ಇದರಲ್ಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಬಹುಮತ ಪಡೆದಿದ್ದರೂ ಸರ್ಕಾರದ ಕೈಚಳಕದಿಂದ ಮೀಸಲಾತಿ ಬದಲಾಗಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇದರ ಪರಿಣಾಮ ಆಡಳಿತಾರೂಢ ಕಾಂಗ್ರೆಸ್‌ಗೆ ಪಾಠ ಕಲಿಸುವ ತೀರ್ಮಾನ ಕೈಗೊಂಡಿರುವ ಬಿಜೆಪಿ-ಜೆಡಿಎಸ್ ನಾಯಕರು ತಮ್ಮ ಹಳೆಯ ವೈಮನಸ್ಸುಗಳನ್ನು ಮರೆತು ಪರಸ್ಪರ ಕೈ ಜೋಡಿಸಲು ಮುಂದಾಗಿದ್ದಾರೆ. ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಲ್ಲಿ ಎರಡೂ ಪಕ್ಷಗಳು ಪರಸ್ಪರ ಕೈ ಜೋಡಿಸಿ ಅಧಿಕಾರ ಹಿಡಿಯಲು ಸಜ್ಜಾಗಿವೆ.

ಈಗಾಗಲೇ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ನೇತೃತ್ವದಲ್ಲಿ ಜೆಡಿಎಸ್ ನಾಯಕರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ. ಬಹುತೇಕ ಸಂಧಾನ ಬಹುತೇಕ ಯಶಸ್ವಿಯಾಗಿದ್ದು , ಮೂರ್ನಾಾಲ್ಕು ದಿನದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಎಸ್‌ವೈ-ಹೆಚ್‌ಡಿಕೆ ಮಾತುಕತೆ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಲೇಬೇಕೆಂದು ಪಣ ತೊಟ್ಟಿರುವ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪ ಈ ವಾರದ ಅಂತ್ಯದವರೆಗೂ ಬರಪೀಡಿತ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದು, ಸೋಮವಾರ ನಗರಕ್ಕೆ ಹಿಂದಿರುಗುವ ಸಾಧ್ಯತೆಗಳಿವೆ. ನಂತರ ಉಭಯ ನಾಯಕರೂ ಮಾತುಕತೆ ನಡೆಸಿ ಮೈತ್ರಿಗೆ ಅಂತಿಮ ಮುದ್ರೆ ಒತ್ತಲಿದ್ದಾರೆ.

ಟಾರ್ಗೆಟ್ ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ತವರು ಜಿಲ್ಲೆಯಲ್ಲೇ ಮುಖಭಂಗ ಉಂಟು ಮಾಡಬೇಕೆಂದು ತೀರ್ಮಾನಿಸಿರುವ ಬಿಜೆಪಿ-ಜೆಡಿಎಸ್ ನಾಯಕರು ಸಾಂಸ್ಕೃತಿಕ ನಗರಿಯಲ್ಲಿ ದೋಸ್ತಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಜಿಲ್ಲೆಯ ಒಟ್ಟು 49 ಜಿಪಂಗಳಲ್ಲಿ ಕಾಂಗ್ರೆಸ್ 22, ಜೆಡಿಎಸ್ 18, ಬಿಜೆಪಿ 08, ಪಕ್ಷೇತರ 01 ಸ್ಥಾನ ಪಡೆದಿವೆ. ಅತಂತ್ರವಾಗಿರುವ ಜಿಪಂನಲ್ಲಿ ಎರಡು ಪಕ್ಷಗಳು ದೋಸ್ತಿ ಮಾಡಿಕೊಳ್ಳಲಿವೆ. ಮಾತುಕತೆಯಂತೆ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿಯಲಿದೆ.

ಇನ್ನು ಇದೇ ರೀತಿ ಅತಂತ್ರವಾಗಿರುವ ತುಮಕೂರು, ಶಿವಮೊಗ್ಗ, ಬೆಂಗಳೂರುನಗರ, ರಾಯಚೂರು, ಧಾರವಾಡ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ. ಹೆಚ್ಚು ಸ್ಥಾನ ಪಡೆದಿರುವ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ನೀಡಿದರೆ 2ನೇ ಸ್ಥಾನದಲ್ಲಿರುವ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ಧಕ್ಕಲಿದೆ. ಇದೇ ರೀತಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ತಾಲ್ಲೂಕು ಪಂಚಾಯತ್‌ನಲ್ಲೂ ದೋಸ್ತಿ ರಚನೆಯಾಗಲಿದೆ. ಒಟ್ಟಿನಲ್ಲಿ ಕಾಂಗ್ರೆಸ್‌ಗೆ ಮರ್ಮಾಘಾತ ನೀಡಲು ಮುಂದಾಗಿರುವ ಉಭಯ ಪಕ್ಷಗಳು ದೋಸ್ತಿಗೆ ವೇದಿಕೆ ಸಿದ್ಧಪಡಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.

Write A Comment