ಕರ್ನಾಟಕ

ಸಿಎಂ ತಮ್ಮ ಮೇಲಿನ ದೂರುಗಳನ್ನು ಮುಚ್ಚುವ ಉದ್ದೇಶದಿಂದಲೇ ಎಸಿಬಿ ರಚಿಸಿದ್ದಾರೆ : ಬಿಎಸ್ವೈ ಆರೋಪ

Pinterest LinkedIn Tumblr

yaddiಬೀದರ್,ಏ.27-ತಮ್ಮ ಮೇಲೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ವಿರೋಧದ ನಡುವೆಯೂ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಬರಪೀಡಿತ ಬೀದರ್ ಜಿಲ್ಲೆಯಲ್ಲಿ ರೈತರ ಸ್ಥಿತಿಗತಿ ಅರಿಯಲು ಇಂದಿನಿಂದ ಪ್ರವಾಸ ಆರಂಭಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಈಗಾಗಲೇ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾದರೆ ಕಾನೂನು ಕ್ರಮ ಎದುರಾಗಬಹುದೆಂಬ ಭೀತಿಯಿಂದ ಎಸಿಬಿ ರಚನೆ ಮಾಡಿಕೊಂಡಿದ್ದಾರೆ ಎಂದು ಆಪಾದಿಸಿದರು. ತಮ್ಮನ್ನು ಹಾಗೂ ಸಂಪುಟದ ಕೆಲ ಸಚಿವರು ಮತ್ತು ಶಾಸಕರನ್ನು ರಕ್ಷಿಸಿಕೊಳ್ಳುವ ದುರದ್ದೇಶದಿಂದಲೇ ಎಸಿಬಿ ರಚನೆಯಾಗಿದೆ. ವಿರೋಧ ಪಕ್ಷಗಳು, ಸಂಘ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದರೂ ಲೋಕಾಯುಕ್ತ ಸಂಸ್ಥೆಯಲ್ಲಿದ್ದ ಪ್ರಕರಣಗಳನ್ನು ಎಸಿಬಿಗೆ ವರ್ಗಾವಣೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದರು.

ದುರ್ದೈವ:

ರಾಜ್ಯದ 25 ಜಿಲ್ಲೆಗಳ 140ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿದ್ಯುತ್ ಸಮಸ್ಯೆ ಉಂಟಾಗಿದೆ. ಜನರು ಜೀವನಸಾಗಿಸುವುದೇ ದುಸ್ತರವಾಗಿದ್ದು, ಗುಳೇ ಹೋಗುತ್ತಿದ್ದಾರೆ. ಆದರೆ ಜನರ ಪರಿಸ್ಥಿತಿ ಮುಖ್ಯಮಂತ್ರಿ ಸೇರಿದಂತೆ ಅವರ ಸಂಪುಟದ ಸಚಿವರಿಗೆ ಅರ್ಥವಾಗದಿರುವುದು ದುರಂತ ಎಂದು ಬಿಎಸ್‌ವೈ ವ್ಯಂಗ್ಯವಾಡಿದರು. ಒಂದು ಕಡೆ ಕಾಂಗ್ರೆಸ್ ಪಕ್ಷದ ಮುಖಂಡರೇ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಹಾಗೂ ಕೆಲ ಸಚಿವರು ರಾಜ್ಯದಲ್ಲಿ ಭೀಕರ ಬರಗಾಲವಿಲ್ಲವೆಂದು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಹಣ ಪಡೆಯಲು ಮೀನಾಮೇಷ:

ರಾಜ್ಯದಲ್ಲಿ ಈ ಬಾರಿ ಭೀಕರ ಬರಗಾಲ ಆವರಿಸಿದೆ ಎಂದು ಕೇಂದ್ರದಿಂದ ಬಂದಿದ್ದ ಬರ ಅಧ್ಯಯನ ತಂಡ ವರದಿ ನೀಡಿದೆ. ಈ ವರದಿ ಅನುಸಾರವೇ ರಾಜ್ಯಕ್ಕೆ ಕೇಂದ್ರ ಸರ್ಕಾರ ಎರಡು ಕಂತಿನಲ್ಲಿ ಅನುದಾನವನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಅನುದಾನ ಕೊಡಲು ಮುಂದೆ ಬಂದರೆ ಮುಖ್ಯಮಂತ್ರಿ ಅದನ್ನು ಪಡೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಕೇವಲ ತಮ್ಮ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. ಮುಖ್ಯಮಂತ್ರಿ ಮತ್ತು ಅವರ ಸಚಿವರು ಕಾಟಾಚಾರಕ್ಕೆ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ. ಜನರಿಗೆ ಇದರಿಂದ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂದು ಕಿಡಿಕಾರಿದರು.

ಅನ್ನದಾತನ ಸಮಸ್ಯೆ ಆಲಿಸಿದ ಬಿಎಸ್‌ವೈ:

ಬೀದರ್ ಜಿಲ್ಲೆಯ ಬಾಲ್ಕಿ ,ಔರಾದ್ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ ಯಡಿಯೂರಪ್ಪ ಬರದಿಂದ ತತ್ತರಿಸಿರುವ ಅನ್ನದಾತನ ಸಂಕಷ್ಟಗಳನ್ನು ಅಲಿಸಿದರು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ವಿದ್ಯುತ್ ಸಮಸ್ಯೆಗಳ ಬಗ್ಗೆ ರೈತರಿಂದ ಬಿಎಸ್‌ವೈ ಮಾಹಿತಿ ಪಡೆದರು.

Write A Comment